ಮುಂಬೈ[ನ.25]: ಮಹಾರಾಷ್ಟ್ರ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ, ಪಕ್ಷದ ವಿರುದ್ಧವೇ ಬಂಡೆದ್ದು ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿರುವ ಅಜಿತ್‌ ಪವಾರ್‌, ಈಗಲೂ ನಾನು ಎನ್‌ಸಿಯಲ್ಲೇ ಇದ್ದೇನೆ. ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರೇ ಈಗಲೂ ನಮ್ಮ ನಾಯಕ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆದರೆ ತಮ್ಮ ಮಾಜಿ ಶಿಷ್ಯನ ಈ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಶರದ್‌ ಪವಾರ್‌, ಇಂಥ ಹೇಳಿಕೆಗಳಲ್ಲಿ ಯಾವುದೇ ಹುರುಳಿಲ್ಲ, ಗೊಂದಲ ಸೃಷ್ಟಿಸಿ ಜನರ ದಿಕ್ಕು ತಪ್ಪಿಸಲು ಇಂಥ ಮಾತುಗಳನ್ನು ಆಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಸ್ಫೋಟಕ ಹೇಳಿಕೆ:

ಸರ್ಕಾರ ರಚನೆ ವಿವಾದ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಬೆನ್ನಲ್ಲೇ, ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಎನ್‌ಸಿಪಿ ಬಂಡಾಯ ನಾಯಕ ಅಜಿತ್‌ ಪವಾರ್‌, ‘‘ನಾನು ಎನ್‌ಸಿಪಿಯಲ್ಲೇ ಇದ್ದೇನೆ ಮತ್ತು ಎನ್‌ಸಿಪಿಯಲ್ಲೇ ಮುಂದುವರಿಯುತ್ತೇನೆ. ಶರದ್‌ ಸಾಹೇಬರೇ ನಮ್ಮ ನಾಯಕ. ಬಿಜೆಪಿ-ಎನ್‌ಸಿಪಿ ಮೈತ್ರಿ ಸರ್ಕಾರ ಮಹಾರಾಷ್ಟ್ರಕ್ಕೆ ಮುಂದಿನ 5 ವರ್ಷ ಸುಭದ್ರ ಸರ್ಕಾರ ನೀಡಲಿದ್ದು, ರಾಜ್ಯದ ಜನರ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸಲಿದೆ. ಮಹಾರಾಷ್ಟ್ರದ ಘಟನಾವಳಿಗಳ ಬಗ್ಗೆ ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ. ಎಲ್ಲವೂ ಸರಿಹೋಗಲಿದೆ. ಆದರೆ, ಸ್ವಲ್ಪ ತಾಳ್ಮೆ ವಹಿಸಿ. ನಿಮ್ಮೆಲ್ಲರ ಬೆಂಬಲಕ್ಕೆ ನನ್ನ ಕೃತಜ್ಞತೆಗಳು’ ಎಂದಿದ್ದರು.

2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಪವಾರ್ NDA ಅಭ್ಯರ್ಥಿ: RSS ಚಿಂತಕನ ಭವಿಷ್ಯ!

ಅಜಿತ್‌ರ ಈ ಹೇಳಿಕೆ ಭಾರೀ ರಾಜಕೀಯ ಕಂಪನ ಸೃಷ್ಟಿಸುತ್ತಲೇ ಪ್ರತಿಕ್ರಿಯಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ‘ಶಿವಸೇನೆ-ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮೈತ್ರಿ ಪಕ್ಷಗಳು ಸರ್ಕಾರ ರಚನೆಗೆ ಈಗಾಗಲೇ ನಿರ್ಧರಿಸಿದ್ದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಗುಡುಗಿದ್ದಾರೆ. ಅಜಿತ್‌ ಪವಾರ್‌ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಗೊಂದಲಗಳನ್ನು ಸೃಷ್ಟಿಸಿ ಜನರಲ್ಲಿ ತಪ್ಪು ಸಂದೇಶ ರವಾನಿಸುವುದು ಅವರ ಉದ್ದೇಶ’ ಎಂದು ಅಜಿತ್‌ ಪವಾರ್‌ಗೆ ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು