ತುಮಕೂರು ವಿಶ್ವವಿದ್ಯಾಲಯಕ್ಕೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು (ಆ.25): ತುಮಕೂರು ವಿಶ್ವವಿದ್ಯಾಲಯಕ್ಕೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬರುವ ಎಲ್ಲಾ ವರ್ಗದ ಸಹಸ್ರಾರು ಕುಟುಂಬಗಳಿಗೆ ನೆರವಾಗಿ ಉಚಿತ ಶಿಕ್ಷಣ, ವಸತಿ ಮತ್ತು ದಾಸೋಹ ಕಲ್ಪಿಸುವುದರೊಂದಿಗೆ, ಎಲ್ಲರೂ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸ್ವಾಮೀಜಿ ಕಾರಣೀಭೂತರಾಗಿದ್ದಾರೆ.

ಇಂತಹ ಶ್ರೇಷ್ಠ ಸಂತರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡುವುದರಿಂದ ಪೂಜ್ಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದ್ದಾರೆ. ತುಮಕೂರು ವಿಶ್ವವಿದ್ಯಾಲಯಕ್ಕೆ ‘ಪರಮಪೂಜ್ಯ ಡಾ. ಶಿವಕುಮಾರ ಮಹಾಸ್ವಾಮೀಜಿ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತುಮಕೂರು ಜಿಲ್ಲೆಯ ಮಹಾಜನತೆಯ ಪರವಾಗಿ ಮನವಿ ಮಾಡುತ್ತೇನೆ ಎಂದು ಪತ್ರದ ಮೂಲಕ ಸೋಮಣ್ಣ ಮನವಿ ಮಾಡಿದ್ದಾರೆ.

ಕೃಷಿಕರ ಸಮಗ್ರ ಅಭ್ಯುದಯಕ್ಕೆ ಕೇಂದ್ರ ಆದ್ಯತೆ: ಕೇಂದ್ರ ಸರ್ಕಾರ ದೇಶದ ಕೃಷಿಕರ ಸಮಗ್ರ ಅಭ್ಯುದಯವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದ್ದು, ನಿರಂತರವಾಗಿ ರೈತಸ್ನೇಹಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯ ಮೂಲಕ ಯಾವುದೇ ಮಧ್ಯವರ್ತಿ ಹಾಗೂ ಕಡಿತಗಳಿಲ್ಲದೆ ಸಂಪೂರ್ಣ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಮೂಲಕ ಪಾರದರ್ಶಕತೆಯನ್ನು ಉಳಿಸಿಕೊಂಡಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ ಎಂದು ತಿಳಿಸಿದರು.

ಪ್ರಮುಖ ಬೆಳೆಗಳಿಗೆ ಗರಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಿ ರೈತರ ಬೇಡಿಕೆಗಳಿಗೆ ಸ್ಪಂದಿಸಲಾಗಿದ್ದು, ಪ್ರದೇಶವಾರು ಪ್ರಮುಖ ಆಹಾರ ಮತ್ತು ವಾಣಿಜ್ಯ ಬೆಳೆಗಳನ್ನು ಈ ವ್ಯಾಪ್ತಿಗೆ ತರಲಾಗಿದೆ. ಕೃಷಿಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಸೆಯುವ ಮೂಲಕ ಅತ್ಯಾಧುನಿಕ ಆಲೋಚನೆಗಳನ್ನು ಜಾರಿಗೊಳಿಸಲಾಗಿದೆ. ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡಿ, ಆಹಾರ ಸ್ವಾವಲಂಬನೆಯನ್ನು ಸದೃಢಗೊಳಿಸಲಾಗಿದೆ. ರೈತರನ್ನು ಆರ್ಥಿಕವಾಗಿ ಸದೃಢರಾಗಿಸುವ ಉದ್ದೇಶದಿಂದ ಬೆಳೆಸಾಲ, ವಿಮೆ ಸೇರಿದಂತೆ ವಿವಿಧ ಸವಲತ್ತುಗಳನ್ನು ಸರಳೀಕರಣಗೊಳಿಸಲಾಗಿದೆ. ಕಳೆದ ಜುಲೈ ತಿಂಗಳ ಆರಂಭದಿಂದ ದೇಶಾದ್ಯಂತ ವಿಕಸಿತ ಕೃಷಿ ಅಭಿಯಾನ ಜಾರಿಯಲ್ಲಿದ್ದು, ಬ್ಯಾಂಕ್ ಗಳ ಅಧಿಕಾರಿಗಳು ರೈತರ ಮನೆಬಾಗಿಲಿಗೆ ಯೋಜನೆಗಳನ್ನು ತಲುಪಿಸುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20ನೇಯ ಕಂತಿನಲ್ಲಿ ದೇಶದ 9 ಕೋಟಿ 70 ಲಕ್ಷ ರೈತರು ಫಲಾನುಭವಿಗಳಾಗಿದ್ದು, 20 ಸಾವಿರದ 500 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಅರ್ಹ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. 21ನೇ ಶತಮಾನದಲ್ಲಿ ಭಾರತ ಎಲ್ಲ ರಂಗಗಳಲ್ಲಿ ತನ್ನ ಪ್ರಬಲ ಅಸ್ತಿತ್ವವನ್ನು ಪ್ರತಿಪಾದಿಸಿ, ವಿಕಸಿತ ಭಾರತವಾಗಿ ರೂಪುಗೊಳ್ಳುತ್ತಿರುವುದನ್ನು ಜಗತ್ತು ಕುತೂಹಲದಿಂದ ವೀಕ್ಷಿಸುತ್ತಿದೆ ಎಂದು ತಿಳಿಸಿದರು.