ಬಂಡಾಯವೆದ್ದಿರುವ ಕೆ.ಎಸ್. ಈಶ್ವರಪ್ಪ ನಮ್ಮ ಕಟ್ಟಾಳು; ಅರೆರೇ.. ನಳೀನ್ ಕುಮಾರ್ ಕಟೀಲ್ ಮಾತಿನ ಮರ್ಮವೇನು?
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯವಾಗಿ ಸ್ಪರ್ಧೆ ಮಾಡುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನಮ್ಮ ಕಟ್ಟಾಳು ಎಂದು ಟಿಕೆಟ್ ವಂಚಿತ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಉಡುಪಿ (ಏ.09): ರಾಜ್ಯದಲ್ಲಿ ಬಿಜೆಪಿ ಹಿಡಿತವಿರುವ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯವಾಗಿ ಸ್ಪರ್ಧೆ ಮಾಡುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನಮ್ಮ ಕಟ್ಟಾಳು ಎಂದು ಟಿಕೆಟ್ ವಂಚಿತ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ, ಅವರ ಮಾತಿನ ಮರ್ಮವೇನು ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮುನಿಸು ವಿಚಾರದ ಬಗ್ಗೆ ಮಾತನಾಡಿದ ಅವರು, ಈಶ್ವರಪ್ಪ ಅವರು ನಮ್ಮ ಕಟ್ಟಾಳು. ಇಡೀ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಕಾರಣರಾದವರು. ಸಹಜವಾಗಿಯೇ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹಿರಿಯರು ಅವರ ಜೊತೆ ಮಾತನಾಡುತ್ತಾರೆ. ಇದು ವಿಚಾರಧಾರೆಗಳ ನಡುವಿನ ಚುನಾವಣೆಯಾಗಿದೆ. ಇಲ್ಲಿ ಜಾತಿ ರಾಜಕೀಯ ಇಲ್ಲ. ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟವಾಗಿದೆ ಎಂದು ಹೇಳಿದರು.
ಬೆಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ.. ಕೇಂದ್ರದ ವಿರುದ್ಧ ತೊಡೆ ತಟ್ಟಿದ ಸಚಿವರಿಗೆ ಶಾಕ್ ಕೊಡಲು ತಂತ್ರ!
ದಿಂಗಾಲೇಶ್ವರ ಶ್ರೀಗಳ ವಿವಾದದ ಕುರಿತು ಮಾತನಾಡಿ, ಚುನಾವಣೆ ಬಂದಾಗ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ದಿಂಗಾಲೇಶ್ವರ ಸ್ವಾಮಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಇದರ ಲಾಭ ಪಡೆಯುತ್ತಿದೆ ಎಂದರೆ ಆ ಪಕ್ಷದ ವೈಫಲ್ಯತೆ ಕಾಣುತ್ತದೆ. ಅಭ್ಯರ್ಥಿ ಇಲ್ಲದ ಕಾರಣ ಇದ್ದಬದ್ದವರ ಕೈಕಾಲು ಹಿಡಿಯುವ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯವಾದ ಸ್ಥಿತಿಯಲ್ಲಿದೆ. ಅಧಿಕಾರ ಇದ್ದರೂ ಲೋಕಸಭಾ ಚುನಾವಣೆ ಗೆಲ್ಲಲು ಆಗುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲುತ್ತದೆ. ಹಾಗಾಗಿ, ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಸಿಗದೇ ಬಿಜೆಪಿಯಲ್ಲಿ ಇದ್ದ ಜಯಪ್ರಕಾಶ್ ಹೆಗಡೆಯನ್ನು ಕರೆದುಕೊಂಡರು ಎಂದು ಟೀಕೆ ಮಾಡಿದರು.
ರಾಜ್ಯದಲ್ಲಿ ಆಡಳಿತ ವೈಫಲ್ಯ ಆಗಿದೆ. ಅಭಿವೃದ್ಧಿ ಯೋಜನೆ ಇಲ್ಲದ ಭ್ರಷ್ಟಾಚಾರದ ಆಡಳಿತ ರಾಜ್ಯದಲ್ಲಿದೆ. ಯಾವ ಗುಂಪಿಗೆ ಎಷ್ಟು ಪಾಲು ಹಂಚಿಕೊಳ್ಳಬೇಕು ಎಂಬ ತಕರಾರು ಇದೆ. ಡಿ.ಕೆ. ಶಿವಕುಮಾರ್‌ಗೆ ಎಷ್ಟು ಸೀಟು? ಸಿದ್ದರಾಮಯ್ಯನಿಗೆ ಎಷ್ಟು ಸೀಟು ಅಂತ ಚರ್ಚೆ ನಡೆಯುತ್ತಿದೆ. ಯಾವ ಗುಂಪಿಗೆ ಎಷ್ಟು ಕೊಡಬೇಕು ಎಂಬ ಚರ್ಚೆ ಇದೆ. ಮುಳುಗುವವನಿಗೆ ಹುಲ್ಲು ಕಡ್ಡಿ ಸಾಕು ಎನ್ನುವಂತಹ ಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ಬೆಂಗಳೂರು ಉತ್ತರ ಕ್ಷೇತ್ರವನ್ನು ಅತಿ ಹೆಚ್ಚು ಮತದಲ್ಲಿ ಬಿಜೆಪಿ ಗೆಲ್ಲುತ್ತದೆ. ಎಲ್ಲ ನಾಯಕರು ಪ್ರಚಾರಕ್ಕೆ ಬರುತ್ತಾರೆ. ಪ್ರವಾಸಗಳ ಜೋಡಣೆಯಾಗುತ್ತಿದೆ ಎಂದು ತಿಳಿಸಿದರು.
ಮಂಡ್ಯದ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ನಟಿ ರಮ್ಯಾ, ರಾಹುಲ್‌ಗಾಂಧಿಯೂ ಬರ್ತಾರೆ; ಶಾಸಕ ರವಿಕುಮಾರ್ ಗಣಿಗ ಮಾಹಿತಿ
ಪ್ರಧಾನಿ ಮೋದಿ ಅವರು ಏಪ್ರಿಲ್ 14ಕ್ಕೆ ಮಂಗಳೂರಿಗೆ ಬರುತ್ತಾರೆ. ಸಂಜೆ 4 ಗಂಟೆಗೆ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾರೆ. ಗೋಲ್ಡ್ ಪಿಂಚ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಇಲ್ಲಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗುತ್ತಾರೆ. ಪ್ರಧಾನಿ ಕಾರ್ಯಕ್ರಮದಿಂದ ಕಾರ್ಯಕರ್ತರರಲ್ಲಿ ಉತ್ಸಾಹ ಬರಲಿದೆ. ಪ್ರಧಾನಿ ಎಲ್ಲ ಜಿಲ್ಲೆಗೆ ಬಂದು ಮತದಾರರಿಂದ ಆಶೀರ್ವಾದ ಪಡೆಯಬೇಕು ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು.