ಎಡಪಂಥೀಯರನ್ನು ಓಲೈಸುವ ಸಲುವಾಗಿ ರಾಜ್ಯ ಸರ್ಕಾರ ಈಗ ಶಾಲಾ ಪಠ್ಯ ಬದಲಿಸಲು ಹೊರಟಿದೆ. ಗುಲಾಮಿತನದ ಮಾನಸಿಕತೆಯನ್ನು ಮಕ್ಕಳ ಮೇಲೆ ಹೇರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

ಶಿರಸಿ (ಜೂ.13) ಎಡಪಂಥೀಯರನ್ನು ಓಲೈಸುವ ಸಲುವಾಗಿ ರಾಜ್ಯ ಸರ್ಕಾರ ಈಗ ಶಾಲಾ ಪಠ್ಯ ಬದಲಿಸಲು ಹೊರಟಿದೆ. ಗುಲಾಮಿತನದ ಮಾನಸಿಕತೆಯನ್ನು ಮಕ್ಕಳ ಮೇಲೆ ಹೇರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶಾಲೆಗಳಿಗೆ ಪುಸ್ತಕ ವಿತರಣೆ ಆಗಿದೆ. ಶಾಲೆಗಳು ಆರಂಭಗೊಂಡಿವೆ. ಅನಗತ್ಯವಾಗಿ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದೆ. ದೇಶದ ನೈಜ ಸ್ಥಿತಿ ತಿಳಿಸುವ ಪಠ್ಯವನ್ನು ತೆಗೆಯಲು ಕಾಂಗ್ರೆಸ್‌ ಯೋಚಿಸುತ್ತಿದೆ. ಸಿದ್ದರಾಮಯ್ಯ ಎಡಪಂಥೀಯ ವಿಚಾರಧಾರೆಯ ಕೈಗೊಂಬೆ ಆಗಿ ವರ್ತಿಸುತ್ತಿದ್ದಾರೆ. ಇದರ ಪರಿಣಾಮ ಪಠ್ಯ ಬದಲಾವಣೆಯ ತರಾತುರಿ ಕಾಣಿಸುತ್ತಿದೆ. ಈಗ ಶೈಕ್ಷಣಿಕ ವರ್ಷ ಆರಂಭ ಆಗಿ ಪುಸ್ತಕ ಪೂರೈಕೆ ಆದ ಮೇಲೆ ವಿದ್ಯಾರ್ಥಿಗಳಿಗೆ ಗೊಂದಲ ಮಾಡಬೇಡಿ. ಎಡಪಂಥೀಯರ ಓಲೈಕೆಗೆ ಶಿಕ್ಷಣ ಕ್ಷೇತ್ರಕ್ಕೆ ತೊಂದರೆ ಮಾಡಬೇಡಿ ಎಂದರು.

ಪಠ್ಯ​ಪು​ಸ್ತಕ ಪರಿ​ಷ್ಕ​ರ​ಣೆ: ಕಾಂಗ್ರೆಸ್‌ ವಿರುದ್ಧ ರಾಜೀವ್‌ ಚಂದ್ರಶೇಖರ್‌ ತೀವ್ರ ಆಕ್ರೋ​ಶ

ಪಠ್ಯ ಬದಲಾವಣೆಗೂ ಇತಿ ಮಿತಿಗಳಿವೆ. ವಿವಿಧ ಹಂತದ ಚರ್ಚೆ ನಡೆದು ಬದಲಾವಣೆ ಮಾಡುವ ಪದ್ಧತಿ ಇದೆ. ಈ ಹಿಂದೆ 2013ರಲ್ಲಿ ಸಹ ಸಿದ್ದರಾಮಯ್ಯ ಇದೇ ರೀತಿ ವರ್ತಿಸಿ, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರಾಷ್ಟ್ರೀಯತೆ ವಿಚಾರ ಬದಿಗಿಟ್ಟು ಪಠ್ಯ ರಚನೆಗೆ ಮುಂದಾಗಿತ್ತು. ಪಠ್ಯದಲ್ಲಿ ತಪ್ಪಿಲ್ಲದಿದ್ದರೂ ಕೆಲವರು ಬರೆದಿದ್ದಾರೆ ಎಂಬ ಕಾರಣಕ್ಕೆ ಬದಲಾಯಿಸುತ್ತಿದ್ದಾರೆ. ಇತಿಹಾಸಕ್ಕೆ ಹತ್ತಾರು ಮುಖಗಳಿವೆ. ಭಾರತೀಯ ದೃಷ್ಟಿಕೋನದ ಇತಿಹಾಸವನ್ನು ನಾವು ಮಕ್ಕಳಿಗೆ ನೀಡಬೇಕೇ ಹೊರತೂ ಬ್ರಿಟೀಷರ ಅಥವಾ ಮೊಘಲರ ದೃಷ್ಟಿಕೋನದಿಂದ ಮಕ್ಕಳಿಗೆ ನೀಡಬಾರದು. ಗುಲಾಮಿತನದ ಮಾನಸಿಕತೆಯ ಶಿಕ್ಷಣಕ್ಕೆ ಮತ್ತೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಈ ರೀತಿ ಗೊಂದಲ ಮಾಡಿ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಎಡಪಂಥೀಯರ ಓಲೈಕೆಗೆ ಮಾಡುತ್ತಿರುವ ಯತ್ನ ಖಂಡನಾರ್ಹ ಎಂದರು.

