Asianet Suvarna News Asianet Suvarna News

Mekedatu Politics: ಬೆಂಗ್ಳೂರಿಗೆ ಪಾದಯಾತ್ರೆ ಬಿಡಬೇಡಿ: ಬಿಜೆಪಿ

*   ಅಗತ್ಯ ಬಿದ್ದರೆ ಕಾಂಗ್ರೆಸ್ಸಿಗರನ್ನು ಬಂಧಿಸಿ
*   ಒಂದು ವೇಳೆ ಬಂದಲ್ಲಿ ದೊಡ್ಡ ಸ್ಫೋಟ
*   ರಾಜಕೀಯ ಬೆರೆಸಿ ಅಮಾಯಕರ ಪ್ರಾಣಹತ್ಯೆಗೆ ಕಾರಣವಾಗಬಾರದು 

Should be Prevent from Congress Padayatra Coming to Bengaluru Says BJP Leaders grg
Author
Bengaluru, First Published Jan 13, 2022, 6:50 AM IST

ಬೆಂಗಳೂರು(ಜ.13):  ನಗರದಲ್ಲಿ ಕೋವಿಡ್‌(Covid19) ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಪಾದಯಾತ್ರೆ(Congress Padayatra) ಬೆಂಗಳೂರಿಗೆ(Bengaluru) ಬಾರದಂತೆ ಸರ್ಕಾರ ತಡೆಯಬೇಕು. ಒಂದು ವೇಳೆ ಅಗತ್ಯ ಬಿದ್ದರೆ ಕಾಂಗ್ರೆಸ್ಸಿಗರನ್ನು ಬಂಧಿಸುವ ಕೆಲಸ ಮಾಡಬೇಕು ಎಂದು ನಗರದ ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ. ಬುಧವಾರ ಬಿಜೆಪಿ(BJP) ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಶಾಸಕರಾದ ಅರವಿಂದ್‌ ಲಿಂಬಾವಳಿ, ಸತೀಶ್‌ ರೆಡ್ಡಿ, ರವಿಸುಬ್ರಹ್ಮಣ್ಯ ಹಾಗೂ ಉದಯ ಗರುಡಾಚಾರ್‌ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಅರವಿಂದ್‌ ಲಿಂಬಾವಳಿ ಮಾತನಾಡಿ, ಬೆಂಗಳೂರಲ್ಲಿ ಒಮಿಕ್ರೋನ್‌(Omicron) ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಮಂಗಳವಾರ ಒಂದೇ ದಿನ 15 ಸಾವಿರ ಪ್ರಕರಣಗಳು ವರದಿಯಾಗಿವೆ. ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮೇಕೆದಾಟು(Mekedatu) ಜಾರಿ ವಿಚಾರದಲ್ಲಿ ಸರ್ಕಾರವು ಗರಿಷ್ಠ ಪ್ರಯತ್ನ ಮಾಡುತ್ತಿದೆ. ಇಂತಹ ಸಮಯದಲ್ಲಿ ಸಾವಿರಾರು ಜನ ಕಟ್ಟಿಕೊಂಡು ಬೆಂಗಳೂರಿಗೆ ನುಗ್ಗುವ ಕೆಲಸ ಮಾಡಬಾರದು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಯಾರೂ ಸಹ ಮೇಕೆದಾಟು ವಿರೋಧಿಗಳಲ್ಲ. ಮೇಕೆದಾಟುವಿಗಿಂತ ಪ್ರಸ್ತುತ ಕೋವಿಡ್‌ ತಡೆಯುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

Mekedatu Padayatra: ಪಾದಯಾತ್ರೆ ನಿರ್ಬಂಧಕ್ಕೆ ಸರ್ಕಾರದ ಅಧಿಕೃತ ಆದೇಶ, ರಾಮನಗರದಲ್ಲಿ ಬಂದೋಬಸ್ತ್!

