ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತಂತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಇತ್ಯಾರ್ಥಗೊಳಿಸಲು ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ರಾಯಚೂರು (ಜೂ.22): ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತಂತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಇತ್ಯಾರ್ಥಗೊಳಿಸಲು ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಚಿವ ಎನ್.ಎಸ್.ಬೋಸರಾಜು ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಸುಮಾರು ವರ್ಷಗಳಿಂದ 12 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದರೂ ಕೇವಲ ಶೇ.7ರಷ್ಟು ತನಿಖೆಯಾಗುತ್ತಿವೆ. 7 ರಲ್ಲಿ ಶೇ. 2 ಅಂದರೆ, ಒಟ್ಟು ಪ್ರಕರಣದಲ್ಲಿ ಶೇ. 0.2 ತೀರ್ಪು ಬಂದಿವೆ.

ಈ ಎಲ್ಲ ಪ್ರಕರಣಗಳ ತಾರ್ಕಿಕ ಅಂತ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 7 ಪುಟಗಳ ಪತ್ರ ಬರೆಯಲಾಗಿದೆ. ಸಿಬಿಐಗೆ 9 ಪ್ರಕರಣ ವಹಿಸಲಾಗಿದೆ. ಅದರಲ್ಲಿ 3 ಪ್ರಕರಣ ಬಿಟ್ಟು 6 ಪ್ರಕರಣ ನಾವು ಮಾಡಲ್ಲ ಅಂತ ಕಳುಹಿಸಿದ್ದಾರೆ. ಎಸ್ಐಟಿನಲ್ಲಿ ಬಹುಭಾಗ ಪ್ರಕರಣಗಳು ತನಿಖೆಯಾಗಿಲ್ಲ. ಅಕ್ರಮ ಗಣಿಗಾರಿಕೆಯಿಂದ ರಾಜ್ಯದ 1.40 ಲಕ್ಷ ಕೋಟಿ ಹಾನಿಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಎಂಗೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು. ರಾಜ್ಯದ ಜನರ ಹಿತದೃಷ್ಠಿತಿಂದ ಸೇವೆ ಆಗಬೇಕು. ನಮ್ಮ ಸರ್ಕಾರಕ್ಕೆ ಒಳ್ಳೆಯ ಹೆಸರು ಬೇಕು ಅನ್ನೋ ಕಾರಣಕ್ಕೆ ಪತ್ರ ಬರೆದಿದ್ದೇನೆ. ಸಿಎಂಗೆ ಈಗಾಗಲೇ ಪತ್ರ ತೋರಿಸಿದ್ದೇನೆ ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಮಾತನಾಡುವಂತಿಲ್ಲ: ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಯಾರೂ ಮಾತನಾಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಹೇಳಿದ್ದು, ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಚ್‌. ವಿಶ್ವನಾಥ ಸಿಎಂ ಬದಲಾವಣೆ ಕುರಿತು ಪ್ರಶ್ನೆಗೆ ಉತ್ತಿರಿಸಿದ ಸಚಿವರು, ಅವರು ನಮ್ಮ ಪಕ್ಷದವರಲ್ಲ. ಅವರೇಕೆ ಸಿಎಂ ಬದಲಾವಣೆ ಕುರಿತು ಮಾತನಾಡುತ್ತಾರೆ ಎಂದು ಮರುಪ್ರಶ್ನಿಸಿದರು. ಈ ಕುರಿತಂತೆ ಯಾರೇ ಹೇಳಿಕೆ ನೀಡಿದರೂ ನಾನು ಪ್ರತಿಕ್ರಿಯಿಸಲ್ಲ ಎಂದು ಸ್ಪಷ್ಟಪಡಿಸಿದರು. ನೀವು ಮುಖ್ಯಮಂತ್ರಿ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ನೀವು ಏನೇ ಕೇಳಿದರೂ ನಾನು ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದನ್ನೇ ಹೇಳುತ್ತೇನೆ ಎಂದರು.

ನಮ್ಮದು ಜಾತಿಗಣತಿ ಅಲ್ಲ: ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಿದ್ದು, ರಾಜ್ಯ ಸರ್ಕಾರ ಮಾಡುವ ಅಗತ್ಯವಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆಂಬ ಪ್ರಶ್ನೆಗೆ, ನಾವು ಮಾಡುತ್ತಿರುವುದು ಜಾತಿಗಣತಿಯಲ್ಲ. ಅದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನವಾಗಿದೆ. ಇದನ್ನು ಬಿಜೆಪಿಗರು ಅರ್ಥ ಮಾಡಿಕೊಳ್ಳುತ್ತಿಲ್ಲ. ಇದನ್ನೇ ಕೇಂದ್ರ ಸರ್ಕಾರದಿಂದ ಮಾಡಿಸಿ ಎಂದರೆ ಒಪ್ಪಲಿಲ್ಲವೇಕೆ? ಎಂದರು.