ಇನ್ನೂ ಐದು ವರ್ಷ ಏನು ಮಾಡುತ್ತಾರೆ. ಕರ್ನಾಟಕ ಪ್ರವಾಸೋದ್ಯಮ ಚೆನ್ನಾಗಿ ಮಾಡಿದ್ದೇವೆ. ವಿದೇಶವನ್ನೂ ನೋಡಲಿ, ಕರ್ನಾಟಕವೂ ಸುತ್ತಲಿ. ಅವರ ಪ್ರವಾಸಗಳಿಗೆ ನಮ್ಮ ತಕರಾರಿಲ್ಲ ಎಂದು ವ್ಯಂಗ್ಯವಾಡಿದ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು(ಜು.29): ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವ ಶಾಸಕರೂ ಅಸಮಾಧಾನ ತೋಡಿಕೊಂಡಿಲ್ಲ. ವರ್ಗಾವಣೆಯನ್ನು ನಿಯಮಗಳಂತೆ ಮಾಡಬೇಕು... ಮಾಡಲಾಗುತ್ತಿದೆ. ಅವಧಿ ಪೂರ್ವ ವರ್ಗಾವಣೆಗಳಿದ್ದರೆ ಅದು ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟಿರುತ್ತದೆ. ಇದರಲ್ಲಿ ಎಲ್ಲರನ್ನೂ ಸಮಾಧಾನಪಡಿಸಲು ಆಗುವುದಿಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಸಭೆಯಲ್ಲಿ ಶಾಸಕರ ಪತ್ರದ ಬಗ್ಗೆಯೂ ಚರ್ಚೆಯಾಗಿದೆ. ನಕಲಿ, ಅಸಲಿ ಪತ್ರದ ಬಗ್ಗೆ ಚರ್ಚೆಯಾಗಿದೆ. ಅಸಲಿ ಪತ್ರದಲ್ಲಿ ಶಾಸಕಾಂಗ ಸಭೆ ಕರೆಯಿರಿ ಎಂದು ಮಾತ್ರ ಬರೆಯಲಾಗಿದೆ. ಬಿಜೆಪಿಯವರು ನಕಲಿ ಪತ್ರಗಳನ್ನು ಸೃಷ್ಟಿಮಾಡಿದ್ದಾರೆ. ಸಮೀಕ್ಷೆಯಲ್ಲಿ ಸರ್ಕಾರಕ್ಕೆ ಬಂದಿರುವ ಜನಪ್ರಿಯತೆ ಸಹಿಸಲಾಗದೆ ಇಂತಹ ಕೃತ್ಯಗಳಿಗೆ ಇಳಿದಿದ್ದಾರೆ ಎಂದು ಟೀಕಿಸಿದರು.
ಪಿಡಿಒಗಳು ಶೀಘ್ರ ಮಾತೃ ಇಲಾಖೆಗೆ ವಾಪಸ್: ಸಚಿವ ಪ್ರಿಯಾಂಕ್ ಖರ್ಗೆ
ಎಚ್.ಡಿ. ಕುಮಾರಸ್ವಾಮಿ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಐದು ವರ್ಷ ಏನು ಮಾಡುತ್ತಾರೆ. ಕರ್ನಾಟಕ ಪ್ರವಾಸೋದ್ಯಮ ಚೆನ್ನಾಗಿ ಮಾಡಿದ್ದೇವೆ. ವಿದೇಶವನ್ನೂ ನೋಡಲಿ, ಕರ್ನಾಟಕವೂ ಸುತ್ತಲಿ. ಅವರ ಪ್ರವಾಸಗಳಿಗೆ ನಮ್ಮ ತಕರಾರಿಲ್ಲ ಎಂದು ವ್ಯಂಗ್ಯವಾಡಿದರು.
ಡಾ.ಅಶ್ವತ್ಥ ಈಗ ಎಲ್ಲಿ?: ಪ್ರಿಯಾಂಕ್ ವ್ಯಂಗ್ಯ
ಮಣಿಪುರ ಘಟನೆ ಬಗ್ಗೆ ತುಟಿ ಬಿಚ್ಚದ ಬಿಜೆಪಿಯವರು ಉಡುಪಿ ವಿಚಾರದಲ್ಲಿ ಕ್ರಾಂತಿಕಾರಿಗಳಂತೆ ಹೋರಾಟಕ್ಕೆ ಹೋಗಿದ್ದರು. ಅವರ ಪಕ್ಷದವರೇ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಈಗ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಎಲ್ಲಿ ಹೋದರು? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
