ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆಯೇ ವಿಧಾನಸಭೆ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ಸಚಿವ ಸ್ಥಾನ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾವೇರಿ (ಜೂ.04): ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆಯೇ ವಿಧಾನಸಭೆ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ಸಚಿವ ಸ್ಥಾನ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಕನಸಲ್ಲಿಯೂ ಸ್ಪೀಕರ್ ಆಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಪಕ್ಷದ ನಾಯಕತ್ವವೇ ನನಗೆ ಈ ಜವಾಬ್ದಾರಿ ನೀಡಿದೆ. ಹೊಸ ಸ್ಪೀಕರ್ ಆಯ್ಕೆಯಾಗುವವರೆಗೆ ನಾನು ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತೇನೆ" ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು, ಮುಖ್ಯಮಂತ್ರಿ ಹುದ್ದೆಯನ್ನೇ ಬದಲಾಯಿಸಿರುವ ನಾಯಕತ್ವದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಅವರು ಹೇಳಿದರು. "ಕಳೆದ ಬಾರಿ ಹೈಕಮಾಂಡ್ ಸೂಚನೆಯ ಮೇರೆಗೆ ಇಷ್ಟವಿಲ್ಲದಿದ್ದರೂ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಸ್ವೀಕರಿಸಿದ್ದೆ. ಡಿ.ಕೆ. ಶಿವಕುಮಾರ್, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮನವಿಯ ಮೇರೆಗೆ ಆ ಜವಾಬ್ದಾರಿ ವಹಿಸಿಕೊಂಡಿದ್ದೆ" ಎಂದರು.

ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಲಮಾಣಿ, "ರಾಜ್ಯ ಸಚಿವ ಸಂಪುಟದಲ್ಲಿ ಇನ್ನೂ 19 ಸ್ಥಾನಗಳು ಖಾಲಿ ಇವೆ. ಜಾತಿ, ಪ್ರಾದೇಶಿಕ ಮತ್ತು ರಾಜಕೀಯ ಸಮೀಕರಣಗಳನ್ನು ಪರಿಗಣಿಸಿ ಸಚಿವ ಸ್ಥಾನಗಳನ್ನು ಹಂಚಲಾಗುತ್ತದೆ. ಕಳೆದ ಬಾರಿ ಪಕ್ಷದ ನಾಯಕತ್ವದಿಂದ ನನಗೆ ಭರವಸೆ ನೀಡಲಾಗಿತ್ತು. ಈ ಬಾರಿ ನಮ್ಮ ಸಮುದಾಯಕ್ಕೂ ಸಚಿವ ಸ್ಥಾನ ದೊರೆಯಲಿದೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು.

"ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ನಮ್ಮ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಇರುತ್ತಿತ್ತು. ಆದರೆ ಕಳೆದ ಬಾರಿ ಅದು ಸಾಧ್ಯವಾಗಲಿಲ್ಲ. ಈ ಬಾರಿ ಆ ಕೊರತೆ ನೀಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ಸಮುದಾಯವನ್ನು ಪ್ರತಿನಿಧಿಸುವ ಏಕೈಕ ಶಾಸಕನಾಗಿ ನನ್ನ ಹಕ್ಕಿನ ಬೇಡಿಕೆಯನ್ನು ಪಕ್ಷದ ಮುಂದೆ ಇಡುತ್ತಿದ್ದೇನೆ" ಎಂದು ತಿಳಿಸಿದರು.

ಸಚಿವ ಸ್ಥಾನ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ಗೆದ್ದು ಬಂದ ಪ್ರತಿಯೊಬ್ಬ ಶಾಸಕರಿಗೂ ಸಚಿವರಾಗುವ ಆಸೆ ಇರುತ್ತದೆ. ಆದರೆ ಸಂವಿಧಾನಾತ್ಮಕವಾಗಿ ಸಚಿವರ ಸಂಖ್ಯೆಗೆ ಮಿತಿ ಇದೆ. ಹೀಗಾಗಿ ಅಂತಿಮ ನಿರ್ಧಾರವನ್ನು ಪಕ್ಷದ ನಾಯಕತ್ವವೇ ಕೈಗೊಳ್ಳಲಿದೆ" ಎಂದರು.

ಹಿರಿಯ ನಾಯಕ ಹೆಚ್.ಕೆ. ಪಾಟೀಲ್ ಕುರಿತು ಮಾತನಾಡಿದ ಲಮಾಣಿ, "ಹೆಚ್.ಕೆ. ಪಾಟೀಲ್ ಅವರು ನನ್ನ ರಾಜಕೀಯ ಗುರುಗಳು. ಅವರು ದೂರದೃಷ್ಟಿಯ ನಾಯಕರು. ಅವರನ್ನು ಆಡಳಿತ ವ್ಯವಸ್ಥೆಯಲ್ಲಿಯೇ ಬಳಸಿಕೊಳ್ಳುವುದು ರಾಜ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ" ಎಂದು ಹೇಳಿದರು.

ಸಾರ್ವಜನಿಕವಾಗಿ ಹೇಳಿಕೆ ನೀಡಬಾರದು

ಇದೇ ವೇಳೆ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಶ್ರೀನಿವಾಸ್ ಮಾನೆ ಮತ್ತು ಬಸವರಾಜ ಶಿವಣ್ಣವರ ನಡುವಿನ ಭಿನ್ನಾಭಿಪ್ರಾಯದ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, "ಸತ್ಯಾಂಶ ತಿಳಿಯದೆ ಯಾರೂ ಸಾರ್ವಜನಿಕವಾಗಿ ಹೇಳಿಕೆ ನೀಡಬಾರದು. ಸಣ್ಣ ಭಿನ್ನಾಭಿಪ್ರಾಯಗಳನ್ನು ದೊಡ್ಡದಾಗಿಸದೇ ಪರಸ್ಪರ ತಾಳ್ಮೆಯಿಂದ ವರ್ತಿಸಬೇಕು. ಪಕ್ಷದೊಳಗಿನ ಯಾವುದೇ ಬಿರುಕು ಹೆಚ್ಚಾಗದಂತೆ ಸರಿಪಡಿಸುವ ಪ್ರಯತ್ನ ಮಾಡಲಾಗುತ್ತದೆ" ಎಂದು ತಿಳಿಸಿದರು.

ಮುಖ್ಯಮಂತ್ರಿ ಬದಲಾವಣೆಯ ಸಂದರ್ಭವನ್ನು ಉಲ್ಲೇಖಿಸಿದ ಅವರು, "ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಬಲವನ್ನು ಪ್ರದರ್ಶಿಸುವ ಅವಕಾಶ ಇದ್ದರೂ, ಹೈಕಮಾಂಡ್ ನಿರ್ಧಾರಕ್ಕೆ ಗೌರವ ನೀಡಿ ತಲೆಬಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ತೀರ್ಮಾನವೇ ಅಂತಿಮ" ಎಂದು ಹೇಳಿದರು.