* ಕರ್ನಾಟಕ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಪ್ರಕಟ* ಅಚ್ಚರಿ ಎಂಬಂತೆ ನಟ ಜಗ್ಗೇಶ್‌ಗೆ ಸಿಕ್ತು ಟಿಕೆಟ್* ಟ್ವೀಟ್ ಮೂಲಕ ಮೊದಲ ಪ್ರತಿಕ್ರಿಯೆ ಕೊಟ್ಟ ಜಗ್ಗೇಶ್
ಬೆಂಗಳೂರು, (ಮೇ.29): ಜೂನ್ 10 ರಂದು ನಡೆಯಲಿರುವ ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕದಿಂದಲೇ ಮುಂದುವರಿಸಲು ನಿರ್ಧರಿಸಿದ್ದು, ಕೆ.ಸಿ.ರಾಮಮೂರ್ತಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಟ ಜಗ್ಗೇಶ್ ಅವರನ್ನ ಕಣಕ್ಕಿಳಿಸಲಾಗಿದೆ.
ಕರ್ನಾಟಕ ರಾಜ್ಯಸಬಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿದ್ದರಿಂದ ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಫುಲ್ ಖುಷ್ ಆಗಿದ್ದು, ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ ಎಂದಿದ್ದಾರೆ.
ರಾಜ್ಯಸಭೆ ಟಿಕೆಟ್ ಸಿಕ್ಕಿರುವ ಬಗ್ಗೆ ಟ್ವೀಟ್ ಮೂಲಕ ಮೊದಲ ಪ್ರತಿಕ್ರಿಯೆ ಕೊಟ್ಟ ಜಗ್ಗೇಶ್, ಆತ್ಮೀಯ ಕನ್ನಡದ ಬಂಧುಗಳೆ 42 ವರ್ಷ ತಪಸ್ಸಿನಂತೆ ಕಲಾರಂಗದಲ್ಲಿ ಸೇವೆ ಮಾಡಿ ಕಾಯವಾಚಮನ ಸತ್ಯಮಾರ್ಗದಲ್ಲಿ ಬದುಕಿದ್ದೇನೆ. ನನ್ನ ನೆಚ್ಚಿನ ಭಾಜಪ ರಾಜ್ಯದ ಮುಖ್ಯ ಮಂತ್ರಿಗಳು, ಮಂತ್ರಿಗಳು, ಶಾಸಕ ಮಿತ್ರರು ಹಾಗೂ ರಾಜ್ಯ ರಾಷ್ಟ್ರದ ಸಂಘದ ಹಿರಿಯರ ಆಶೀರ್ವಾದದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವೆ ತಮಗೆ ಶಿರಬಾಗಿ ವಂದಿಸುವೆ. ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯಸಭಾ ಎಲೆಕ್ಷನ್‌ಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಜಗ್ಗೇಶ್ ಅಚ್ಚರಿ ಆಯ್ಕೆ
ಜಗ್ಗೇಶ್ ಹುಟ್ಟೂರಿನಲ್ಲಿ ಪೂಜೆ
ನಟ ಜಗ್ಗೇಶ್‌ಗೆ ರಾಜ್ಯಸಭೆ ಟಿಕೆಟ್ ಘೋಷಣೆ ಹಿನ್ನಲೆ ಹುಟ್ಟೂರು ಮಾಯಸಂದ್ರದಲ್ಲಿ ಪೂಜೆ ಪುನಸ್ಕಾರಗಳು ನಡೆದಿದ್ದು, ಇದರಲ್ಲಿ ಜಗ್ಗೇಶ್ ಸಹ ಭಾಗಿಯಾಗಿದ್ದಾರೆ.
ಕಾಲಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದು. ಪ್ರತಿ ಅಮಾವಾಸ್ಯೆ ವೇಳೆ ಪೂಜೆ ಸಲ್ಲಿಸುತ್ತಾರೆ. ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ನಾಳೆ(ಸೋವಮಾರ) ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಜಗ್ಗೇಶ್ ಅಚ್ಚರಿ ಆಯ್ಕೆ
ಹೌದು...ನಟ ಜಗ್ಗೇಶ್ ಆಯ್ಕೆ ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿ ಮುಡಿಸಿದೆ. ಯಾವುದೇ ಟಿಕೆಟ್ ರೇಸ್‌ನಲ್ಲಿ ಇರಲಿಲಲ್ಲ. ಬಿಜೆಪಿ ಘಟಕದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಸಹ ಮಾಡಿರಲಿಲ್ಲ.ರಾಜ್ಯದ ಪಟ್ಟಿಯನ್ನು ಕೇಂದ್ರದ ವರಿಷ್ಠರು ಸೈಡಿಗಿಟ್ಟು ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಇದೀಗ ಮತ್ತೊಮ್ಮೆ ಜಗ್ಗೇಶ್ ಅವರ ಆಯ್ಕೆ ಮೂಲಕ ಅಚ್ಚರಿಯನ್ನು ಸಾಬೀತು ಮಾಡಿದ್ದಾರೆ. ಎಲ್ಲಾ ವಿಚಾರದಲ್ಲೂ ರಹಸ್ಯ ಉಳಿಸಿಕೊಳ್ಳುವಲ್ಲಿ ಎತ್ತಿದ ಕೈಯಾಗಿರುವ ಬಿಜೆಪಿಯ ವರಿಷ್ಠರು ವಿಧಾನ ಪರಿಷತ್ ಚುನಾವಣೆಯಲ್ಲೂ ನಮ್ಮದೇ ಅಂತಿಮ ನಿರ್ಧಾರ ಎಂದು ಸಾರಿದ್ದಾಗಿದೆ.
ಯಡಿಯೂರಪ್ಪನವರ ಪುತ್ರ ಬಿ. ವೈ. ವಿಜಯೇಂದ್ರ ಅವರಿಗೆ ಟಿಕೆಟ್ ಕನ್ಫರ್ಮ್ ಎಂದು ಹೇಳಲಾಗುತ್ತಿತ್ತು. ಆದರೆ, ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ ಹೊರತಾಗಿ ಇತರ ಇಬ್ಬರು ಅಚ್ಚರಿಯ ಆಯ್ಕೆಯಾಗಿತ್ತು. ಇದೀಗ ಜಗ್ಗೇಶ್ ಆಯ್ಕೆ ಸಹ ಅಚ್ಚರಿಗೆ ಕಾರಣವಾಗಿದೆ.
