Asianet Suvarna News Asianet Suvarna News

ರಾಹುಲ್‌ಗಾಂಧಿ ಅನುಕೂಲಕ್ಕೆ ಗೃಹಲಕ್ಷ್ಮಿ ಮೈಸೂರಿಗೆ ಶಿಫ್ಟ್‌: ಸಚಿವ ಜಾರಕಿಹೊಳಿ

ಅನ್ಯ ಕಾರ್ಯಕ್ರಮದ ನಿಮಿತ್ತ ವೈನಾಡುಗೆ ಆಗಮಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಮೀಪವಾಗುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಮೈಸೂರಿನಲ್ಲಿ ಆಯೋಜನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

satish jarkiholi expresses displeasure over gruha lakshmi scheme event location change gvd
Author
First Published Aug 21, 2023, 10:23 PM IST

ಬೆಳಗಾವಿ (ಆ.21): ಅನ್ಯ ಕಾರ್ಯಕ್ರಮದ ನಿಮಿತ್ತ ವೈನಾಡುಗೆ ಆಗಮಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಮೀಪವಾಗುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಮೈಸೂರಿನಲ್ಲಿ ಆಯೋಜನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಉದ್ಘಾಟನೆಯಾಗಬೇಕಿದ್ದ ಗೃಹಲಕ್ಷ್ಮಿ ಯೋಜನೆ ಮೈಸೂರಿನಲ್ಲಿ ನಡೆಯುತ್ತಿರುವ ಬಗ್ಗೆ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ ನಿರ್ಣಯದ ಪ್ರಕಾರ ಮಾಡಲಾಗುತ್ತಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವೈನಾಡುನಲ್ಲಿ ಬೇರೆ ಕಾರ್ಯಕ್ರಮ ಇರುವುದರಿಂದ ಅವರಿಗೆ ಸಮೀಪವಾಗುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ. ಈ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದು ಕೇವಲ ಜಿಲ್ಲೆಗೆ ಸಂಬಂಧಿಸಿದ ಕಾರ್ಯಕ್ರಮವಲ್ಲ. ಗೃಹಲಕ್ಷ್ಮಿ ಯೋಜನೆ ರಾಜ್ಯಕ್ಕೆ ಸಂಬಂಧಿಸಿದ್ದು, ನಾನೂ ಮೈಸೂರಿನಲ್ಲಿನ ಕಾರ್ಯಕ್ರಮಕ್ಕೆ ಹಾಜರಾಗುತ್ತೇನೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಮುಸುಕಿನ ಗುದ್ದಾಟ ಇಲ್ಲ ಎಂದು ತಿಳಿಸಿದರು.

2 ದಿನದಲ್ಲಿ ನೈಸ್‌ ಅಕ್ರಮಗಳ ದಾಖಲೆ ಬಹಿರಂಗ: ಡಿಕೆ ಬ್ರದರ್ಸ್‌ ವಿರುದ್ಧ ​ಎಚ್ಡಿಕೆ ವಾ​ಗ್ದಾಳಿ

ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದ ಶಾಸಕರು ಈಗ ಮರಳಿ ಕಾಂಗ್ರೆಸ್‌ ಕರೆಸಿಕೊಳ್ಳುವ ಅಗತ್ಯ ಇಲ್ಲ. ಆದರೆ, ಅವರು ಬರುತ್ತೇನೆ ಎಂದರೆ ಕರೆದುಕೊಳ್ಳಲು ಅಭ್ಯಂತರ ಏನೂ ಇಲ್ಲ. ಯಾರೂ ಬರುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲ. ಅದು ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಮಾತ್ರ ಗೊತ್ತು ಎಂದರು. ನೂರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಇದೆ. ಕಾಂಗ್ರೆಸ್‌ನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರಿದ್ದಾರೆ. ಈ ಪೈಕಿ 50 ಜನ ಶಾಸಕರಿಗೆ ಹಾಗೂ ಕಾರ್ಯಕರ್ತರಿಗೆ ಕೊಡಲಾಗುವುದು. ಕಾರ್ಯಕರ್ತರಿಗೆ 50 ಜನರಿಗೆ ಕೊಟ್ಟರೆ ಉಳಿದವರಿಗೆ ಸಂತೋಷವಾಗುತ್ತದೆ. ಎಲ್ಲರಿಗೂ ನೀಡಲು ಸಾಧ್ಯವಿಲ್ಲ ಎಂದರು.

