ಉಸ್ತುವಾರಿ ಸಚಿವರಾಗಿ ಸಂತೋಷ ನೇಮಕ; ಲಾಡ್ ಮೇಲೆ ಲೋಡ್‌ಗಟ್ಟಲೇ ನಿರೀಕ್ಷೆ!

ಕೊನೆಗೂ ಕಾಂಗ್ರೆಸ್‌ ಸರ್ಕಾರ ಅಳೆದು ತೂಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಸಂತೋಷ ಲಾಡ್‌ ಅವರನ್ನು ನೇಮಿಸಿದೆ. ಆದರೆ, ಲಾಡ್‌ ಹಾದಿ ಸುಗಮವಿಲ್ಲ. ನೂರೆಂಟು ಸವಾಲು ಅವರ ಎದುರಿಗಿವೆ. ಜನತೆ ಕಾಂಗ್ರೆಸ್‌ ಸರ್ಕಾರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವುಗಳನ್ನು ಈಡೇರಿಸುವ ಜವಾಬ್ದಾರಿ ಲಾಡ್‌ ಮೇಲಿದೆ.

Santhosh Lad appointed as Dharwad In-charge Minister congress government rav

ಶಿವಾನಂದ ಗೊಂಬಿ

ಹುಬ್ಬಳ್ಳಿ (ಜೂ.10) ಕೊನೆಗೂ ಕಾಂಗ್ರೆಸ್‌ ಸರ್ಕಾರ ಅಳೆದು ತೂಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಸಂತೋಷ ಲಾಡ್‌ ಅವರನ್ನು ನೇಮಿಸಿದೆ. ಆದರೆ, ಲಾಡ್‌ ಹಾದಿ ಸುಗಮವಿಲ್ಲ. ನೂರೆಂಟು ಸವಾಲು ಅವರ ಎದುರಿಗಿವೆ. ಜನತೆ ಕಾಂಗ್ರೆಸ್‌ ಸರ್ಕಾರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವುಗಳನ್ನು ಈಡೇರಿಸುವ ಜವಾಬ್ದಾರಿ ಲಾಡ್‌ ಮೇಲಿದೆ.

ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಜತೆಗೆ ಇನ್ನುಳಿದ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರುಚಾಲನೆ ನೀಡಬೇಕಿದೆ. ಅಲ್ಲದೇ, ಜನರ ನಿರೀಕ್ಷೆಯ ಹೊಸ ಯೋಜನೆ ಪ್ರಾರಂಭಿಸಬೇಕಿದೆ.

ಧಾರವಾಡ: ಸಂತೋಷ ಬಾಯಿಗೆ ಉಸ್ತುವಾರಿ ಲಾಡು!

ಏನೇನು ನಿರೀಕ್ಷೆ:

ಈ ಭಾಗದ ಅತ್ಯಂತ ಪ್ರಮುಖವಾದ ಜನರ ಬೇಡಿಕೆಯೆಂದರೆ ಮಹದಾಯಿ ಯೋಜನೆ. ಇದಕ್ಕೆ ತೀರ್ಪು ಬಂದು ಆಗಲೇ ನಾಲ್ಕು ವರ್ಷವಾಗಿ, ಕೇಂದ್ರ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದೆ. ಜತೆಗೆ ಡಿಪಿಆರ್‌ಗೂ ಒಪ್ಪಿಗೆ ಸಿಕ್ಕಿದೆ. ಆಗ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಕಾಂಗ್ರೆಸ್‌ ಪ್ರತಿಭಟನೆಯನ್ನೂ ಮಾಡಿತ್ತು. ಪರಿಸರ ಹಾಗೂ ಅರಣ್ಯ ಇಲಾಖೆಯ ಅನುಮತಿಯನ್ನೇ ಪಡೆದಿಲ್ಲ ಎಂದು ಜನರಿಗೆ ತಿಳಿಸಿತ್ತು. ಇದಾದ ಬಳಿಕ ಚುನಾವಣೆಗೆ ಕೆಲವೇ ದಿನ ಬಾಕಿ ಇರುವಾಗ ಮಹದಾಯಿಗೆ ಬಿಜೆಪಿ ಸರ್ಕಾರ ಟೆಂಡರ್‌ ಕರೆದಿತ್ತು. ಆದರೆ ಅದೇನಾಯಿತು ಎಂಬುದನ್ನು ಜನರಿಗೆ ತಿಳಿಸಬೇಕು. ಯೋಜನೆಗೆ ಚಾಲನೆ ನೀಡಲು ಬೇಕಾದ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಬೇಕು. ಜತೆಗೆ ಕಳಸಾ- ಬಂಡೂರಿ ಯೋಜನೆಗೆ ಚಾಲನೆ ನೀಡುವ ದೊಡ್ಡ ಜವಾಬ್ದಾರಿ ಲಾಡ್‌ ಮೇಲಿದೆ. ಅದನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವ ಕುತೂಹಲವಿದೆ.

