ತಮ್ಮ ಬಗ್ಗೆ ನಿರ್ಲಕ್ಷ್ಯಧೋರಣೆ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದ ಶಾಸಕರು, ‘ಕೆಲ ಸಚಿವರು ಎದುರು ಸಿಕ್ಕರೂ ಮಾತನಾಡದೇ ಹೋಗುತ್ತಾರೆ. ಬಲವಂತವಾಗಿ ಮಾತನಾಡಿಸಿದರೆ ನಮ್ಮ ವಿರುದ್ಧ ಏಕವಚನ ಪ್ರಯೋಗ ಮಾಡುತ್ತಾರೆ. ಇದನ್ನು ಸಹಿಸಿಕೊಳ್ಳಲು ಹೇಗೆ ಸಾಧ್ಯ? ಈ ರೀತಿಯ ವರ್ತನೆ ತೋರಲು ಈ ಸಚಿವರೇನು ದೇವಲೋಕದಿಂದ ಇಳಿದುಬಂದಿದ್ದಾರೆಯೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖವೇ ಪ್ರಶ್ನಿಸಿದರು ಎನ್ನಲಾಗಿದೆ.

ಬೆಂಗಳೂರು(ಜು.30): ಹಿರಿಯ ಶಾಸಕರ ವಿರುದ್ಧ ಜೂನಿಯರ್‌ ಸಚಿವರು ಏಕವಚನ ಪದಬಳಕೆ ಮಾಡಿದರು ಎನ್ನಲಾದ ವಿಚಾರ ಇತ್ತೀಚೆಗೆ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಗೊಂಡು ತೀವ್ರ ಮಾತಿನ ಚಕಮಕಿಗೆ ಕಾರಣವಾದ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಬಗ್ಗೆ ನಿರ್ಲಕ್ಷ್ಯಧೋರಣೆ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದ ಶಾಸಕರು, ‘ಕೆಲ ಸಚಿವರು ಎದುರು ಸಿಕ್ಕರೂ ಮಾತನಾಡದೇ ಹೋಗುತ್ತಾರೆ. ಬಲವಂತವಾಗಿ ಮಾತನಾಡಿಸಿದರೆ ನಮ್ಮ ವಿರುದ್ಧ ಏಕವಚನ ಪ್ರಯೋಗ ಮಾಡುತ್ತಾರೆ. ಇದನ್ನು ಸಹಿಸಿಕೊಳ್ಳಲು ಹೇಗೆ ಸಾಧ್ಯ? ಈ ರೀತಿಯ ವರ್ತನೆ ತೋರಲು ಈ ಸಚಿವರೇನು ದೇವಲೋಕದಿಂದ ಇಳಿದುಬಂದಿದ್ದಾರೆಯೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖವೇ ಪ್ರಶ್ನಿಸಿದರು ಎನ್ನಲಾಗಿದೆ.

ಬಿಜೆಪಿಯವರಿಂದ ನಕಲಿ ಪತ್ರ ಸೃಷ್ಟಿ: ಸಚಿವ ಪ್ರಿಯಾಂಕ್‌ ಖರ್ಗೆ

ವಿಷಯ ಪ್ರಸ್ತಾಪಿಸಿದ ಬಿ.ಆರ್‌.ಪಾಟೀಲ್‌, ಅಪ್ಪಾಜಿ ನಾಡಗೌಡ ಅವರಂತಹ ಹಿರಿಯ ಶಾಸಕರು, ‘ನಾವು ಶಾಸಕರಾಗಿರುವುದಕ್ಕೆ ಇವರು ಸಚಿವರಾಗಿರುವುದು. ಪರಿಸ್ಥಿತಿ ಹೀಗಿರುವಾಗ ಕ್ಷೇತ್ರದ ಕೆಲಸಕ್ಕೆ ಸಂಬಂಧಿಸಿದಂತೆ ಭೇಟಿ ಮಾಡಿದಾಗ ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಪತ್ರವನ್ನು ನೀಡಿದರೆ ನಮ್ಮ ಮುಂದೆಯೇ ಆ ಪತ್ರವನ್ನು ಬದಿಗಿಡುತ್ತಾರೆ. ನಮ್ಮ ಮುಂದೆ ಸಣ್ಣ ಹುಡುಗರಾಗಿರುವ ಈ ಸಚಿವರು ಅಗೌರವದಿಂದ ಮಾತನಾಡಿದರೆ ಹೇಗೆ ಎಂದು ಸದರಿ ಸಚಿವರ ಹೆಸರನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿಯವರಿಗೆ ದೂರಿದರು ಎನ್ನಲಾಗಿದೆ.

