ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು 9 ವರ್ಷ ಪೂರೈಕೆ: ನಾಳೆ ಬಿಜೆಪಿಯಿಂದ ಸಾಧನಾ ಸಮಾವೇಶ!
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 9 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಜೂನ್ 23ರ ಶುಕ್ರವಾರ ನಗರದ ಗಾಜಿನ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ತಿಳಿಸಿದ್ದಾರೆ.
ತುಮಕೂರು (ಜೂ.22) : ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 9 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಜೂನ್ 23ರ ಶುಕ್ರವಾರ ನಗರದ ಗಾಜಿನ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ 9 ವರ್ಷಗಳ ಸಾಧನಾ ಸಮಾವೇಶದಲ್ಲಿ ತುಮಕೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪಕ್ಷದ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಸುಮಾರು 4500 ರಿಂದ 5000 ಜನರು ಪಾಲ್ಗೊಳ್ಳಲಿದ್ದಾರೆ ಎಂದರು. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಮಾರು 9 ತಂಡಗಳ ನೇತೃತ್ವದಲ್ಲಿ ಈ ಸಾಧನಾ ಸಮಾವೇಶ ನಡೆಯುತ್ತಿದ್ದು, ಯಡಿಯೂರಪ್ಪ ನೇತೃತ್ವದ ತಂಡ ತುಮಕೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಸಂಸದರಾದ ಜಿ.ಎಸ್,ಬಸವರಾಜು,ಪಿ.ಸಿ.ಮೋಹನ್, ಮಾಜಿ ಸಚಿವರಾದ ಮಾಧುಸ್ವಾಮಿ, ರೇಣುಕಾಚಾರ್ಯ, ಮಾಜಿ ಸಂಸದ ಮುದ್ದಹನುಮೇಗೌಡ ಅವರು ಭಾಗವಹಿಸಲಿದ್ದಾರೆ ಎಂದು ರವಿಶಂಕರ್ ವಿವರ ನೀಡಿದರು.
ಕಾಮಗಾರಿಗೆ ಹಣ ಬಿಡುಗಡೆ ಮಾಡಿ: ಸಿಎಂ ಸಿದ್ದುಗೆ ಉಗ್ರಪ್ಪ ಮನವಿ
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳ 9 ವರ್ಷಗಳ ಸಾಧನೆಯನ್ನೇ ಮುಂದಿಟ್ಟುಕೊಂಡು ಪ್ರೇರಣಾ ಸಮಾವೇಷಗಳನ್ನು ಆಯೋಜಿಸಲಾಗುತ್ತಿದೆ. ಇದರ ಜೊತೆಗೆ ಜೂನ್ 23ರಿಂದ 30ರವರಗೆ ಜಿಲ್ಲೆಯಲ್ಲಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಒಳಗೊಂಡ ಭಿತ್ತಿಪತ್ರವನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ ಎಂದರು.
ಮುಂದಿನ 2024ರ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ವ್ಯಾಪಾರಸ್ಥರು, ಉದ್ಯಮಿಗಳು, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಆಯೋಜಿಸಲಾಗುವುದು. ಅಲ್ಲದೆ ವಿಕಾಸತೀರ್ಥ ಎಂಬ ಕಾರ್ಯಕ್ರಮದ ಮೂಲಕ ಈಗಾಗಲೇ ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಂಡಿರುವ ಯೋಜನೆಗಳ ಸ್ಥಳಗಳಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭೇಟಿ ನೀಡಿ, ಜನರಿಗೆ ಕೇಂದ್ರದ ಯೋಜನೆಗಳ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷ ರವಿಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಯುವಮೋರ್ಚಾ ಅಧ್ಯಕ್ಷ ಯಶಸ್, ಮಾಧ್ಯಮ ಸಂಚಾಲಕ ಟಿ.ಆರ್.ಸದಾಶಿವಯ್ಯ, ಸಹ ಸಂಚಾಲಕ ಜೆ.ಜಗದೀಶ್, ಮುಖಂಡರಾದ ರುದ್ರೇಶ್ ಉಪಸ್ಥಿತರಿದ್ದರು.
ಲೋಕಸಭಾ ಚುನಾವಣೆಗೂ, ವಿಧಾನಸಭಾ ಚುನಾವಣೆಗೂ ಸಾಕಷ್ಟುವ್ಯತ್ಯಾಸಗಳಿವೆ. ಶಾಸನ ಸಭೆ ಚುನಾವಣೆಯಲ್ಲಿ ಸ್ಥಳೀಯ ವಿಚಾರಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತೇವೆ. ಆದರೆ ಲೋಕಸಭಾ ಚುನಾವಣೆಯಲ್ಲಿ ದೇಶದ ರಕ್ಷಣೆ, ನಮ್ಮ ಸಂಸ್ಕೃತಿ, ಪರಂಪರೆ ಇವುಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತವೆ. ಹಾಗಾಗಿ ಕರ್ನಾಟಕ ವಿಧಾನಸಭಾ ಫಲಿತಾಂಶ ಪುನರಾವರ್ತನೆಯಾಗಲು ಸಾಧ್ಯವೇ ಇಲ್ಲ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲಿದ್ದಾರೆ.
ರವಿಶಂಕರ್ ಬಿಜೆಪಿ ಜಿಲ್ಲಾಧ್ಯಕ್ಷ