Asianet Suvarna News Asianet Suvarna News

ರಾಜ್ಯ ರಾಜಕೀಯಕ್ಕೆ ಬೆಳಗಾವಿಯೇ ನಿರ್ಣಾಯಕ

ರಾಜ್ಯ ರಾಜಕೀಯವನ್ನು ಬೆಳಗಾವಿ ಜಿಲ್ಲೆಯ ರಾಜಕೀಯವೇ ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಮಿಕವಾಗಿ ಹೇಳಿದರು.

Belgaum is crucial for state politics snr
Author
First Published Mar 29, 2023, 7:40 AM IST

  ಗೋಕಾಕ :  ರಾಜ್ಯ ರಾಜಕೀಯವನ್ನು ಬೆಳಗಾವಿ ಜಿಲ್ಲೆಯ ರಾಜಕೀಯವೇ ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಮಿಕವಾಗಿ ಹೇಳಿದರು.

ಗೋಕಾಕ್‌ನ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಂಗಳವಾರ, ಗೋಕಾಕ ಮತ್ತು ಅರಬಾವಿ ವಿಧಾನಸಭೆ ಕ್ಷೇತ್ರದ  2.753 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಬೆಳಗಾವಿ ಜಿಲ್ಲೆ ಇಡೀ ರಾಜ್ಯದ ರಾಜಕೀಯವನ್ನೇ ತಿರುವು-ಮುರುವು ಮಾಡಿಬಿಡಬಹುದು. ಅಷ್ಟರ ಮಟ್ಟಿಗೆ ಸಶಕ್ತವಾಗಿದೆ ಇಲ್ಲಿಯ ರಾಜಕಾರಣ ಎಂದ ಸಿಎಂ, ಈ ದೊಡ್ಡ ಜಿಲ್ಲೆಯಲ್ಲಿ 18 ವಿಧಾನಸಭೆ ಕ್ಷೇತ್ರಗಳಿದ್ದು, ಎಲ್ಲ ಕ್ಷೇತ್ರಗಳಲ್ಲೂ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಈ ಬಾರಿ ಶಾಸಕ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರಿಗೆ 50 ಸಾವಿರಕ್ಕಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಿದರೆ ಮಾತ್ರ ಈ ಇಬ್ಬರೂ ಸಹೋದರರ ಅಭಿವೃದ್ಧಿ ಕಾರ್ಯಗಳಿಗೆ ಬೆಲೆ ನೀಡಿದಂತಾಗುತ್ತದೆ. ಜಾರಕಿಹೊಳಿ ಮನೆತನದೊಂದಿಗೆ ನನ್ನ ಆತ್ಮೀಯ ಸಂಬಂಧವಿದೆ. ಶಾಸಕ ರಮೇಶ ಜಾರಕಿಹೊಳಿ ಪ್ರಯತ್ನದ ಫಲವಾಗಿ ಇಂದು ಘಟ್ಟಿಬಸವಣ್ಣ ಡ್ಯಾಂ ನಿರ್ಮಿಸಿ 4 ಟಿಎಂಸಿ ನೀರು ನಿಲ್ಲಿಸುವ ಮಹತ್ಕಾರ್ಯ ನಡೆದಿದೆ. ಎಂಥ ಬರಗಾಲ ಬಂದರೂ ಗೋಕಾಕ ಮತ್ತು ಅರಬಾವಿ ಶಾಶ್ವತ ನೀರಾವರಿ ಕ್ಷೇತ್ರಗಳಾಗಲಿವೆ ಎಂದು ಹೇಳಿದರು.

ಸಮಗ್ರ ಅಭಿವೃದ್ಧಿ:

ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ನಮ್ಮ ಸರ್ಕಾರ ರೈತರು, ಮಹಿಳೆಯರು, ದುರ್ಬಲರ ಏಳ್ಗೆಗಾಗಿ ಸಾಕಷ್ಟುಪ್ರಗತಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಬೆಳಗಾವಿ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳಿಗಾಗಿ . 5500 ಕೋಟಿ ಒದಗಿಸಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಚಾಲನೆ ನೀಡಿದೆ. ಆರೋಗ್ಯ, ಶಿಕ್ಷಣ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದರು.

ಆರ್ಥಿಕ ಸ್ಥಿತಿ ಸುಧಾರಣೆ:

ಕೋವಿಡ್‌ ಮತ್ತು ಪ್ರವಾಹದಂತಹ ಜಟೀಲ ಸಮಸ್ಯೆಗಳನ್ನು ಬಿಜೆಪಿ ಸರ್ಕಾರ ಎದುರಿಸಿದ್ದು, ಸಮರ್ಥವಾಗಿ ನಿಭಾಯಿಸಿದೆ. ಸದ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಶಾಸಕ ರಮೇಶ ಜಾರಕಿಹೊಳಿ ಅಧ್ಯಕ್ಷೆ ವಹಿಸಿ ಮಾತನಾಡಿ, ಕಾಂಗ್ರೆಸ್‌, ಜೆಡಿಎಸ್‌ ತಮ್ಮದೇ ಸಿದ್ಧಾಂತ ಹೊಂದಿವೆ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ-ದೇವೇಗೌಡರ ಜೋಡಿ ಇದ್ದರೆ, ಕಾಂಗ್ರೆಸ್‌ನಲ್ಲಿ ಡಿಕೆಶಿ-ಸಿದ್ದರಾಮಯ್ಯ ಅವರಷ್ಟೇ ಅಧಿಕಾರ ಅನುಭವಿಸಬೇಕು. ಆದರೆ, ಬಿಜೆಪಿಯಲ್ಲಿ ಹಾಗಿಲ, ಎಲ್ಲರಿಗೂ ಅವಕಾಶ ದೊರೆಯುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಇದ್ದರೂ ಸದಾಶಿವ ವರದಿ ಜಾರಿಗೆ ತರಲಿಲ್ಲ. ಈಗ ಅಧಿಕಾರಕ್ಕೆ ಬಂದರೆ ಮಾಡುತ್ತೇವೆ ಎಂದು ಬರೀ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದರು.

