ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಪ್ರತ್ಯೇಕ ಆಯೋಗ ರಚಿಸುವ ಸಂಬಂಧ ಕಾನೂನು ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು. ಈ ಸಂಬಂಧ ಸರ್ಕಾರ ಸಕಾರಾತ್ಮಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 

ಬೆಂಗಳೂರು (ಜು.29): ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಪ್ರತ್ಯೇಕ ಆಯೋಗ ರಚಿಸುವ ಸಂಬಂಧ ಕಾನೂನು ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು. ಈ ಸಂಬಂಧ ಸರ್ಕಾರ ಸಕಾರಾತ್ಮಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಶುಕ್ರವಾರ ರಾಜ್ಯದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಮತ್ತು ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಸಂಘಟನೆಗಳ ಸಮನ್ವಯ ಸಮಿತಿಯ ರಾಜ್ಯ ಮುಖಂಡರೊಂದಿಗೆ ಅಲೆಮಾರಿ ಜನರ ಕುಂದುಕೊರತೆಗಳ ಕುರಿತು ನಡೆದ ಸಭೆಯಲ್ಲಿ ಮುಖಂಡರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಸ್ಸಿ, ಎಸ್ಟಿಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಅಲೆಮಾರಿ ಜನಾಂಗಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಇವರಿಗೆ ವಿಶೇಷವಾಗಿ ವಸತಿ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಪರಿಶೀಲಿಸಲಾಗುವುದು. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು. ಇದು ನಮ್ಮ ಸರ್ಕಾರದ ಆದ್ಯತೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Shivamogga: ಕುವೆಂಪು ವಿವಿ ನೂತನ ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ನೇಮಕ

ಅಲೆಮಾರಿಗಳ ಮನವಿ ಏನು?: ಅಲೆಮಾರಿ ಸಮಾಜದಡಿ ಒಟ್ಟು 120 ಜಾತಿಗಳಿವೆ. ಈ ಪೈಕಿ ಎಸ್‌ಸಿ 51, ಎಸ್‌ ಟಿ 23 ಹಾಗೂ ಹಿಂದುಳಿದ ವರ್ಗದ 46 ಜಾತಿಗಳಿವೆ. ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ, ಅಸ್ಮಿತೆ ಇಲ್ಲದ ಸಮುದಾಯಗಳನ್ನು ಮೊದಲು ಸರ್ಕಾರದಿಂದ ಗುರುತಿಸಿ ಕನಿಷ್ಠ ಸೌಲಭ್ಯಗಳು ದೊರಕಿಸಿಕೊಡಬೇಕು. ಇದಕ್ಕಾಗಿ ತಬ್ಬಲಿ ಸಮುದಾಯಗಳನ್ನು ಬೆಳೆಸಲು ಪ್ರತ್ಯೇಕ ಆಯೋಗ ರಚಿಸಬೇಕು. ಅಲೆಮಾರಿಗಳು ಸಮಾಜದ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಜಾತಿ ಪ್ರಮಾಣಪತ್ರ ಕೂಡ ಇವರಿಗಿಲ್ಲ. 

ಸರ್ಕಾರ ಕೆಲವು ಜಾತಿಗಳನ್ನು ಮಾತ್ರ ಗುರುತಿಸಿದ್ದು, ಎಲ್ಲರನ್ನೂ ಗುರುತಿಸುವ ಕೆಲಸಮಾಡಬೇಕು. ಆಗಸ್ಟ್‌ 31ರಂದು ರಾಷ್ಟ್ರೀಯ ಅಲೆಮಾರಿ ವಿಮುಕ್ತ ದಿನಾಚರಣೆಯನ್ನು ರಾಜ್ಯ ಸರ್ಕಾರ ಆಚರಿಸಬೇಕು. ಜೋಗಿ, ಪಿಚ್ಚಗುಂಟಲು ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡಿದೆ. ಅವುಗಳನ್ನು ಸೂಕ್ತ ಜಾತಿಗೆ ಸೇರಿಸಿ ಮೀಸಲಾತಿ ಕಲ್ಪಿಸಬೇಕು, ಅಲೆಮಾರಿ ಸಮುದಾಯಕ್ಕೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಸಮಿತಿಯ ಮುಖಂಡರು ಮನವಿ ಮಾಡಿದರು. ಹಲವು ಜಾತಿಗಳು ಬಹು ಹೆಸರುಗಳಿಂದ ಗುರುತಿಸಲ್ಪಡುವುದರಿಂದ ಜಾತಿ ಪ್ರಮಾಣ ಪತ್ರ ದೊರೆಯುತ್ತಿಲ್ಲ. 

ಕೊಡಗಿನ 44 ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆ: ಭಾರತೀಯ ಭೂವಿಜ್ಞಾನ ವರದಿಯಲ್ಲೇನಿದೆ?

ಇನ್ನು ಅಗೋಚರ ಸಮುದಾಯಗಳು ಪ್ರಾತಿನಿಧ್ಯವಿಲ್ಲದೆ ಇದ್ದಾರೆ. ಅವರಿಗೆ ಗುರುತು ಸಿಕ್ಕರೆ, ಶಿಕ್ಷಣ, ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು. ಸಭೆಯಲ್ಲಿ ಸಚಿವ ಭೈರತಿ ಸುರೇಶ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಅನಿಲ್‌ ಕುಮಾರ್‌, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಪತ್ರಕರ್ತ ಇಂದೂಧರ ಹೊನ್ನಾಪುರ, ಹಂಪಿ ಕನ್ನಡ ವಿ.ವಿ ಪ್ರಾಧ್ಯಾಪಕರಾದ ಡಾ. ಮೇತ್ರಿ, ಲೀಲಾ ಸಂಪಿಗೆ ಮತ್ತಿತರರು ಉಪಸ್ಥಿತರಿದ್ದರು.