ಚಾರ್ಜ್‌ಶೀಟ್‌ಗೂ ಮುನ್ನ ವಿಪಕ್ಷ ನಾಯಕನ ನೇಮಿಸಿ: ಬಿಜೆಪಿಗೆ ಸಲೀಂ ಅಹಮದ್ ತಿರುಗೇಟು
ಸರ್ಕಾರ 100 ದಿನ ಆಡಳಿತ ಪೂರೈಸಿದ್ದು, ನುಡಿದಂತೆ ನಡೆದಿದ್ದೇವೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ‘ಶಕ್ತಿ’ ಯೋಜನೆಗೆ ಸಾಕಷ್ಟು ಪ್ರಶಂಸೆ ಬಂದಿದೆ. ಸರ್ಕಾರದ ಕಾರ್ಯಕ್ರಮ ನೋಡಿ ಬಿಜೆಪಿಯವರಿಗೆ ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಈಗಲೇ ಹೆದರಿಕೆ ಶುರುವಾಗಿದೆ: ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹಮದ್

ಬೆಂಗಳೂರು(ಆ.30): ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್ ಬಿಡುಗಡೆ ಮಾಡುವ ಮುನ್ನ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಿ ಎಂದು ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಬಿಜೆಪಿ ಸರ್ಕಾರದಲ್ಲಿನ ಹಗರಣಗಳ ಬಗ್ಗೆ ತನಿಖೆಗೆ ನೀಡಲಾಗಿದೆ. ತಪ್ಪು ಮಾಡಿಲ್ಲವೆಂದಾರೆ ಹೆದರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯ 40 ಪರ್ಸೆಂಟ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿತ್ತು. ಈಗ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಕೊಟ್ಟಿದ್ದೇವೆ. ಕೋವಿಡ್ ಹಗರಣದ ತನಿಖೆ ಸಹ ಆಗಲಿದೆ, ಭ್ರಷ್ಟಾಚಾರ ಕುರಿತು ನಮ್ಮದು ‘ಶೂನ್ಯ ಸಹಿಷ್ಣುತೆ’ ಸರ್ಕಾರವಾಗಿದೆ. ಅಧಿವೇಶನದಲ್ಲಿ ಚರ್ಚೆ ಮಾಡದೇ ಪಲಾಯನ ಮಾಡಿದರು. ಪ್ರತಿಪಕ್ಷ ನಾಯಕನಿಲ್ಲದೇ ಸದನದ ನಡೆಯಿತು. ತಮ್ಮ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ಪ್ರಸಂಗ ನೋಡಿರಲಿಲ್ಲ ಎಂದರು.
ನಾವು ಜನರಿಗೆ ಕೊಟ್ಟ ಮಾತಿನಂತೆ ನಡೆದಿದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್
20 ಸ್ಥಾನದಲ್ಲಿ ಗೆಲುವು:
ಸರ್ಕಾರ 100 ದಿನ ಆಡಳಿತ ಪೂರೈಸಿದ್ದು, ನುಡಿದಂತೆ ನಡೆದಿದ್ದೇವೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ‘ಶಕ್ತಿ’ ಯೋಜನೆಗೆ ಸಾಕಷ್ಟು ಪ್ರಶಂಸೆ ಬಂದಿದೆ. ಸರ್ಕಾರದ ಕಾರ್ಯಕ್ರಮ ನೋಡಿ ಬಿಜೆಪಿಯವರಿಗೆ ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಈಗಲೇ ಹೆದರಿಕೆ ಶುರುವಾಗಿದೆ. ಸರ್ಕಾರದ ಕಾರ್ಯಕ್ರಮವನ್ನು ಜನರು ಮೆಚ್ಚಿಕೊಂಡಿದ್ದು, ಲೋಕಸಭಾ ಚುನಾವಣೆಗಳಲ್ಲಿ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಾಯಕರ ಮಕ್ಕಳಿಗೆ ಟಿಕೆಟ್ ನೀಡುವ ಮಾತು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೆಹಲಿಯಲ್ಲಿ ಇತ್ತೀಚೆಗೆ ರಾಜ್ಯದ ಮುಖಂಡರನ್ನು ಕರೆಯಿಸಿ ಸಭೆ ನಡೆಸಿದ್ದಾರೆ. ಪ್ರತಿಯೊಂದು ಕ್ಷೇತ್ರಕ್ಕೆ ಒಬ್ಬ ಸಚಿವರನ್ನು ನೇಮಿಸಿದ್ದಾರೆ. ಆ ಸಚಿವರು ಹಾಗೂ ಮುಖಂಡರು ಕ್ಷೇತ್ರದಲ್ಲಿ ಸಭೆ ನಡೆಸಿ ಅವರು ಅರ್ಹ ಅಭ್ಯರ್ಥಿಗಳ ಪಟ್ಟಿಮಾಡಿ ನೀಡಲಿದ್ದಾರೆ. ಆ ಪಟ್ಟಿಆಧಾರದ ಮೇಲೆ ಟಿಕೆಟ್ ನೀಡಲಾಗುವುದು ಎಂದರು.