ಬೆಳಗಾವಿ ಜಿಲ್ಲಾ ವಿಭಜನೆಯ ಕೂಗು ಈಗ ಜೋರಾಗಿದೆ. ಬೈಲಹೊಂಗಲ ಜಿಲ್ಲೆಗಾಗಿ ಹೋರಾಟ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾಪ ಬಂದಾಗ ನಮ್ಮ ತಾಲೂಕು ಜಿಲ್ಲಾ ಆಗಬೇಕೆಂದು ಕೇಳಲು ಎಲ್ಲರಿಗೂ ಅಧಿಕಾರ ಇದೆ. ಅಂತಿಮವಾಗಿ ಸರ್ಕಾರ ಯಾವುದನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ನಿರ್ಧರಿಸುತ್ತದೆ ಎಂದರು. ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆಯ ಕುರಿತು ಎರಡ್ಮೂರು ಸಭೆ ನಡೆಸಿ ಆಯ್ಕೆ ಮಾಡುತ್ತೇವೆ. ಜಾತಿ ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲಾಗುವುದು. ಈ ಕುರಿತು ಸಭೆಯಲ್ಲಿ ಚರ್ಚೆಯಾಗಬೇಕು. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ, ಲಕ್ಷ್ಮಣರಾವ್‌ ಚಿಂಗಳೆ ಆಕಾಂಕ್ಷಿಗಳಿದ್ದಾರೆ. ಬೆಳಗಾವಿಯಲ್ಲಿಯೂ ಸಾಕಷ್ಟು ಜನ ಇದ್ದಾರೆ. ಸಚಿವೆ ಹೆಬ್ಬಾಳ್ಕರ ಪುತ್ರನಿಗೆ ಟಿಕೆಟ್‌ ನೀಡುವ ಪ್ರಸ್ತಾಪ ನಮ್ಮ ಮುಂದೆ ತಿಳಿಸಿಲ್ಲ ಎಂದು ತಿಳಿಸಿದರು.

ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರಿಗೆ ಗಾಂಜಾಪುಂಡರ ಕಾಟ: ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು

ಬೆಳಗಾವಿ ಶಹಾಪುರದ ಎಸ್‌ಬಿಐ ಬ್ಯಾಂಕ್‌ ವೃತ್ತದಿಂದ ಹಳೆ ಪಿ.ಬಿ.ರಸ್ತೆಯವರೆಗೆ ಸ್ಮಾರ್ಚ್‌ಸಿಟಿಯಿಂದ ರಸ್ತೆ ಅಗಲೀಕರಣ ಮಾಡಿದ್ದಾರೆ ಅದು ಅವೈಜ್ಞಾನಿಕವಾಗಿದೆ. ಈಗಾಗಲೇ ನ್ಯಾಯಾಲಯ ಅನ್ಯಾಯಕ್ಕೊಳಗಾದ ಕುಟುಂಬದವರಿಗೆ ಪರಿಹಾರ ಕೊಡಬೇಕೆಂದು ಸೂಚನೆ ನೀಡಿದೆ. ರಸ್ತೆ ಅಗಲೀಕರಣಕ್ಕೂ ಸ್ಮಾರ್ಚ್‌ಸಿಟಿಗೂ ಏನೂ ಸಂಬಂಧ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ಸಂಬಂಧ ಇಲ್ಲದ ಇಲಾಖೆಯವರು ಮನೆ ಹಾಗೂ ಕಂಪನಿ ಒಡೆದು ಹಾಕಿದ್ದಾರೆ. ನಾನು ಕಳೆದ ಎರಡು ವರ್ಷದ ಹಿಂದೆಯೇ ಸ್ಮಾರ್ಚ್‌ಸಿಟಿ, ಲೋಕೋಪಯೋಗಿ, ಬುಡಾಗೆ ಪತ್ರ ಬರೆದು ಕೇಳಿದ್ದೆ. ಅವರು ನಾವು ಒಡೆದಿಲ್ಲ ಎನ್ನುತ್ತಾರೆ. ಹಾಗಿದ್ದರೇ ಆ ರಸ್ತೆಯನ್ನು ಯಾವ ಬಾಹುಬಲಿ ನಿಂತು ಒಡೆಸಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಆಸೀಫ್‌ ಸೇಠ್‌, ಬೆಳಗಾವಿ ಕಾಂಗ್ರೆಸ್‌ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಸುನೀಲ ಹನುಮಣ್ಣವರ ಉಪಸ್ಥಿತರಿದ್ದರು.

Follow Us:
Download App:
  • android
  • ios