ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಕ್ಕಿಲ್ಲ ಎಂದು ಜೆಡಿಎಸ್ ಸೇರ್ಪಡೆಗೊಂಡ ಸವಿತಾ ಬಾಯಿ ನಾಯಕ್‌ಗೆ ಈ ಬಾರಿಯ ಚುನಾವಣೆಯ ಜಂಪಿಂಗ್ ಸ್ಟಾರ್ ಆಗಿ ಗಮನಸೆಳೆದಿದ್ದಾರೆ. ಕಾರಣ ಜೆಡಿಎಸ್ ಸೇರಿದ 2 ದಿನಕ್ಕೆ ಹೊರಬಂದಿದ್ದಾರೆ. 

ದಾವಣಗೆರೆ(ಏ.16): ಕರ್ನಾಟಕ ರಾಜಕಾರಣದಲ್ಲಿ ಟಿಕೆಟ್ ಬಡಿದಾಟ ಜೋರಾಗುತ್ತಿದೆ. ಪಕ್ಷ, ಸಿದ್ಧಾಂತ, ಸೇವೆ, ದೇಶ ಕೇವಲ ಮಾತಿಗಷ್ಟೇ ಸೀಮಿತವಾಗಿದೆ. ಟಿಕೆಟ್ ಸಿಗದ ಹಲವು ಸಜ್ಜನ ರಾಜಕಾರಣಿಗಳು ಪಕ್ಷ ತೊರೆದು ಮತ್ತೊಂದು ಪಾರ್ಟಿ ಸೇರಿಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸದ್ಯ ಜಂಪಿಂಗ್ ಸ್ಟಾರ್ ಪಟ್ಟ ಮಾಯಕೊಂಡ ಕ್ಷೇತ್ರದ ನಾಯಕಿ ಸವಿತಾ ಬಾಯಿ ನಾಯಕ್ ಪಾಲಾಗಿದೆ. ಕಾಂಗ್ರೆಸ್ ಟಿಕೆಟ್ ನೀಡಿಲ್ಲ ಎಂದು ಅಸಮಾಧಾನಗೊಂಡ ಸವಿತಾ ಬಾಯಿ ನಾಯಕ್, ಜೆಡಿಎಸ್ ಸೇರಿಕೊಂಡಿದ್ದರು. ಇದೀಗ ಜೆಡಿಎಸ್‌ನಿಂದಲೂ ಟಿಕೆಟ್ ಸಿಕ್ಕಿಲ್ಲ. ಹೀಗಾಗಿ ಪಕ್ಷ ಸೇರಿದ ಬೆನ್ನಲ್ಲೇ ಹೊರಬಂದಿದ್ದಾರೆ. ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಕಳೆದ ಶುಕ್ರವಾರ ಸವಿತಾ ಬಾಯಿ ನಾಯಕ್ ಜೆಡಿಎಸ್ ಪಕ್ಷ ಸೇರಿಕೊಂಡಿದ್ದರು. ಜೆಪಿ ಭವನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾರಿ ಉತ್ಸಾಹದೊಂದಿಗೆ ಜೆಡಿಎಸ್ ಸೇರಿಕೊಂಡಿದ್ದರು. ಇತ್ತ ಜೆಡಿಎಸ್ ಮಾಯಕೊಂಡ ಕ್ಷೇತ್ರದಲ್ಲಿ ಆನಂದಪ್ಪಗೆ ಟಿಕೆಟ್ ಘೋಷಿಸಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಸವಿತಾ ಬಾಯಿಗೆ ತೀವ್ರ ಹಿನ್ನಡೆಯಾಗಿದೆ. ಇದರಿಂದ ಬೇಸತ್ತ ಸವಿತಾ ಬಾಯಿ ನಾಯಕ್ ಇದೀಗ ಜೆಡಿಎಸ್ ಪಕ್ಷಕ್ಕೂ ರಾಜೀನಾಮೆ ನೀಡಿದ್ದಾರೆ.

ನನಗೆ ಟಿಕೆಟ್ ಯಾಕಿಲ್ಲ? ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಜಗದೀಶ್ ಶೆಟ್ಟರ್ ಭಾವುಕ!

ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸವಿತಾ ಬಾಯಿ ತೆರಮೆರೆಯಲ್ಲಿ ಬಾರಿ ಕಸರತ್ತು ನಡೆಸಿದ್ದರು. ಆದರೆ ಕಾಂಗ್ರೆಸ್ ಕೆ.ಎಸ್‌.ಬಸವಂತಪ್ಪಗೆ ಟಿಕೆಟ್ ಘೋಷಿಸಿತ್ತು. ಇದರ ಬೆನ್ನಲ್ಲೇ ಸವಿತಾ ಬಾಯಿ ಬಂಡಾಯವೆದ್ದಿದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್‌.ಬಸವಂತಪ್ಪ ಗಂಭೀರ ಆರೋಪ ಮಾಡುವ ಮೂಲಕ ತನ್ನ ಚಾರಿತ್ಯವಧೆಗೆ ಯತ್ನಿಸುತ್ತಿದ್ದಾರೆ ಎಂದು ಸವಿತಾ ಬಾಯಿ ಆರೋಪ ಮಾಡಿದ್ದರು. ಬಳಿಕ ಕಾಂಗ್ರೆಸ್ ತೊರೆದಿದ್ದರು.

ತಮ್ಮ ಚಾರಿತ್ರ್ಯವಧೆಗೆ ಪ್ರಯತ್ನಿಸಿದವರ ವಿರುದ್ಧ ಸಂಬಂಧಿಸಿದ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಿದ್ದು, ತಮ್ಮ ಜನಸೇವೆಗೆ ಭಂಗ ತರಲು ಪ್ರಯತ್ನಿಸಿದವರಿಗೆ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ನನ್ನ ನಡೆ ಏನೆಂಬುದನ್ನು ನನ್ನ ಕ್ಷೇತ್ರದ ಜನರು ಸೂಚಿಸಿದ್ದಾರೆ. ಅದರಂತೆ ಕ್ಷೇತ್ರದ ಜನರ ಸೇವೆಗಾಗಿ ಚುನಾವಣೆಗೆ ಸ್ಪರ್ಧಿಸುವೆ. ಅಧಿಕಾರಕ್ಕಾಗಿ ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡಿಲ್ಲ. ಕಳೆದ ಮೂರೂವರೆ ವರ್ಷದಿಂದ ಕ್ಷೇತ್ರದ ಜನರ ಮನೆ ಮಗಳಾಗಿ ಕೆಲಸ ಮಾಡಿದ್ದೀರಿ. ಹಾಗಾಗಿ ನೀವು ಸ್ಪರ್ಧೆ ಮಾಡಿ, ನಾವು ನಿಮ್ಮೊಂದಿಗಿದ್ದು, ಬೆಂಬಲಿಸುತ್ತೇವೆನ್ನುತ್ತಿದ್ದಾರೆ ಎಂದು ಸವಿತಾ ಬಾಯಿ ಹೇಳಿದ್ದಾರೆ.

ಕೈ ತಪ್ಪಿದ ಬಿಜೆಪಿ ಚನ್ನಗಿರಿ ಟಿಕೆಟ್, ಪಕ್ಷೇತರವಾಗಿ ಸ್ಪರ್ಧಿಸುವ ಘೊಷಣೆ ಮಾಡಿದ ಮಾಡಾಳ್!

ಬಡ ಕುಟುಂಬದಿಂದ ಬಂದ ತಮಗೆ ಗೌರವವೇ ಮುಖ್ಯ. ಆದರೆ, ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಸ್‌.ಬಸವಂತಪ್ಪ ರಾಜಕೀಯಕ್ಕಾಗಿ ನನ್ನ ಚಾರಿತ್ರ್ಯಹರಣ ಮಾಡಿ, ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ನಾನು ಸಾಕಷ್ಟುನೊಂದಿದ್ದು, ನನ್ನ ತಾಯಿ 2 ಸಲ ಆತ್ಮಹತ್ಯೆಗೆ ಪ್ರಯತ್ನಿಸಿದರು. ಇದು ನನ್ನ ವೈವಾಹಿಕ ಜೀವನದ ಮೇಲೂ ಸಾಕಷ್ಟುಪರಿಣಾಮ ಬೀರಿದೆ ಎಂದು ಕಣ್ಣೀರು ಹಾಕಿದ್ದರು.