ಮೈಸೂರು, (ಫೆ.28): ಮೈಸೂರು ಪಾಲಿಕೆ ಮೇಯರ್ ಸ್ಥಾನವನ್ನು ಜೆಡಿಎಸ್‌ ಬಿಟ್ಟುಕೊಟ್ಟಿರುವುದಕ್ಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. 

ಶಾಸಕ ತನ್ವೀರ್ ಸೇಠ್ ಮಾಡಿದ ಕಿತಾಪತಿಯಿಂದಲೇ ಮೇಯರ್ ಸ್ಥಾನ ಜೆಡಿಎಸ್ ಪಾಲಾಗಿದೆ ಎನ್ನುವುದು ಸಿದ್ದರಾಮಯ್ಯ ಬಣದ ಆರೋಪ. ಈ ಹಿನ್ನೆಲೆಯಲ್ಲಿ ಪಕ್ಷದಿಂದ ತನ್ವೀರ್ ಸೇಠ್ ಅವರನ್ನ ಅಮಾನತು ಮಾಡಬೇಕೆಂದು ಆಗ್ರಹಗಳ ಕೇಳಿಬಂದಿವೆ. 

ಸಸ್ಪೆಂಡ್ ಮಾಡಿದ್ರೂ ಓಕೆ: ಸಿದ್ದರಾಮಯ್ಯ ವಿರುದ್ಧ ಗುಡುಗಿದ ಕಾಂಗ್ರೆಸ್ ಶಾಸಕ

ಇದರಿಂದ ಸಿದ್ದರಾಮಯ್ಯ ಮತ್ತು ಅವರ ಬಣದ ವಿರುದ್ಧ ತನ್ವೀರ್ ಸೇಠ್ ಹಾಗೂ ಅವರ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯನವರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೆಲ್ಲಾ ಬೆಳವಣಿಗೆಗಳ ಮಧ್ಯೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರಿಗೆ ಜೆಡಿಎಸ್‌ ಸೇರಲು ಬಹಿರಂಗ ಆಹ್ವಾನ ಬಂದಿದೆ. ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ಆಹ್ವಾನ ಕೊಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸಿದೆ.

ಇಂದು (ಭಾನುವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾರಾ ಮಹೇಶ್​, ತನ್ವೀರ್ ಸೇಠ್ ಅವರನ್ನು ಕಾಂಗ್ರೆಸ್ ವಜಾ ಮಾಡಿದರೆ, ಜೆಡಿಎಸ್‍ಗೆ ಸ್ವಾಗತಿಸುತ್ತೇವೆ. ತನ್ವೀರ್ ಸೇಠ್ ಒಬ್ಬ ಅಲ್ಪಸಂಖ್ಯಾತ ಮುಖಂಡ, ನಮಗೆ ಅವರ ಬಗ್ಗೆ ಗೌರವವಿದೆ ಎಂದು ಹೇಳಿದರು.

ಮೈಸೂರು 'ಮೈತ್ರಿ' ಯುದ್ಧ: ನೋಟಿಸ್‌ಗೆ ಉತ್ತರಿಸಲು ಸಿದ್ಧ ಎಂದ ತನ್ವೀರ್ ಸೇಠ್

ನಾವು ಯಾರ ಪಕ್ಷದಲ್ಲೂ ಬೆಂಕಿ ಹಚ್ಚಿಲ್ಲ. ಎಲ್ಲವು ಆ ಕ್ಷಣದಲ್ಲಿ ಆದ ನಿರ್ಧಾರ. ಇದರಿಂದ ತನ್ವೀರ್ ಸೇಠ್ ಗೆ ಸಮಸ್ಯೆ ಆದರೆ, ಅವರು ಜೆಡಿಎಸ್‍ಗೆ ಬರಲಿ. ಅವರ ವಿರುದ್ದ ಸ್ಪರ್ಧಿಸಿದ್ದ ಅಬ್ದುಲ್ಲಾ ಅವರೇ ಅವರನ್ನು ಸ್ವಾಗತ ಮಾಡುತ್ತಾರೆ ಎಂದರು.

ಪಕ್ಷಕ್ಕೆ ಬಂದರೆ ಟಿಕೆಟ್ ನೀಡುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಾ.ರಾ.ಮಹೇಶ್, ಮೊದಲು ಅವರು ಪಕ್ಷಕ್ಕೆ ಬರಲಿ ಆಮೇಲೆ ನೋಡೋಣ ಎಂದು ಸ್ಪಷ್ಟಪಡಿಸಿದರು.  

ಮೈಸೂರು ಪಾಲಿಕೆಯ ಚುನಾವಣೆ ಗೊಂದಲಕ್ಕೆ ಮಾಜಿ ಸಿ.ಎಂ ಸಿದ್ದರಾಮಯ್ಯ ಪ್ರಮುಖ ಕಾರಣ, ಅವರ ತವರು ಜಿಲ್ಲೆ ಮೈಸೂರಿನಲ್ಲಿಯೇ ನಮ್ಮ ಪಕ್ಷದ ಶಕ್ತಿ ತೋರಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.