ಪೈಲಟ್‌ಗೆ ಡಬಲ್ ಶಾಕ್: ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದಲೂ ಔಟ್!
ರಾಜಸ್ಥಾನ ರಾಜಕೀಯದಲ್ಲಿ ಹೈಡ್ರಾಮಾ| ಸಚಿನ್ ಪೈಲಟ್‌ಗೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್| ಉಪ ಮುಖ್ಯಮಂತ್ರಿ ಸ್ಥಾನದಿಂದ ಪೈಲಟ್ ವಜಾ
ರಾಜಸ್ಥಾನ ರಾಜಕೀಯ ಕ್ಷೇತ್ರದಲ್ಲಿ ಹೈಡ್ರಾಮಾ ಮುಂದುವರೆದಿದೆ. ಡಿಸಿಎಂ ಹಾಗೂ ರಾಜಸ್ಥಾನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಚಿನ್ ಪೈಲಟ್‌ರನ್ನು ಡಿಸಿಎಂ ಸ್ಥಾನದಿಂದ ವಜಾಗೊಳಿಸಲಾಗಿದೆ. ಅಲ್ಲದೆ, ಅವರಿಗೆ ಬೆಂಬಲ ಸೂಚಿಸಿದ್ದ ಇಬ್ಬರು ಸಚಿವರನ್ನೂ ಸ್ಥಾನದಿಂದ ತೆರವುಗೊಳಿಸಲಾಗಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಿದೆ.
ಕಳೆದೊಂದ ವಾರದಿಂದ ರಾಜಸ್ಥಾನ ಕಾಂಗ್ರೆಸ್‌ನಲಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಇದು ಸರ್ಕಾರ ಉರುಳಿ ಹೋಗುವ ಹಂತಕ್ಕೆ ತಲುಪಿತ್ತು. ಆದರೆ ಸೋಮವಾರಶಾಸಕರ ಸಭೆ ನಡೆಸಿ 102 ಶಾಸಕರ ಬಲಾಬಲ ತೋರಿಸುವ ಮೂಲಕ ಅಶೋಕ್ ಗೆಹ್ಲೋಟ್ ತಮ್ಮ ಸರ್ಕಾರವನ್ನು ಮತ್ತೆ ಭದ್ರಪಡಿಸಿದ್ದರು. ಇಷ್ಟೇ ಅಲ್ಲದೇ ಇಂದು ಕೂಡಾ ಶಾಸಕರ ಸಭೆಯನ್ನು ಕರೆಯಲಾಗಿತ್ತು. ಅಲ್ಲದೇ ಸತತ ಎರಸನೇ ಬಾರಿ ಈ ಸಭೆಯಲ್ಲಿ ಪಾಲ್ಗೊಳ್ಳದ ಪೈಲಟ್‌ರನ್ನು ಡಿಸಿಎಂ ಸ್ಥಾನದಿಂದ ವಜಾಗೊಳಿಸಲಾಗಿದೆ.
ಬಿಜೆಪಿಯತ್ತ ಸಚಿನ್ ಪೈಲಟ್: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಪತನ?
ಶಾಸಕಾಂಗ ಸಭೆಗೆ ಗೈರು
ಜೈಪುರದಲ್ಲಿ ನಿನ್ನೆ ನಡೆದ ಸಿಎಲ್ಪಿ ಸಭೆಯಲ್ಲಿ ಬಂಡಾಯಗಾರ ಸಚಿನ್ ಪೈಲಟ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿತ್ತು. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಮಾಡುವ ಮೂಲಕ ಸಚಿನ್ ಪೈಲಟ್‌ಗೆ ಪರೋಕ್ಷ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೇ ನಿನ್ನೆ, ಸೋಮವಾರ ನಡೆದ ಶಾಸಕರ ಸಭೆಯಲ್ಲಿ ಸಚಿನ್ ಪೈಲಟ್ ಬೆಂಬಲಿತ ಶಾಸಕರು ಪಾಲ್ಗೊಂಡಿರಲಿಲ್ಲ. ಇಂದು ಜೈಪುರದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ನಾಯಕರು ಇಂದು ಮತ್ತೊಂದು ಸುತ್ತಿನ ಶಾಸಕರ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ, ಈ ಸಭೆಗೂ ಸಹ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿತ ಶಾಸಕರೂ ಹಾಜರಾಗಿರಲಿಲ್ಲ.
ಹೀಗಾಗಿ ಹೈಕಮಾಂಡ್ ನಾಯಕರ ನಿರ್ದೇಶನದ ಮೇರೆಗೆ ಇಂದು ರಾಜಸ್ಥಾನ ಕಾಂಗ್ರೆಸ್ ನಾಯಕರು ಜೈಪುರದ ಖಾಸಗಿ ಹೋಟೆಲ್‌ನಲ್ಲಿ ಸಮಾಲೋಚನೆ ನಡೆಸಿದ್ದಾರೆ. ಈ ಸಮಾಲೋಚನೆಯಲ್ಲಿ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿತ ಸಚಿವರಾದ ರಮೇಶ್ ಮೀನಾ ಮತ್ತು ವಿಶ್ವೇಂದರ್ ಸಿಂಗ್‌ರನ್ನೂ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಸಂಬಂಧ ಸಿಎಂ ಗೆಹ್ಲೋಟ್ ರಾಜ್ಯಪಾಲರಿಗೆ ವಿವರಣೆ ನೀಡಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದಿಂದಲೂ ಔಟ್
ಪಕ್ಷದ ಆದೇಶವನ್ನು ಉಲ್ಲಂಘಿಸಿರುವ ಸಚಿನ್ ಪೈಲಟ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒಕ್ಕೊರಲಿನ ಒತ್ತಾಯ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಹೈಕಮಾಂಡ್ ಕಾರ್ಯೋನ್ಮುಖವಾಗಿದೆ ಎನ್ನಲಾಗಿದೆ. ಅದರ ಮೊದಲ ಭಾಗವಾಗಿ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಯಿಂದ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಲಾಯಿತು.
ಗೊಂದಲದಲ್ಲಿ ಪೈಲಟ್
ಕಾಂಗ್ರೆಸ್‌ನ ಈ ನಡೆ ಸಚಿನ್ ಪೈಲಟ್‌ರನ್ನು ಗೊಂದಲಕ್ಕೀಡು ಮಾಡಿದೆ. ಯಾಕೆಂದರೆ ಈಗಿರುವ ಶಾಸಕರ ಜೊತೆ ಪಕ್ಷ ಬದಲಾಯಿಸಿದ್ರೆ ಲಾಭ ಇಲ್ಲ, ಪುನಃ ಕಾಂಗ್ರೆಸ್ ಪಕ್ಷಕ್ಕೆ ಹೋದರೇ ಮುಜುಗರ. ಹೀಗಾಗಿ ಮುಂದೆ ಸಚಿನ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುವುದು ಭಾರೀ ಕುತೂಹಲ ಮೂಡಿಸಿದೆ.