ಪ್ರತ್ಯೇಕ ರಾಷ್ಟ್ರ ಹೇಳಿಕೆ: ಸಂಸದ ಡಿ ಕೆ ಸುರೇಶ್‌ಗೆ ಕಾನೂನು ಸಂಕಷ್ಟ; ದೂರು ದಾಖಲಿಸಿದ ಬಿಜೆಪಿ ಮುಖಂಡ
ಪ್ರತ್ಯೇಕ ರಾಷ್ಟ್ರ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರ ವಿರುದ್ಧ ದಕ್ಷಿಣ ಕನ್ನಡದ ಬಿಜೆಪಿ ಮುಖಂಡರೊಬ್ಬರು ಶುಕ್ರವಾರ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದು, ಸೆಕ್ಷನ್ 124 ಎ ಅಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಂಗಳೂರು (ಫೆ.3): ಪ್ರತ್ಯೇಕ ರಾಷ್ಟ್ರ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರ ವಿರುದ್ಧ ದಕ್ಷಿಣ ಕನ್ನಡದ ಬಿಜೆಪಿ ಮುಖಂಡರೊಬ್ಬರು ಶುಕ್ರವಾರ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದು, ಸೆಕ್ಷನ್ 124 ಎ ಅಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬಂಟ್ವಾಳದ ಬಿಜೆಪಿ ಮುಖಂಡ ವಿಕಾಸ್ ಪಿ ಅವರು ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮತ್ತು ಮಂಗಳೂರು ಉತ್ತರ ಪೊಲೀಸರಿಗೆ ದೂರು ಸಲ್ಲಿಸಿದ್ದು, ಕಾಂಗ್ರೆಸ್ ಸಂಸದನ ಹೇಳಿಕೆಯಿಂದ ತನ್ನ ಭಾವನೆಗಳಿಗೆ ಧಕ್ಕೆಯಾಗಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ (ದೇಶದ್ರೋಹ) ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಕಾಸ್ ಪಿ, ಸಂಸದ ಡಿ.ಕೆ.ಸುರೇಶ್ ದೇಶವಿರೋಧಿ ಹೇಳಿಕೆ ನೀಡಿದ್ದು, ಸಂಸದರಾಗಿದ್ದರೂ ಭಾರತವನ್ನು ವಿಭಜಿಸಲು ಷಡ್ಯಂತ್ರ ಮಾಡಿದ್ದಾರೆ. ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇನೆ. ಅಲ್ಲದೆ ಕಾಂಗ್ರೆಸ್ ಸಂಸದನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಠಾಣಾಧಿಕಾರಿಯವರಿಗೆ ಆದೇಶಿಸುವಂತೆ ಕೋರ್ಟ್ ಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ ಕಾಂಗ್ರೆಸ್!
ಡಿ.ಕೆ.ಸುರೇಶ್ ಅವರು ದೇಶವನ್ನು ವಿಭಜಿಸಲು ಪ್ರತ್ಯೇಕತಾವಾದಿ ಶಕ್ತಿಗಳನ್ನು ಪ್ರಚೋದಿಸುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 7 ರಂದು ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸಿದ ನಂತರ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರು, ಕೇಂದ್ರ ಸರ್ಕಾರ, ನಮ್ಮ ತೆರಿಗೆ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ಹಂಚುತ್ತಿದೆ. ಹೆಚ್ಚಿನ ತೆರಿಗೆ ಕಟ್ಟುವ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಹೀಗೆ ಮುಂದುವರೆದರೆ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಸಂಸದ ಸ್ಥಾನದಲ್ಲಿ ಮುಂದುವರೆಯುವ ಹಕ್ಕು ಡಿಕೆ ಸುರೇಶ್‌ಗೆ ಇಲ್ಲ: ಲೋಕಸಭೆ ಸ್ಪೀಕರ್ ಗೆ ದೂರು