* ಕರ್ನಾಟಕ ರಾಜ್ಯಸಭಾ ಚುನಾವಣೆ* ಬಿಜೆಪಿ ಅಭ್ಯರ್ಥಿಗಳು ಪಟ್ಟಿ ಪ್ರಕಟ* ನಟ ಜಗ್ಗೇಶ್ ಅಚ್ಚರಿ ಆಯ್ಕೆ
ಬೆಂಗಳೂರು, (ಮೇ. 29): ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಪಟ್ಟಿ ಪ್ರಕಟವಾಗಿದೆ.
ಇಂದು(ಭಾನುವಾರ) ಬಿಜೆಪಿ ರಾಜ್ಯಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಸ್ಪರ್ಧಿಸಲಿದ್ದಾರೆ.ನಿರ್ಮಲಾ ಸೀತರಾಮನ್ ಮರು ಆಯ್ಕೆಯಾಗಿದ್ರೆ, ಕೆ.ಸಿ.ರಾಮಮೂರ್ತಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಟ ಜಗ್ಗೇಶ್‍ಗೆ ಅವಕಾಶ ನೀಡಲಾಗಿದೆ.
ಕರ್ನಾಟಕ ಬಿಜೆಪಿ ಕೋರ್ ಕಮಿಟಿಯಿಂದ ನೀಡಲಾಗಿದ್ದ ನಿರ್ಮಲ್ ಕುಮಾರ್ ಸುರಾನಾ, ಗೀತಾ ವಿವೇಕಾನಂದ, ಲೇಹರ್ ಸಿಂಗ್, ಕೆ.ಸಿ.ರಾಮಮೂರ್ತಿ ಹೆಸರುಗಳನ್ನು ಕೈಬಿಟ್ಟ ಬಿಜೆಪಿ ಹೈಕಮಾಂಡ್, ತನ್ನದೇ ಪ್ರತ್ಯೇಕ ನಿರ್ಧಾರ ಪ್ರಕಟಿಸಿದೆ.
ರಾಜ್ಯಸಭೆ ಎಲೆಕ್ಷನ್‌ಗೆ 4ನೇ ಅಭ್ಯರ್ಥಿ ಕಣಕ್ಕಿಳಿಸಲು ಜೆಡಿಎಸ್ ನಿರ್ಧಾರ, ಮೈತ್ರಿ ಅನಿವಾರ್ಯ
ಜಗ್ಗೇಶ್ ಅಚ್ಚರಿ ಆಯ್ಕೆ
ಹೌದು...ನಟ ಜಗ್ಗೇಶ್ ಆಯ್ಕೆ ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿ ಮುಡಿಸಿದೆ. ಯಾವುದೇ ಟಿಕೆಟ್ ರೇಸ್‌ನಲ್ಲಿ ಇರಲಿಲಲ್ಲ. ಬಿಜೆಪಿ ಘಟಕದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಸಹ ಮಾಡಿರಲಿಲ್ಲ.ರಾಜ್ಯದ ಪಟ್ಟಿಯನ್ನು ಕೇಂದ್ರದ ವರಿಷ್ಠರು ಸೈಡಿಗಿಟ್ಟು ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಇದೀಗ ಮತ್ತೊಮ್ಮೆ ಜಗ್ಗೇಶ್ ಅವರ ಆಯ್ಕೆ ಮೂಲಕ ಅಚ್ಚರಿಯನ್ನು ಸಾಬೀತು ಮಾಡಿದ್ದಾರೆ. ಎಲ್ಲಾ ವಿಚಾರದಲ್ಲೂ ರಹಸ್ಯ ಉಳಿಸಿಕೊಳ್ಳುವಲ್ಲಿ ಎತ್ತಿದ ಕೈಯಾಗಿರುವ ಬಿಜೆಪಿಯ ವರಿಷ್ಠರು ವಿಧಾನ ಪರಿಷತ್ ಚುನಾವಣೆಯಲ್ಲೂ ನಮ್ಮದೇ ಅಂತಿಮ ನಿರ್ಧಾರ ಎಂದು ಸಾರಿದ್ದಾಗಿದೆ.
ಯಡಿಯೂರಪ್ಪನವರ ಪುತ್ರ ಬಿ. ವೈ. ವಿಜಯೇಂದ್ರ ಅವರಿಗೆ ಟಿಕೆಟ್ ಕನ್ಫರ್ಮ್ ಎಂದು ಹೇಳಲಾಗುತ್ತಿತ್ತು. ಆದರೆ, ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ ಹೊರತಾಗಿ ಇತರ ಇಬ್ಬರು ಅಚ್ಚರಿಯ ಆಯ್ಕೆಯಾಗಿತ್ತು. ಇದೀಗ ಜಗ್ಗೇಶ್ ಆಯ್ಕೆ ಸಹ ಅಚ್ಚರಿಗೆ ಕಾರಣವಾಗಿದೆ.
