ರಾಜ್ಯದ ಪ್ರವಾಸೋದ್ಯಮವನ್ನು ಕೇರಳ ಮತ್ತು ಗೋವಾಕ್ಕೆ ಹೋಲಿಸಬಾರದು ಎಂದು ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ವಿಧಾನ ಪರಿಷತ್ತು (ಆ.23): ರಾಜ್ಯದಲ್ಲಿ ದೇಶಿಯ ಪ್ರವಾಸೋದ್ಯಮ ಎರಡು ಪಟ್ಟು ಬೆಳೆದಿದೆ. ಇದಕ್ಕೆ ಶಕ್ತಿ ಯೋಜನೆಯೂ ಇಂಬು ನೀಡಿದೆ. ಆದರೆ ರಾಜ್ಯದ ಪ್ರವಾಸೋದ್ಯಮವನ್ನು ಕೇರಳ ಮತ್ತು ಗೋವಾಕ್ಕೆ ಹೋಲಿಸಬಾರದು ಎಂದು ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ-2025 ಅನ್ನು ಮಂಡಿಸಿ ಅವರು ಮಾತನಾಡಿದರು.

ಗೋವಾ ಸೇರಿದಂತೆ ಇತರೆಡೆ ನೈಟ್ ಕ್ಲಬ್‌ಗಳು ಆದಾಯ ತರುತ್ತದೆ. ರಾಜ್ಯದ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಆದಾಯ ಬರುವುದಿಲ್ಲ. ಇಲ್ಲಿನ ದೇವಾಲಯದಲ್ಲಿ ಹುಂಡಿಗೆ ಜನ ಎಷ್ಟು ದುಡ್ಡು ಹಾಕುತ್ತಾರೋ ಅದೇ ಆದಾಯ. ಆದಾಗ್ಯೂ ನಾವು ನಮ್ಮ ಪ್ರವಾಸಿ ತಾಣಗಳಲ್ಲಿನ ಮೂಲ ಸೌಕರ್ಯಗಳಿಗೆ ಒತ್ತು ನೀಡಬೇಕಾಗುತ್ತದೆ ಎಂದು ಹೇಳಿದರು.

ಈ ವಿಧೇಯಕವು ಜಿಲ್ಲೆಗಳಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಮೇಲ್ಚಿಚರಣಾ ಸಮಿತಿಯನ್ನು ರಚಿಸಲು ಅವಕಾಶ ನೀಡುತ್ತದೆ. ಈ ಸಮಿತಿಯಲ್ಲಿ ಎಸ್‌ಪಿ, ಡಿಸಿಎಫ್, ಪುರಾತತ್ವ ಇಲಾಖೆಯ ಜಿಲ್ಲಾ ನಿರ್ದೇಶಕ, ಪಿಡಬ್ಲುಡಿ ಸೂಪರಿಟೆಂಡ್ ಎಂಜಿನಿಯರ್, ಸರ್ಕಾರ ನಾಮ ನಿರ್ದೇಶಿಸಿದ ಮೂವರು ಸದಸ್ಯರು, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮೂವರು ಸದಸ್ಯರು ಇರುತ್ತಾರೆ ಎಂದರು.

ಈ ಸಮಿತಿಯಲ್ಲಿ ಜನ ಪ್ರತಿನಿಧಿಗಳಿಗೂ ಅವಕಾಶ ನೀಡಿ ಎಂದು ಬಿಜೆಪಿ ಸದಸ್ಯ ಪಿ.ಎಚ್.ಪೂಜಾರ್ ಹೇಳಿದರು. ಇದನ್ನು ನಿರಾಕರಿಸಿದ ಸಚಿವರು, ಜನಪ್ರತಿನಿಧಿಗಳಿಗೂ ಅವಕಾಶ ನೀಡಿದರೆ ಇದು ಇನ್ನೊಂದು ಕೆಡಿಪಿ ಸಭೆಯಂತಾಗುತ್ತದೆ ಅಷ್ಟೇ ಎಂದರು. ಆ ನಂತರ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಕುರಿಗಾರಿಗಳ ಮೇಲಿನ ದೌರ್ಜನ್ಯ ತಡೆ ವಿಧೇಯಕ ಸೇರಿ 6 ಬಿಲ್‌ಗೆ ಅಂಗೀಕಾರ: ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ 2025, ಕರ್ನಾಟಕ ಸಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ ವಿಧೇಯಕ 2025 ಸೇರಿ ಆರು ವಿಧೇಯಕಗಳು ಅಂಗೀಕೃತಗೊಂಡವು. ಶುಕ್ರವಾರ ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿ ಪರಿಷತ್ತಿನಿಂದ ತಿರಸ್ಕೃತಗೊಂಡಿದ್ದ ಹಾಗೂ 2ನೇ ಬಾರಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ 2025 ಅನ್ನು ಪರಿಷತ್ತಿನಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಸೌಲಭ್ಯ ಮತ್ತು ನಿಯಂತ್ರಣ ತಿದ್ದುಪಡಿ, ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಕ್ಷೇಮಾಭಿವೃದ್ಧಿ ಮತ್ತು ದೌರ್ಜನ್ಯಗಳ ವಿರುದ್ಧ ವಿಧೇಯಕ, ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ, ಕರ್ನಾಟಕ ಲಿಫ್ಟ್‌ಗಳ, ಎಸ್ಕಲೇಟರ್‌ಗಳ ಮತ್ತು ಪ್ಯಾಸೆಂಜರ್‌ ಕನ್ವೇಯರ್‌ಗಳ ತಿದ್ದುಪಡಿ, ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕಗಳು ಅಂಗೀಕೃತವಾದವು.