ಬಿಜೆಪಿ ನಾಯಕರಿಗೆ ಸಂಸ್ಕಾರ, ಸಂಸ್ಕೃತಿ ಇಲ್ಲ. ಮಹಿಳೆಯರು, ಅಧಿಕಾರಿಗಳಿಗೆ ಅವಹೇಳನಕಾರಿಯಾಗಿ ಮಾತನಾಡುವಂತೆ ಆರ್‌ಎಸ್‌ಎಸ್ ಟ್ರೈನಿಂಗ್ ನೀಡಿರಬೇಕು ಎಂದು ಸಚಿವ ಶಿವರಾಜ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳ (ಜು.07): ಬಿಜೆಪಿ ನಾಯಕರಿಗೆ ಸಂಸ್ಕಾರ, ಸಂಸ್ಕೃತಿ ಇಲ್ಲ. ಮಹಿಳೆಯರು, ಅಧಿಕಾರಿಗಳಿಗೆ ಅವಹೇಳನಕಾರಿಯಾಗಿ ಮಾತನಾಡುವಂತೆ ಆರ್‌ಎಸ್‌ಎಸ್ ಟ್ರೈನಿಂಗ್ ನೀಡಿರಬೇಕು ಎಂದು ಸಚಿವ ಶಿವರಾಜ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಧಾನ ಪರಿಷತ್ ವಿಪಕ್ಷ ಮುಖ್ಯಸಜೇತಕ ಎನ್.ರವಿಕುಮಾರ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಬಗ್ಗೆ ಮಾತನಾಡಿರುವ ಹೇಳಿಕೆಗೆ ಕಾರಟಗಿ ತಾಲೂಕಿನ ಬೇವಿನಾಳದಲ್ಲಿ ಪ್ರತಿಕ್ರಿಯೆ ನೀಡಿದರು. ಎನ್.ರವಿಕುಮಾರ, ಸಿ.ಟಿ. ರವಿ ಸೇರಿದಂತೆ ಬಿಜೆಪಿ ಹಲವು ನಾಯಕರು ಆರ್‌ಎಸ್‌ಎಸ್‌ನಿಂದ ಟ್ರೈನಿಂಗ್ ಪಡೆದಿರಬೇಕು. ಬಿಜೆಪಿಗರು ಸಂಸ್ಕಾರ, ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರೇ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ರಾಜ್ಯದ ಸಿಎಸ್ ವಿರುದ್ಧ ರವಿಕುಮಾರ ಹಗುರುವಾಗಿ ಮಾತಾಡಿದ್ದು ತಪ್ಪು ಎಂದರು.
ಅಭಿವೃದ್ಧಿ ಕಾಮಗಾರಿಗೆ ಶೀಘ್ರ ಚಾಲನೆ: ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯ ಸಹಿಸಿಕೊಳ್ಳದ ಬಿಜೆಪಿ ನಾಯಕರಿಗೆ ಸುಳ್ಳು ಹೇಳುವುದೇ ಹವ್ಯಾಸವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ಸಾಧನೆ ಅರಗಿಸಿಕೊಳ್ಳದ ಬಿಜೆಪಿಯ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ, ಸರ್ಕಾರ ನುಡಿದಂತೆ ನಡೆಯುತ್ತಿದ್ದು ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದೆ. ಇದನ್ನು ಸಹಿಸಿಕೊಳ್ಳದೆ ಆರೋಪ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಬಳಿ ಸಾಕಷ್ಟು ಅನುದಾನವಿದ್ದು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಹಿಂದೇಟು ಹಾಕುವ ಪ್ರಶ್ನಿಯೇ ಇಲ್ಲ.
ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ₹ 5000 ಕೋಟಿ ಮೀಸಲು ಇಡಲಾಗಿದೆ. ಪ್ರತಿ ವರ್ಷ ಒಂದು ಕ್ಷೇತ್ರಕ್ಕೆ ₹ 200 ಕೋಟಿ ಅನುದಾನ ನೀಡಲಾಗುತ್ತಿದೆ, ನಮ್ಮ ಸರ್ಕಾರದಲ್ಲಿ 150 ಹಾಸ್ಟೆಲ್ ಮಂಜೂರಾತಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ದೇವದುರ್ಗ ಬಿಟ್ಟರೆ ಕುಷ್ಟಗಿಗೆ ಹೆಚ್ಚು ಅನುದಾನ ಕೊಡಲಾಗಿದೆ. ಬಿಜೆಪಿ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಅನುದಾನ ಕೊಡುತ್ತಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದ ಅವರು, ಕೇವಲ ಸುಳ್ಳು ಹೇಳುವುದು ಹಾಗೂ ಸರ್ಕಾರದ ದೂಷಣೆ ಮಾಡುವುದೇ ಅವರ ಒಂದು ಹವ್ಯಾಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ನೀರಾವರಿ ಇಲಾಖೆಯ ಸಚಿವ ಎನ್.ಎಸ್. ಬೋಸರಾಜ ಮಾತನಾಡಿ, ಕೆರೆ ತುಂಬಿಸುವ ಕಾರ್ಯವೂ ರಾಷ್ಟ್ರೀಯ ಹೆದ್ದಾರಿ ಮಾರ್ಗ ಸೂಚಿಯನ್ವಯ ಹಾಗೂ ರೈತರ ತಕರಾರು ತೊಂದರೆ ಹಾಗೂ ಸರ್ವೇ ಕಾರ್ಯ, ಅರಣ್ಯ ಇಲಾಖೆಯ ನಿಯಮಗಳು ಸೇರಿದಂತೆ ಅನೇಕ ತೊಡಕುಗಳಿಂದಾಗಿ ಕೆರೆ ತುಂಬಿಸುವುದು ಸ್ವಲ್ಪ ವಿಳಂಬವಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗುವ ಲಕ್ಷಣಗಳಿದ್ದು ಶೀಘ್ರದಲ್ಲಿ ಕಾಮಗಾರಿ ಮುಗಿಸಿಕೊಡಲಾಗುತ್ತದೆ ಎಂದರು.