ಕೃಷ್ಣ ಬೈರೇಗೌಡ, ದಿನೇಶ್‌ ವಿರುದ್ಧ ಕಿಡಿ:

ಮುಖ್ಯವಾಗಿ ಕೃಷ್ಣಬೈರೇಗೌಡ, ದಿನೇಶ್‌ ಗುಂಡೂರಾವ್‌ ಅವರ ವಿರುದ್ಧ ಹಲವು ಆರೋಪ ಮಾಡಿದ ಕೆಲ ಶಾಸಕರು ಇಂತಹ ದುರ್ವರ್ತನೆ ತೋರದಂತೆ ಸಚಿವರಿಗೆ ತಾಕೀತು ಮಾಡಬೇಕು ಎಂದು ಒತ್ತಾಯಿಸಿದರು ಎನ್ನಲಾಗಿದೆ. ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ವರ್ಗಾವಣೆಗಳಲ್ಲಿ ಶಾಸಕರ ಶಿಫಾರಸು ಪತ್ರಗಳಿಗೆ ಬೆಲೆ ಸಿಗುತ್ತಿಲ್ಲ. ಸದರಿ ಇಲಾಖೆಗಳಲ್ಲಿ ಇರುವ ವ್ಯವಸ್ಥೆ ಸೂಚಿಸಿದಂತೆ ವರ್ಗಾವಣೆಗಳು ನಡೆಯುತ್ತಿವೆ. ಇದನ್ನು ಪ್ರಶ್ನಿಸಿದರೆ ಗೌರವಯುತ ಉತ್ತರವೂ ದೊರೆಯುತ್ತಿಲ್ಲ ಎಂದು ಶಾಸಕರು ದೂರಿದರು ಎನ್ನಲಾಗಿದೆ.

ಇನ್ನು ಕಂಪ್ಲಿ ಗಣೇಶ್‌ ಮೊದಲಾದ ಕಿರಿಯ ಶಾಸಕರು ಕೆ.ಜೆ.ಜಾಜ್‌ರ್‍ರಂತಹ ಕೆಲ ಹಿರಿಯ ಸಚಿವರು ನಮ್ಮ ಕ್ಷೇತ್ರದ ಕೆಲಸಗಳ ಬಗ್ಗೆ ಸಂಪರ್ಕಿಸಿದರೆ ಕ್ಯಾರೆ ಎನ್ನುವುದಿಲ್ಲ ಎಂದು ಜಾಜ್‌ರ್‍ ಅವರ ಹೆಸರು ಉಲ್ಲೇಖಿಸಿಯೇ ಸಭೆಯಲ್ಲಿ ದೂರಿದರು ಎನ್ನಲಾಗಿದೆ.

ಒಂದು ಪತ್ರ ಕಾಂಗ್ರೆಸ್ ಸಭೆಗೆ ಕಾರಣವಾಯ್ತು.. ಶಾಸಕರ ಬೇಡಿಕೆಗೆ ಸಿಎಂ ಅಸ್ತು!

ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಸಚಿವರ ವಿರುದ್ಧ ಶಾಸಕರು ಈ ರೀತಿ ನೇರಾನೇರ ಆರೋಪ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ನಿರ್ದಿಷ್ಟವಾಗಿ ಕೆಲ ಸಚಿವರನ್ನು ಉದ್ದೇಶಿಸಿ ಶಾಸಕರೊಂದಿಗೆ ಉತ್ತಮವಾಗಿ ವರ್ತಿಸಬೇಕು. ಶಾಸಕರಿಂದಾಗಿಯೇ ನೀವು ಸಚಿವರಾಗಿರುವುದು ಹಾಗೂ ನಾನು ಮುಖ್ಯಮಂತ್ರಿಯಾಗಿರುವುದು. ಹಿರಿಯ ಶಾಸಕರಿಗೆ ಹಾಗೂ ಅವರ ವಯಸ್ಸಿಗೆ ಗೌರವ ನೀಡಿ’ ಎಂದು ಸೂಚಿಸಿದರು ಎನ್ನಲಾಗಿದೆ.

ಹಿರಿಯರ ಕಿಡಿ

- ಕೃಷ್ಣಬೈರೇಗೌಡ, ದಿನೇಶ್‌ ಗುಂಡೂರಾವ್‌ ಬಗ್ಗೆ ಆಕ್ಷೇಪ
- ಇವರೇನು ದೇವಲೋಕದಿಂದ ಇಳಿದು ಬಂದ ಸಚಿವರೆ?
- ನೇರವಾಗಿ ದೂಷಿಸಿದ ಬಿ.ಆರ್‌.ಪಾಟೀಲ್‌, ನಾಡಗೌಡ
- ಸಚಿವ ಜಾಜ್‌ರ್‍ ಬಗ್ಗೆ ಕಿರಿಯ ಶಾಸಕ ಗಣೇಶ್‌ ದೂರು
- ಇನ್ನುಮುಂದೆ ಹೀಗೆ ವರ್ತಿಸಬೇಡಿ: ಸಿಎಂ ಸಿದ್ದು ಸೂಚನೆ