Asianet Suvarna News Asianet Suvarna News

ಪೊಲಿಟಿಕಲ್ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್ ಭೇಟಿಯಾದ ಸವದತ್ತಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ..!

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೂಡ ಭರ್ಜರಿ ತಯಾರಿಯನ್ನ ನಡೆಸಿದ ಸೌರವ್ ಚೋಪ್ರಾ. ಇವರ ನಡೆ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. 

Savadatti Congress Ticket Aspirant Sourav Chopra Met Prashant Kishor grg
Author
First Published Mar 30, 2023, 12:28 PM IST

ಬೆಳಗಾವಿ(ಮಾ.30):  ಪೊಲಿಟಿಕಲ್ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್ ಅವರನ್ನ ಜಿಲ್ಲೆಯ ಸವದತ್ತಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸೌರವ್ ಚೋಪ್ರಾ ಭೇಟಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಸೌರವ್ ಚೋಪ್ರಾ ಅವರು ಕಳೆದ ಕೆಲ ದಿನಗಳ ಹಿಂದೆ ಪ್ರಶಾಂತ್ ಕಿಶೋರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಚುನಾವಣೆ ತಂತ್ರಗಾರಿಕೆ ಸಂಬಂಧ ಪ್ರಶಾಂತ್ ಕಿಶೋರ್ ಜೊತೆ ‌ಸೌರವ್ ಚೋಪ್ರಾ ಚರ್ಚೆ ನಡೆಸಿದ್ದಾರೆ. ಪ್ರಶಾಂತ್ ಕಿಶೋರ್ ಚುನಾವಣೆ ಕಾರ್ಯತಂತ್ರದಲ್ಲಿ ‌ನಿಪುಣರಾಗಿದ್ದಾರೆ. ಹೀಗಾಗಿ ಪ್ರಶಾಂತ್ ಕಿಶೋರ್ ಅವರನ್ನ ‌ಸೌರವ್ ಚೋಪ್ರಾ ಭೇಟಿಯಾಗಿದ್ದಾರೆ. 

ಪ್ರಶಾಂತ್ ಕಿಶೋರ್ ಜೊತೆ ಸೌರವ್ ಚೋಪ್ರಾ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಸೌರವ್ ಚೋಪ್ರಾ ತಂದೆ ದಿ.ಆನಂದ ಚೋಪ್ರಾ ಕಾಂಗ್ರೆಸ್ ಮುಖಂಡರಾಗಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದಕ್ಕೆ ದಿ.ಆನಂದ ಚೋಪ್ರಾ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧಿಸಿದ್ದರು. 

ಚುನಾವಣೆಗೆ ದಿನಾಂಕ ನಿಗದಿ ಬೆನ್ನಲ್ಲೇ ಆರಂಭಗೊಂಡ ರಾಜಕೀಯ ಕಸರತ್ತು

ದಿ.ಆನಂದ ಚೋಪ್ರಾ ಅವರು 2018ರಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ವಿಶ್ವಾಸ ವೈದ್ಯಗಿಂತ ಹೆಚ್ಚು ಮತ ಪಡೆದಿದ್ದರು.  ಆನಂದ ಛೋಪ್ರಾ ಎರಡು ವರ್ಷಗಳ ಹಿಂದೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಆನಂದ ಚೋಪ್ರಾ ನಿಧನ ಬಳಿಕ ಕ್ಷೇತ್ರದಲ್ಲಿ ಸೌರವ್ ಚೋಪ್ರಾ ಫುಲ್ ಆ್ಯಕ್ಟೀವ್ ಆಗಿದ್ದಾರೆ. 

ಸವದತ್ತಿ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಸೌರವ್ ಚೋಪ್ರಾ ತಂದೆಯ ಅನುಕಂಪದ ಅಲೆಯಲ್ಲಿ ಈ ಬಾರಿಯ ಚುನಾವಣೆ ಅಖಾಡಕ್ಕೆ ಧುಮಕಿದ್ದಾರೆ. ಈಗಾಗಲೇ ಆನಂದ ರಥ ಹೆಸರಲ್ಲಿ ಸವದತ್ತಿ  ಕ್ಷೇತ್ರದಲ್ಲಿ ಸೌರವ್ ಚೋಪ್ರಾ ಬಸ್ ಯಾತ್ರೆ ಕೈಗೊಂಡಿದ್ದಾರೆ. 

ಸವದತ್ತಿ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಿ ಜನರ ವಿಶ್ವಾಸ ಪಡೆಯಲು ಸೌರವ್ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಸೌರವ್ ಚೋಪ್ರಾ, ವಿಶ್ವಾಸ ವೈದ್ಯ, ಪಂಚನಗೌಡ ದ್ಯಾಮನಗೌಡರ ಮಧ್ಯೆ ಕಾಂಗ್ರೆಸ್ ಟಿಕೆಟ್ ಫೈಟ್ ಆರಂಭವಾಗಿದೆ. 

ರಾಜ್ಯ ರಾಜಕೀಯಕ್ಕೆ ಬೆಳಗಾವಿಯೇ ನಿರ್ಣಾಯಕ

ಒಂದು ವೇಳೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೂಡ ಸೌರವ್ ಚೋಪ್ರಾ ಭರ್ಜರಿ ತಯಾರಿಯನ್ನ ನಡೆಸಿದ್ದಾರೆ ಅಂತ ತಿಳಿದು ಬಂದಿದೆ. ಸೌರವ್ ಚೋಪ್ರಾ ನಡೆ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios