ಸಂಜಯ್‌ ರಾವುತ್‌ ಚೀನಾ ಏಜೆಂಟ್‌, ದೇಶದ್ರೋಹಿ: ಸಿಎಂ ಬೊಮ್ಮಾಯಿ

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೀಳು ಹೇಳಿಕೆ ನೀಡಿದ ಮಹಾರಾಷ್ಟ್ರ ರಾಜಕಾರಣಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯಕ್ಕೆ ನುಗ್ಗುವ ಹೇಳಿಕೆ ನೀಡಿದ ಶಿವಸೇನೆ ನಾಯಕ ಸಂಜಯ್‌ ರಾವುತ್‌ ಅವರನ್ನು ಚೀನಾ ಏಜೆಂಟ್‌ ಹಾಗೂ ದೇಶದ್ರೋಹಿ ಎಂದು ಹರಿಹಾಯ್ದಿದ್ದಾರೆ.

Sanjay Raut is a Chinese agent and traitor says CM Basavaraj Bommai gvd

ವಿಧಾನಸಭೆ (ಡಿ.23): ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೀಳು ಹೇಳಿಕೆ ನೀಡಿದ ಮಹಾರಾಷ್ಟ್ರ ರಾಜಕಾರಣಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯಕ್ಕೆ ನುಗ್ಗುವ ಹೇಳಿಕೆ ನೀಡಿದ ಶಿವಸೇನೆ ನಾಯಕ ಸಂಜಯ್‌ ರಾವುತ್‌ ಅವರನ್ನು ಚೀನಾ ಏಜೆಂಟ್‌ ಹಾಗೂ ದೇಶದ್ರೋಹಿ ಎಂದು ಹರಿಹಾಯ್ದಿದ್ದಾರೆ. ಅಲ್ಲದೆ, ಇಂತಹ ಅವಹೇಳನಕಾರಿ ಟೀಕೆ ಮುಂದುವರೆಸಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಖಂಡನಾ ನಿರ್ಣಯವನ್ನು ಮಂಡಿಸಿ ಮಾತನಾಡಿದ ಅವರು, ಶಿವಸೇನಾ ನಾಯಕ ಸಂಜಯ್‌ ರಾವುತ್‌ ರಾಜ್ಯಕ್ಕೆ ನುಗ್ಗುವ ಉದ್ಧಟತನದ ಹೇಳಿಕೆ ನೀಡುತ್ತಾರೆ. 

ದೇಶದ ಒಕ್ಕೂಟದ ವ್ಯವಸ್ಥೆಗೆ ವಿರುದ್ಧ ಹೇಳಿಕೆ ನೀಡುವ ಇಂತಹ ವ್ಯಕ್ತಿಗೆ ಕವಡೆ ಕಾಸಿನ ಕಿಮತ್ತಿಲ್ಲ. ಈ ವ್ಯಕ್ತಿಗೆ ನಾವು ಅವರ ಭಾಷೆಯಲ್ಲೇ ಉತ್ತರ ನೀಡಬಹುದು. ಆದರೆ, ಅದು ನಮ್ಮ ಸಂಸ್ಕೃತಿಯಲ್ಲ. ಸಂವಿಧಾನಾತ್ಮಕವಾಗಿ ನಮ್ಮ ಹಕ್ಕು ಪಡೆಯಲು ಗೊತ್ತಿದೆ ಎಂದು ಹೇಳಿದರು. ಇದೇ ರೀತಿ ಎನ್‌ಸಿಪಿ ಶಾಸಕ ಜಯಂತ್‌ ಪಾಟೀಲ್‌ ಕರ್ನಾಟಕ ಸಿಎಂಗೆ ಮಸ್ತಿ (ಅಹಂಕಾರ) ಬಂದಿದೆ ಎಂದಿದ್ದಾರೆ. ಇದು ಆ ಮನುಷ್ಯನ ಅಪ್ರಬುದ್ಧತೆ ತೋರುತ್ತದೆ. ಇಡೀ ಮಹಾರಾಷ್ಟ್ರದ ನಾಯಕರು ಗಡಿ ವಿಚಾರದಲ್ಲಿ ಅತ್ಯಂತ ಕೆಳಮಟ್ಟದ ಭಾಷೆ ಬಳಸುತ್ತಿದ್ದು, ಅದನ್ನು ಈ ಸದನ ಖಂಡಿಸುತ್ತದೆ. ಅಲ್ಲಿಯ ನಾಯಕರು ಕರ್ನಾಟಕಕ್ಕೆ ನೀರು ಕೊಡುವುದಿಲ್ಲ ಎಂದು ಹೇಳುತ್ತಾರೆ. ಆದರೆ, ನೀರು, ಗಾಳಿಯನ್ನು ಹಿಡಿದಿಡಲು ಯಾರಿಂದಲೂ ಸಾಧ್ಯವಿಲ್ಲ. 

ವರಿಷ್ಠರು ಒಪ್ಪಿದರೆ ಜಾರಕಿಹೊಳಿ, ಈಶ್ವರಪ್ಪಗೆ ಶೀಘ್ರ ಸಚಿವ ಸ್ಥಾನ: ಸಿಎಂ ಬೊಮ್ಮಾಯಿ

ಜಲ ರಾಷ್ಟ್ರೀಯ ಆಸ್ತಿ. ಕೃಷ್ಣಾ ನದಿ ನೀರು ಕರ್ನಾಟಕದಲ್ಲೇ ಹೆಚ್ಚು ಸಂಗ್ರಹವಾಗುತ್ತದೆ ಮತ್ತು ಹರಿಯುತ್ತಿದೆ. ಕೊಯ್ನಾ ಅಣೆಕಟ್ಟು ತುಂಬುವ ಮೊದಲೇ ಮಹಾರಾಷ್ಟ್ರದವರು ನೀರು ಬಿಡುತ್ತಾರೆ. ಏಕೆಂದರೆ, ಅದು ತುಂಬಿದರೆ ಅಲ್ಲಿ ಪ್ರವಾಹ ಉಂಟಾಗುತ್ತದೆ. ಇಂತಹ ಸಾಮಾನ್ಯ ಜ್ಞಾನವೂ ಇಲ್ಲದ ಅಲ್ಲಿನ ನಾಯಕರು ನೀರು ಹಿಡಿದಿಟ್ಟುಕೊಳ್ಳುವ ಹೇಳಿಕೆ ನೀಡುತ್ತಾರೆ ಎಂದು ಟೀಕಿಸಿದರು.ಮಹಾರಾಷ್ಟ್ರ ನಾಯಕರ ದುಸ್ಸಾಹಸಗಳನ್ನು ನಾವು ದೃಢತೆಯಿಂದ ಕಡಿವಾಣ ಹಾಕಿದ್ದೇವೆ. ಅಧಿವೇಶನದ ವೇಳೆ ಎಂಇಎಸ್‌ ನಡೆಸಲು ಉದ್ದೇಶಿಸಿದ್ದ ಮಹಾಮೇಳಾವವನ್ನು ತಡೆದಿದ್ದೇವೆ. ಈ ವೇಳೆ ರಾಜ್ಯಕ್ಕೆ ಆಗಮಿಸಬೇಕೆಂದಿದ್ದ ಮಹಾರಾಷ್ಟ್ರದ ಸಚಿವರ ಪ್ರಯತ್ನವನ್ನು ವಿಫಲಗೊಳಿಸಿದ್ದೇವೆ ಎಂದರು.

ಮಹಾರಾಷ್ಟ್ರ ನಾಯಕರಿಗೆ ಮರ್ಯಾದೆ ಇಲ್ಲ: ಇದೇ ವೇಳೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಮಹಾರಾಷ್ಟ್ರದ ಜನಪ್ರತಿನಿಧಿಗಳ ಹೇಳಿಕೆ ಖಂಡನೀಯ. ಅವರಿಗೆ ಮಾನ, ಮರ್ಯಾದೆ ಇಲ್ಲ. ಒಕ್ಕೂಟ ವ್ಯವಸ್ಥೆ ಬಗ್ಗೆ ಜ್ಞಾನವೇ ಇಲ್ಲ. ಅವರಿಗೆ ನಾಗರಿಕ ಭಾಷೆಯಲ್ಲೇ ತಕ್ಕ ಉತ್ತರ ಕೊಡಬೇಕು ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಮಹಾಜನ ಆಯೋಗದ ವರದಿಯೇ ಅಂತಿಮ. ಮಹಾರಾಷ್ಟ್ರ ಸುಮ್ಮನೆ ಗಡಿ ವಿಚಾರದಲ್ಲಿ ಗೊಂದಲ ಉಂಟು ಮಾಡುತ್ತಿದೆ. ಆದರೆ, ನಮ್ಮ ನಿಲುವು ಸ್ಪಷ್ಟವಾಗಿದೆ. ನಮ್ಮೆಲ್ಲರದ್ದೂ ಒಂದೇ ತೀರ್ಮಾನವಾಗಿದೆ ಎಂದರು. 

ಸಿಎಂ ಬೊಮ್ಮಾಯಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗೆ ಪಕ್ಷಾತೀತ ಖಂಡನೆ

ಮಹಾಜನ್‌ ವರದಿಯನ್ನು ಒಪ್ಪಿಕೊಂಡಾಗಲೇ ಎರಡು ರಾಜ್ಯಗಳ ಗಡಿ ವಿವಾದ ಮುಕ್ತಾಯವಾಗಿದೆ. ಆದರೂ ಕೆಲವರು ರಾಜಕೀಯ ಲಾಭಕ್ಕಾಗಿ ಉಭಯ ರಾಜ್ಯಗಳ ನಡುವಿನ ಸಾಮರಸ್ಯಹಾಳು ಮಾಡಲು ಪ್ರಯತ್ನಿಸುತ್ತಿದ್ದು ಅದನ್ನು ಸಮರ್ಥವಾಗಿ ತಡೆಯುತ್ತೇವೆ. ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿಯಿಲ್ಲ. ಈ ವಿಷಯದಲ್ಲಿ ಕರ್ನಾಟಕದ ಜನರೆಲ್ಲರ ಭಾವನೆ ಒಂದೇ. ರಾಜ್ಯದ ಗಡಿಯಲ್ಲಿ ಒಂದಿಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ರಾಜ್ಯದ ಕಾನೂನು ವ್ಯವಸ್ಥೆಗೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

Latest Videos
Follow Us:
Download App:
  • android
  • ios