ಕೆಎಂಎಫ್‌ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಅರಬಾವಿ ಮತ್ತು ಗೋಕಾಕ ಕ್ಷೇತ್ರಗಳಿಗೆ ಸಿಎಂ . 2700 ಕೋಟಿ ಅನುದಾನ ನೀಡಿದ್ದಾರೆ. ಪ್ರತಿ ಕ್ಷೇತ್ರಗಳಿಗೆ ನಿರೀಕ್ಷೆ ಮೀರಿ ಅನುದಾನ ನೀಡಿದ್ದಾರೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಸಾಮಾಜಿಕ ನ್ಯಾಯ ಪರಿಪಾಲಿಸಿದ್ದಾರೆ ಎಂದು ಹೇಳಿದರು.

ಪ್ರತ್ಯೇಕ ನಿಗಮಕ್ಕೆ ಮನವಿ:

ಮಾಳಿ ಸಮಾಜದ ಪ್ರತ್ಯೇಕ ನಿಗಮ, ಕ್ಷತ್ರೀಯ ಸಮಾಜದ ನಿಗಮ ರಚಿಸಲು ಈಗಾಗಲೇ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಇದರ ಜತೆಗೆ ಇಷ್ಟರಲ್ಲೇ ಹಾಲುಮತದ ಸಮಾಜ ಭಾಂದವರಿಗೂ ಶುಭ ಸುದ್ದಿ ನೀಡಲಿದ್ದಾರೆ ಎಂದು ಹೇಳಿದರು.

ಲಿಂಗಾಯತ ಸಿಎಂ?:

ಬರುವ ಚುನಾವಣೆಯಲ್ಲಿ ಬಿಜೆಪಿ 125 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ ಪ್ರಭಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಶಾಸಕರೊಬ್ಬರು ಮುಖ್ಯಮಂತ್ರಿಯಾಗುವ ಭಾಗ್ಯ ಪ್ರಾಪ್ತಿಯಾಗಲಿದೆ. ಆದ್ದರಿಂದ ಲಿಂಗಾಯತ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಅಥಣಿ ಶಾಸಕ ಮಹೇಶ ಕುಮಠಳ್ಳಿ, ಸಚಿವ ಸಿ.ಸಿ.ಪಾಟೀಲ, ಬೆಳಗಾವಿ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ, ಮಾಜಿ ಶಾಸಕ ಎಂ.ಎಲ್‌.ಮುತ್ತೇನ್ನವರ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ಧುರೀಣರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ‍್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಗೋಕಾಕ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಅರಬಾವಿ ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ, ಗುರಪಾದ ಕಳ್ಳಿ, ಅರಬಾವಿ ಮಂಡಲ ವಿಸ್ತಾರಕ ವೆಂಕಟೇಶ ಲಾಳೆ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಇದ್ದರು.

---------

ಬಾಕ್ಸ್‌:

ಜೇನುಗೂಡಿಗೆ ಕೈ ಹಾಕಿ ಗೆದ್ವಿ

ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಜೇನುಗೂಡಿಗೆ ಕೈ ಹಾಕಿ ಬಿಜೆಪಿ ಗೆದ್ದಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ. ಕೆಲವರು ಇದು ಜೇನು ಗೂಡಿಗೆ ಕೈಹಾಕುವ ಸಾಹಸ. ಇದು ಬೇಡವೆಂದು ಹೇಳಿದ್ದರೂ ಈ ಜನಾಂಗಕ್ಕೆ ಸಿಹಿ ನೀಡುವ ಉದ್ದೇಶದಿಂದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇವೆ ಎಂದು ಹೇಳಿದರು. ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಯಾರಿಂದಲೂ ಮಾಡದ ಕೆಲಸವನ್ನು ನಾವು ಸಾಧಿಸಿದ್ದೇವೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷ ಕೇವಲ ಓಟ್‌ ಬ್ಯಾಂಕ್‌ನ್ನಾಗಿ ಈ ಸಮುದಾಯವನ್ನು ದುರ್ಬಳಕೆ ಮಾಡಿಕೊಂಡಿದೆ. ಅಧಿಕಾರದಲ್ಲಿದ್ದಾಗ ಏನೂ ಮಾಡದ ಆ ಪಕ್ಷದ ನಾಯಕರು ಈಗ ಕೇವಲ ಸುಳ್ಳು ಹೇಳುವ ಪ್ರವೃತ್ತಿ ಬೆಳೆಸಿಕೊಳ್ಳುವ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಪ್ರತಿಪಕ್ಷದವರ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.

--------

28 ಜಿಕೆಕೆ 1-1

ಗೋಕಾಕದಲ್ಲಿ ಮಂಗಳವಾರ ಜರುಗಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

28 ಜಿಕೆಕೆ 1-2

ಗೋಕಾಕ ಮತ್ತು ಅರಬಾವಿ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಜನಸ್ತೋಮ.

Follow Us:
Download App:
  • android
  • ios