ನಾವಾಗಿಯೇ ಆಪರೇಷನ್ ಮಾಡಲ್ಲ:
ನಾವಾಗಿಯೇ ಆಪರೇಷನ್ ಹಸ್ತ ಮಾಡಲ್ಲ, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ. ಅಲ್ಲಿ ಉಸಿರುಕಟ್ಟುವ ವಾತಾವರಣ ಇದ್ದರೆ ಬರಲಿ. ಕೆಲವು ಮುಖಂಡರು ಪಕ್ಷ ಸೇರ್ಪಡೆ ಬಗ್ಗೆ ನಮ್ಮ ನಾಯಕರ ಜೊತೆ ಮಾತನಾಡಿದ್ದಾರೆ. ಅಂತಿಮ ತೀರ್ಮಾನವನ್ನು ವರಿಷ್ಠರು ತೆಗೆದುಕೊಳ್ಳುತ್ತಾರೆ ಎಂದು ಸಲೀಂ ಅಹಮದ್ ಹೇಳಿದರು.
ಚಂದ್ರಯಾನ ಚಂದ್ರನ ತಲುಪಿದರೂ ವಿಪಕ್ಷ ನಾಯಕ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಕಾರ್ಯಕರ್ತರಿಗೂ ಅವಕಾಶ:
ನಿಗಮ, ಮಂಡಳಿಗಳಿಗೆ ನೇಮಕ ಪ್ರಕ್ರಿಯೆ ಶುರುವಾಗಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಚರ್ಚೆ ಮಾಡಿದ್ದಾರೆ. ಕಾರ್ಯಕರ್ತರು ಹಾಗೂ ಮುಖಂಡರಿಗೆ ಅವಕಾಶ ಸಿಗಲಿದೆ ಎಂದು ಸಲೀಂ ಅಹಮದ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರದಲ್ಲಿ ಬಿಜೆಪಿ ಒಂಬತ್ತು ವರ್ಷ ಆಡಳಿತ ನಡೆಸಿದೆ. ಪ್ರಧಾನಿ ಕೊಟ್ಟಮಾತು ಉಳಿಸಿಕೊಂಡಿದ್ದಾರಾ? ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಾಕುವುದಾಗಿ ಹೇಳಿದ್ದರು. ಯಾರ ಖಾತೆಗೆ ಹಾಕಿದ್ದಾರೆ? ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತಂದಿದ್ದಾರಾ? ಬಿಜೆಪಿ ಯಾವ ಘನ ಕಾರ್ಯ ಮಾಡಿದೆ ಎಂದು ಜನರು ಮತ ಹಾಕಬೇಕು. ನಿಮ್ಮ ಸುಳ್ಳಿಗೆ ಜನ ಮತ ಹಾಕಬೇಕಾ? ಸುಳ್ಳಿಗೆ ಆಸ್ಕರ್ ಅವಾರ್ಡ್ ಇದ್ದರೆ ಅದನ್ನು ಪ್ರಧಾನಿ ಮೋದಿ ಅವರಿಗೆ ನೀಡಬೇಕು. ಇಲ್ಲಿವರೆಗೆ ಒಂದು ಪತ್ರಿಕಾಗೋಷ್ಠಿ ಮಾಡಲು ಪ್ರಧಾನ ಮಂತ್ರಿಗಳಿಗೆ ಆಗಲಿಲ್ಲ. ಕೇವಲ ‘ಮನ್ ಕೀ ಬಾತ್’ ಅಂತಿದ್ದಾರೆ ಎಂದು ಟೀಕಿಸಿದರು.