ರಾಜ್ಯ ಸರ್ಕಾರದ ಸಂಪುಟ ಪುನಾರಚನೆ ಕುರಿತು ನನಗೆ ಮಾಹಿತಿ ಇಲ್ಲ. ಇದೆಲ್ಲವನ್ನೂ ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೋಡಿಕೊಳ್ಳುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಹುಬ್ಬಳ್ಳಿ (ಡಿ.28): ರಾಜ್ಯ ಸರ್ಕಾರದ ಸಂಪುಟ ಪುನಾರಚನೆ ಕುರಿತು ನನಗೆ ಮಾಹಿತಿ ಇಲ್ಲ. ಇದೆಲ್ಲವನ್ನೂ ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೋಡಿಕೊಳ್ಳುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಸ್ಪಷ್ಟಪಡಿಸಿದರು. ಯಲಹಂಕದಲ್ಲಿ ಬೃಹತ್ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರ ಉತ್ತರ ಪ್ರದೇಶದ ಬುಲ್ಡೋಜರ್ ಸಂಸ್ಕೃತಿ ಅನುಸರಿಸುತ್ತಿದೆ ಎಂಬ ಆರೋಪಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಲಾಡ್, ಈ ರೀತಿಯ ಸಂಸ್ಕೃತಿ ಕಾಂಗ್ರೆಸ್‌ನಲ್ಲಿಲ್ಲ.
ಕಾಂಗ್ರೆಸ್‌ಗೆ ತನ್ನದೇ ಆದ ಇತಿಹಾಸ, ಸಿದ್ಧಾಂತವಿದೆ. ಸಹಿಸುವ ಮನಸ್ಥಿತಿ ಇಲ್ಲದ ಬಿಜೆಪಿ ವೃಥಾ ಆರೋಪದಲ್ಲಿ ತೊಡಗಿದೆ. ಕೇರಳದಲ್ಲಿ ಈಗ ಚುನಾವಣೆ ಬಂದಿದೆ. ಹಾಗಾಗಿ ಅಲ್ಲಿನ ಮುಖ್ಯಮಂತ್ರಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಅಷ್ಟೇ ಎಂದರು. ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರತಿಪಕ್ಷದವರು ಪದೇ ಪದೇ ಮುಖ್ಯಮಂತ್ರಿ ಯಾರಾಗುತ್ತಾರೆ? ಎಂಬ ವಿಷಯ ಕೆದಕಿದರು. ಹಾಗಾಗಿಯೇ ಸಿದ್ದರಾಮಯ್ಯ ಅವರು ಸದನದಲ್ಲಿ 5 ವರ್ಷ ನಾನೇ ಸಿಎಂ ಎಂದು ಉತ್ತರ ಕೊಟ್ಟಿದ್ದಾರೆ. ಇದಕ್ಕೆ ಏನೇನೋ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ದೌರ್ಜನ್ಯಕ್ಕೆ ಒಳಗಾದ ಕುಟುಂಬದೊಂದಿಗೆ ಸರ್ಕಾರ
ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಕುಟುಂಬದ ಬೆನ್ನೆಲುಬಾಗಿ ಸರ್ಕಾರ ಸದಾಕಾಲ ಇರುತ್ತದೆ. ದೊಡ್ಡಮನಿ ಕುಟುಂಬ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ಯುವಕನ ತಂದೆ-ತಾಯಿ ಸೇರಿದಂತೆ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಇನಾಂವೀರಾಪುರ ಗ್ರಾಮದಲ್ಲಿ ಘಟನೆ ನಡೆದಿರುವ ಬಗ್ಗೆ ಮಾಹಿತಿ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸ್ವಾತಂತ್ರ್ಯ ಸಿಕ್ಕು 79 ವರ್ಷ ಕಳೆದರೂ ಇನ್ನೂ ಅಸಮಾನತೆ ತಾಂಡವವಾಡುತ್ತಿರುವುದು ನೋವಿನ ಸಂಗತಿ. ವಿವೇಕಾನಂದ ದೊಡ್ಡಮನಿ ಅವರ ಕುಟುಂಬದವರು ಬಸವಣ್ಣ ಹಾಗೂ ಅಂಬೇಡ್ಕರ್ ಸಿದ್ಧಾಂತ, ತತ್ವ ನೆಚ್ಚಿ ಜೀವಿಸುತ್ತಿದ್ದಾರೆ. ಆದರೂ ಈ ಕೃತ್ಯ ನಡೆದಿರುವುದು ಮನಸ್ಸಿಗೆ ಖೇದವನ್ನುಂಟು ಮಾಡಿದೆ ಎಂದರು. ಸಮಾಜದಲ್ಲಿ ಇಂಥ ಅಮಾನವೀಯ ಘಟನೆಗಳು ನಡೆಯಬಾರದು. ನಡೆದಿರುವುದು ಬೇಸರದ ಸಂಗತಿ. ಮಗಳ ಜೀವ ತೆಗೆದ ತಂದೆಯ ಕೃತ್ಯ ಖಂಡನೀಯ. ಸಂತ್ರಸ್ತ ಯುವಕ ಹಾಗೂ ಕುಟುಂಬದವರ ಪರವಾಗಿ ಸರ್ಕಾರ, ಜಿಲ್ಲಾಡಳಿತವು ದೃಢವಾಗಿ ನಿಲ್ಲಲಿದೆ. ಘಟನೆ ನೋಡಿದಲ್ಲಿ ಈ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈಗಲೂ ದೊಡ್ಡಮನಿ ಕುಟುಂಬ ತಮ್ಮ ಗ್ರಾಮಕ್ಕೆ ತೆರಳಲು ಭಯಪಡುತ್ತಿದ್ದಾರೆ. ಆದಷ್ಟು ಶೀಘ್ರದಲ್ಲಿ ಗ್ರಾಮದಲ್ಲಿ ಸೌಹಾರ್ದ ಸಭೆ ನಡೆಸಿ ಕುಟುಂಬದವರಿಗೆ ಹಾಗೂ ಗ್ರಾಮಸ್ಥರಿಗೆ ಧೈರ್ಯ ತುಂಬಲಾಗುವುದು ಎಂದು ಲಾಡ್ ಹೇಳಿದರು.