ಇನ್ನು .312 ಕೋಟಿ ವೆಚ್ಚದ ತುಪರಿಹಳ್ಳದ ಶಾಶ್ವತ ಪರಿಹಾರ ಯೋಜನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಮಿಸಿ ಚಾಲನೆ ನೀಡಿರುವುದುಂಟು. ಕೆಲಸವೇನೂ ನಡೆಯುತ್ತಿದೆ. ಆದರೆ, ಅದಕ್ಕೆ ತೀವ್ರಗತಿ ನೀಡಬೇಕಾಗಿದೆ. ಇದರೊಂದಿಗೆ ಬೆಣ್ಣಿಹಳ್ಳದ ಯೋಜನೆಗೆ ಸಂಬಂಧಪಟ್ಟಂತೆ ಯೋಜನೆ ಸಿದ್ಧವಾಗಿದೆ. ಆದರೆ ಈವರೆಗೂ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ. .1300 ಕೋಟಿಗೂ ಅಧಿಕ ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರದ ಅನುಮೋದನೆ ಪಡೆದುಕೊಳ್ಳಬೇಕು. ಅದಕ್ಕೆ ಚಾಲನೆ ನೀಡುವ ಕೆಲಸವಾಗಬೇಕಿದೆ. ಈ ಮೂಲಕ ಮಳೆಗಾಲದಲ್ಲಿ ತುಪರಿಹಳ್ಳ- ಬೆಣ್ಣಿಹಳ್ಳದಿಂದ ಸಮಸ್ಯೆ ಎದುರಿಸುತ್ತಿರುವ ನವಲಗುಂದ, ಧಾರವಾಡ, ಕುಂದಗೋಳ, ಹುಬ್ಬಳ್ಳಿ ತಾಲೂಕಿನ ಜನತೆ ನಿಟ್ಟುಸಿರು ಬಿಡುವಂತೆ ಮಾಡಬೇಕಿದೆ.

ಎಲ್‌ಆ್ಯಂಡ್‌ಟಿ ಗೊಂದಲ:

ಹುಬ್ಬಳ್ಳಿ-ಧಾರವಾಡದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಸರಿಯಾಗಿಲ್ಲ. ಅದರಲ್ಲೂ ಎಲ್‌ಆ್ಯಂಡ್‌ಟಿಗೆ ಗುತ್ತಿಗೆ ನೀಡಿದ ಮೇಲೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮೊದಲು ನಾಲ್ಕೈದು ದಿನಗಳಿಗೊಮ್ಮೆ ಬರುತ್ತಿದ್ದ ನೀರು ಇದೀಗ ಎಂಟ್ಹತ್ತು ದಿನಗಳಿಗೊಮ್ಮೆ ಬರುವಂತಾಗಿದೆ. ಎಲ್‌ಆ್ಯಂಡ್‌ಟಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕೂಡ ಈ ಬಗ್ಗೆ ಹಿಂದೆ ಅಧಿವೇಶನದಲ್ಲೇ ಚರ್ಚಿಸಿದ್ದುಂಟು. ಆದರೂ ಪರಿಹಾರ ಮಾತ್ರ ಆಗುತ್ತಲೇ ಇಲ್ಲ. ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲೂ ಎಲ್‌ಆ್ಯಂಡ್‌ಟಿ ಕೊಟ್ಟಿರುವ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂಬ ಕೂಗು ಕೇಳಿ ಬಂದಿದೆ. ಇದಕ್ಕಾಗಿ ಸರ್ವಪಕ್ಷದ ನಿಯೋಗ ಕೊಂಡೊಯ್ಯಲು ಪಾಲಿಕೆ ನಿರ್ಧರಿಸಿದೆ. ಆದಕಾರಣ ಎಲ್‌ಆ್ಯಂಡ್‌ಟಿ ಮಾಡುತ್ತಿರುವ ಗೊಂದಲವನ್ನು ಬಗೆಹರಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಿದೆ. ಇದರೊಂದಿಗೆ ಬರೀ 19 ವಾರ್ಡ್‌ಗಳಲ್ಲಿರುವ ನಿರಂತರ ಕುಡಿಯುವ ನೀರಿನ ವ್ಯವಸ್ಥೆಯನ್ನು 82 ವಾರ್ಡ್‌ಗಳಿಗೂ ಪೂರೈಕೆಯಾಗುವಂತೆ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.

ಪಾಕಿಸ್ತಾನ, ಕಾಂಗ್ರೆಸ್‌ ದೂರುವುದೇ ಬಿಜೆಪಿ ಕೆಲಸ: ಸಚಿವ ಸಂತೋಷ ಲಾಡ್

ಇದರೊಂದಿಗೆ ಹದಗೆಟ್ಟಿರುವ ರಸ್ತೆ ವ್ಯವಸ್ಥೆ, ಕಲಘಟಗಿಯಲ್ಲಿ ಆನೆ ದಾಳಿ, ಸಮರ್ಪಕ ರಸಗೊಬ್ಬರ ಪೂರೈಕೆ, ಕೆರೆಗಳ ನಿರ್ಮಾಣಕ್ಕೆ ಒತ್ತು ಹೀಗೆ ಹತ್ತಾರು ಕೆಲಸಗಳು ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂತೋಷ ಲಾಡ್‌ ಮೇಲೆ ಜನರದ್ದು ಲೋಡಗಟ್ಟಲೇ ನಿರೀಕ್ಷೆ ಇದೆ. ಇವುಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಾರೆಯೇ ಕಾಯ್ದು ನೋಡಬೇಕಿದೆ.

Latest Videos
Follow Us:
Download App:
  • android
  • ios