ಜಗ್ಗೇಶ್ ಹುಟ್ಟೂರು ಪೂಜೆ
ನಟ ಜಗ್ಗೇಶ್‌ಗೆ ರಾಜ್ಯಸಭೆ ಟಿಕೆಟ್ ಘೋಷಣೆ ಹಿನ್ನಲೆ ಹುಟ್ಟೂರು ಮಾಯಸಂದ್ರದಲ್ಲಿ ಪೂಜೆ ಪುನಸ್ಕಾರಗಳು ನಡೆದಿದ್ದು, ಇದರಲ್ಲಿ ಜಗ್ಗೇಶ್ ಸಹ ಭಾಗಿಯಾಗಿದ್ದಾರೆ.
ಕಾಲಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದು. ಪ್ರತಿ ಅಮಾವಾಸ್ಯೆ ವೇಳೆ ಪೂಜೆ ಸಲ್ಲಿಸುತ್ತಾರೆ. ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ನಾಳೆ(ಸೋವಮಾರ) ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಕರ್ನಾಟಕದಿಂದ ರಾಜ್ಯಸಭೆಗೆ ಹಾಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮರು ಆಯ್ಕೆ ಮಾಡುವಂತೆ ರಾಜ್ಯ ಬಿಜೆಪಿಯಿಂದ ಶಿಫಾರಸು ಮಾಡಲಾಗಿದ್ದರೂ ನಿರ್ಮಲಾ ಅವರಿಗೇ ಟಿಕೆಟ್ ಸಿಗುವುದು ಅನುಮಾನವಾಗಿತ್ತು. ಕರ್ನಾಟಕದಿಂದ ಅನ್ಯ ರಾಜ್ಯದವರ ಆಯ್ಕೆಗೆ ಕಳೆದ ಬಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿ ಕರ್ನಾಟಕ ಮೂಲದವರನ್ನೇ ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಚಿಂತನೆ ನಡೆದಿತ್ತು. ಆದ್ರೆ, ಬಿಜೆಪಿ ಹೈಕಮಾಂಡ್ ಅಂತಿಮವಾಗಿ ನಿರ್ಮಲಾ ಅವರನ್ನೇ ಕರ್ನಾಟಕ ರಾಜ್ಯಸಭೆಗೆ ಆಯ್ಕೆ ಮಾಡಿದೆ.
ಅದ್ದರಿಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನಾ ಅವರಿಗೆ ಮಣೆ ಹಾಕುವ ಸಾಧ್ಯತೆಗಳಿದ್ದವು. ಆದ್ರೆ, ಸ್ವತಃ ನಿರ್ಮಲ ಕುಮಾರ್ ಸುರಾನಾ ಅವರೇ ತಮಗೆ ಜ್ಯಸಭೆ ಟಿಕೆಟ್ ಬೇಡ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಅಂತಿಮವಾಗಿ ಹೈಕಮಾಂಡ್ ನಿರ್ಮಲಾ ಸೀತಾರಾಮನ್ ಅವರನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.
ರಾಜ್ಯದ ನಾಲ್ಕು ಸ್ಥಾನಗಳ ಪೈಕಿ ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಬಹುದಾಗಿದೆ. ಇನ್ನುಳಿದ ಒಂದು ಸ್ಥಾನ ಗೆಲ್ಲಲು ಇತರ ಪಕ್ಷಗಳ ಬೆಂಬಲ ಅತ್ಯಗತ್ಯ. ಇದರಿಂದಾಗಿ, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೋ ಅಥವಾ ಪಕ್ಷೇತರರಾಗಿ ಬೇರೋರ್ವ ಮುಖಂಡ ಕಣದಲ್ಲಿ ಇರುತ್ತಾರೋ ಎನ್ನುವುದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ.
ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ.
ಬಿಜೆಪಿ ರಾಜ್ಯಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಸ್ಪರ್ಧಿಸಲಿದ್ದಾರೆ.ಮಹಾರಾಷ್ಟ್ರದಿಂದ ಪಿಯೂಷ್ ಗೋಯಲ್, ಡಾ ಅನಿಲ್ ಸುಖದೇವ್ ರಾವ್ ಬೋಂಡೆ ಸ್ಪರ್ಧಿಸಲಿದ್ದಾರೆ. ರಾಜಸ್ಥಾನದಿಂದ ಘನಶ್ಯಾಮ್ ತಿವಾರಿ, ಉತ್ತರಪ್ರದೇಶದಿಂದ ಲಕ್ಷ್ಮೀಕಾಂತ್ ವಾಜಪೇಯಿ ಮತ್ತು ಡಾ. ರಾಧಾ ಮೋಹನ್ ಅಗರವಾಲ್ ಕಣಕ್ಕಿಳಿಯಲಿದ್ದಾರೆ.