ದ್ವೇಷ ರಾಜಕಾರಣದ ಮನೋಸ್ಥಿತಿ ಕಾಂಗ್ರೆಸ್ಸಿನಲ್ಲಿ ಕಾಣುತ್ತಿದೆ. ಬಿಜೆಪಿಯ ಹರೀಶ ಪುಂಜಾ, ಅಶ್ವತ್ಥ ನಾರಾಯಣ ಅವರ ಮೇಲೆ ಕೇಸ್‌ ಹಾಕುತ್ತಿದ್ದಾರೆ. ಉಪಮುಖ್ಯಮಂತ್ರಿಯಿಂದಲೇ ಈ ದ್ವೇಷ ರಾಜಕಾರಣ ಬರುವಂತಾದರೆ ವ್ಯವಸ್ಥೆ ಅಪಾಯಕಾರಿ ದಿಕ್ಕಿಗೆ ಹೋಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕಾಂಗ್ರೆಸ್‌ ಆಡಳಿತದ ಬಗ್ಗೆ ರಾಜ್ಯದ ಜನತೆಯ ನಿರೀಕ್ಷೆ ಹುಸಿಯಾಗುತ್ತಿದೆ. ಆಡಳಿತ ಗೊಂದಲದ ಗೂಡಾಗಿದೆ. ಸಚಿವರು ಅವರ ಖಾತೆ ಬದಲು ಗೊಂದಲದ ಭಾಗವಾಗುತ್ತಿದ್ದಾರೆ. ಗ್ಯಾರಂಟಿ ಗೊಂದಲದಿಂದಾಗಿ ಆಯಾ ಸಚಿವರಿಗೆ ತಮ್ಮ ಕಾಮಗಾರಿ ಮಾಡಲಾಗುತ್ತಿಲ್ಲ. ಗೊಂದಲ ಮಾಡುವುದು, ಜನತೆಯ ಮರೆಮಾಚಿಸುವುದು ಕಾಂಗ್ರೆಸ್ಸಿಗೆ ಮೊದಲಿನಿಂದಲೂ ರೂಢಿ ಎಂದು ಟೀಕಿಸಿದರು.

ಈಗಿನ ಸರ್ಕಾರ ಹಿಂದಿನ ಸರ್ಕಾರದ ಎಲ್ಲ ಅಭಿವೃದ್ಧಿಗೆ ತಡೆಯೊಡ್ಡುತ್ತಿದೆ. ಕಾಮಗಾರಿ ಮುಂದುವರಿಸದಿದ್ದರೆ ಅಭಿವೃದ್ಧಿ ಕಾರ್ಯಗಳು ನಿಂತುಹೋಗಲಿವೆ. ಗ್ಯಾರಂಟಿ ಜಾರಿಯ ಗೊಂದಲ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಚುನಾವಣೆ ಪೂರ್ವ ಭರವಸೆ ನೀಡಿ ಗೆದ್ದಾಯ್ತು, ಈಗ ಏನು ಬೇಕಿದ್ರೂ ಮಾಡಬಹುದು ಎಂಬ ಕಾಂಗ್ರೆಸ್‌ ಮನೋಭಾವನೆ ಜನತೆಗೆ ಮಾಡುತ್ತಿರುವ ಮೋಸ. ಮೋಸ ಮಾಡುವುದು ಕಾಂಗ್ರೆಸ್ಸಿಗೆ ರಕ್ತಗತವಾಗಿದ್ದು, ಮುಂದೆ ಕಾಂಗ್ರೆಸ್ಸಿನವರೇ ಅನುಭವಿಸಬೇಕಾಗಿದೆ ಎಂದರು.

ಹೆಡ್ಗೇವಾರ್‌ರಂತ ಹೇಡಿಗಳನ್ನು ಪಠ್ಯದಲ್ಲಿರಲು ಬಿಡಲ್ಲ: ಬಿ.ಕೆ.ಹರಿಪ್ರಸಾದ್‌

ಪ್ರಮುಖರಾದ ಮಾರುತಿ ನಾಯ್ಕ, ಉಷಾ ಹೆಗಡೆ, ನರಸಿಂಹ ಹೆಗಡೆ, ರಾಜೇಶ ಶೆಟ್ಟಿಇತರರಿದ್ದರು.

ಕಾಗೇರಿ ಅಭಿವೃದ್ಧಿ ಮಾಡಿಲ್ಲ ಎಂದು ಜನತೆ ತನ್ನನ್ನು ಆರಿಸಿದ್ದಾರೆ ಎಂದು ಭೀಮಣ್ಣ ನಾಯ್ಕ ಹೇಳುತ್ತಿದ್ದಾರೆ. ಅವರು ನಾನು ಮಂಜೂರು ಮಾಡಿದ ಕಾಮಗಾರಿ ಪೂರ್ಣಗೊಳಿಸಬೇಕು. ನನಗಿಂತಲೂ ಹೆಚ್ಚಿನ ಕೆಲಸ ಮಾಡಿ ತೋರಿಸಲಿ.

ವಿಶ್ವೇಶ್ವರ ಹೆಗಡೆ, ಕಾಗೇರಿ ವಿಧಾನಸಭೆ ಮಾಜಿ ಅಧ್ಯಕ್ಷ