ಕನ್ನಡದ(Kannada) ನೆಲ, ಜಲ, ಭಾಷೆ ವಿಚಾರದಲ್ಲಿ ಬಿಜೆಪಿ ಸದಾ ಬದ್ಧವಾಗಿಯೇ ನಿಂತಿದೆ. ಪಾದಯಾತ್ರೆ ವಿಚಾರದಲ್ಲಿ ಕಾಂಗ್ರೆಸ್‌ ತನ್ನ ಧೋರಣೆಯನ್ನು ಬದಲಿಸಬೇಕಿದೆ. ಬೆಂಗಳೂರಿನಲ್ಲಿ ರೆಡ್‌ ಅಲರ್ಟ್‌(Corona Red Alert) ಘೋಷಿಸಲಾಗಿದೆ. ದಯವಿಟ್ಟು ಪಾದಯಾತ್ರೆಯನ್ನು ಬೆಂಗಳೂರಿಗೆ ತರಬೇಡಿ. ಅನಿವಾರ್ಯವಾದರೆ ಇಬ್ಬರೇ ಪಾದಯಾತ್ರೆ ಮಾಡುವುದಾಗಿ ಹೇಳಿದ ಮುಖಂಡರು ನಡೆದುಕೊಳ್ಳುತ್ತಿರುವ ರೀತಿ ಇದೇನಾ ಎಂದು ವಾಗ್ದಾಳಿ ನಡೆಸಿದರು.

ಸತೀಶ್‌ ರೆಡ್ಡಿ ಮಾತನಾಡಿ, ಬೆಂಗಳೂರಿನ ಜನ ಪಾದಯಾತ್ರೆಯನ್ನು ವಿರೋ​ಧಿಸುತ್ತಾರೆ. ತಕ್ಷಣ ಪಾದಯಾತ್ರೆಯನ್ನು ನಿಲ್ಲಿಸದಿದ್ದರೆ ಪಾದಯಾತ್ರೆಗೆ ಪ್ರತಿರೋಧ ಒಡ್ಡಲಿದ್ದೇವೆ. ನಮಗೆ ಜನರ ಪ್ರಾಣ ಮುಖ್ಯವೇ ಹೊರತು ಪಾದಯಾತ್ರೆ, ಹೋರಾಟವಲ್ಲ. ಪಾದಯಾತ್ರೆ ನಿಲ್ಲಿಸದಿದ್ದರೆ ಜನರು ಕಾಂಗ್ರೆಸ್ಸನ್ನು ತಿರಸ್ಕರಿಸಲಿದ್ದಾರೆ. ಕಾಂಗ್ರೆಸ್‌ ಹೋರಾಟಕ್ಕೆ ನಮ್ಮ ಬೆಂಬಲ ಸಹ ಇದೆ. ಆದರೆ, ಉದ್ದೇಶ ಪೂರ್ವಕವಾಗಿ ಪಾದಯಾತ್ರೆ ಕೈಗೊಂಡು ಕೋವಿಡ್‌ ಸೋಂಕು ಹರಡಿಸುವುದು ಸರಿಯಲ್ಲ ಎಂದು ತಿಳಿಸಿದರು.

ರವಿ ಸುಬ್ರಹ್ಮಣ್ಯ ಮಾತನಾಡಿ, ಬೆಂಗಳೂರಿನ ಕುಡಿಯುವ ನೀರಿನ(Drinking Water) ವ್ಯವಸ್ಥೆ ಸರಿಯಾಗಿ ಜಾರಿಗೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ನಿರ್ಧಾರವೇ ಕಾರಣ. ಮೇಕೆದಾಟು ವಿಷಯದಲ್ಲಿ ಕೆಲವು ನ್ಯಾಯಾಲಯದಲ್ಲಿ(Court) ಮತ್ತು ಇನ್ನೂ ಕೆಲವು ಮಾತುಕತೆಯಲ್ಲಿ ಬಗೆಹರಿಯಬೇಕಾಗಿದೆ. ಕುಡಿಯುವ ನೀರಿಗೆ ರಾಜಕೀಯ(Politics) ಮಾಡುವುದು ಬೇಡ. ಪಕ್ಷಾತೀತವಾಗಿ ಎಲ್ಲರೂ ಹೋರಾಟ ಮಾಡೋಣ. ರಾಜಕೀಯ ಬೆರೆಸಿ ಅಮಾಯಕರ ಪ್ರಾಣಹತ್ಯೆಗೆ ಕಾರಣವಾಗಬಾರದು ಎಂದರು.

ಉದಯ ಗರುಡಾಚಾರ್‌ ಮಾತನಾಡಿ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರವು ನಗರದ ಮಧ್ಯಭಾಗದಲ್ಲಿದೆ. ದಿನಗೂಲಿಗಳು, ಗರಿಷ್ಠ ವ್ಯಾಪಾರಸ್ಥರು ಇರುವ ಮತ್ತು ಅಧಿ​ಕ ಪ್ರಮಾಣದ ಜನದಟ್ಟಣೆ ಇರುತ್ತದೆ. ದಯವಿಟ್ಟು ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ತರಬೇಡಿ. ಒಂದು ವೇಳೆ ಬಂದಲ್ಲಿ ದೊಡ್ಡ ಸ್ಫೋಟವಾಗಲಿದೆ ಎಂದು ಮನವಿ ಮಾಡಿದರು.

ಪಾದಯಾತ್ರೆ ನಿಲ್ಲಿಸಿ: ಸಿದ್ದು, ಡಿಕೆಶಿಗೆ ಎಸ್ಸೆಂ ಕೃಷ್ಣ ಪತ್ರ

ನಾಡಿನ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ನಿಮ್ಮ ಪಾದಯಾತ್ರೆಯನ್ನು ಮೊಟಕುಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ(SM Krishna) ಅವರು ಕಾಂಗ್ರೆಸ್‌ ನಾಯಕರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಕೃಷ್ಣ ಅವರು ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರಿಗೆ ಪತ್ರ ಬರೆದಿದ್ದಾರೆ.

Congress Padayatra 'ಮುಖ್ಯಮಂತ್ರಿ ಆಗುವ ದೃಷ್ಟಿಯಿಂದಲೇ ಡಿಕೆಶಿ ಪಾದಯಾತ್ರೆ'

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಇದೇ ಸಂದರ್ಭದಲ್ಲಿ ಮನುಕುಲಕ್ಕೆ ಗಂಡಾಂತರವಾಗಿ ಕಾಡುತ್ತಿರುವ ಕೋವಿಡ್‌ ವೈರಸ್‌ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ವಿವಿಧ ರೀತಿಯಲ್ಲಿ ರೂಪಾಂತರಗೊಂಡು ನಮ್ಮನ್ನು ಕಾಡುತ್ತಿದೆ. ಇದರ ಬೇನೆಯಿಂದ ಇಡೀ ಪ್ರಪಂಚ ನಲುಗಿ ಹೋಗಿದ್ದು ಹಲವು ಸಾವು ನೋವುಗಳು ಸಂಭವಿಸಿ ಅನಾಹುತ ಸೃಷ್ಟಿಸಿದೆ. ಬೆಂಗಳೂರು ವಿಶ್ವದ ನಗರಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದು, ಪ್ರಪಂಚದ ನಾನಾ ಮೂಲೆಗಳಿಂದ ಪ್ರತಿನಿತ್ಯ ಜನರು ಬಂದು ಹೋಗುತ್ತಿದ್ದಾರೆ. ಇದರ ಮಧ್ಯೆ ಕೊರೋನಾ ವೈರಸ್‌ ವೇಗವಾಗಿ ಹಬ್ಬುತ್ತಿದೆ. ಇಂಥ ಸಂದರ್ಭದಲ್ಲಿ ತಾವು ಕೈಗೊಂಡಿರುವ ಪಾದಯಾತ್ರೆ ಕೋವಿಡ್‌ ನಿಯಂತ್ರಣ ಕ್ರಮಗಳಿಗೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಒಪ್ಪಿಗೆ ಸೂಚಿಸಿರುವುದರಿಂದ ಹಾಗೂ ನಾಡಿನ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಪಾದಯಾತ್ರೆ ಮೊಟಕುಗೊಳಿಸಬೇಕೆಂದು ಕೋರುತ್ತೇನೆ ಎಂದು ಕೃಷ್ಣ ಅವರು ಪತ್ರದಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios