ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಗೆ ಬಳಿ ಜಮಾಯಿಸಿದ್ದ ಸೈಲೆಂಟ್‌ ಸುನೀಲನ ಬೆಂಬಲಿಗರು, ಏಕಾಏಕಿ ಕಚೇರಿಯ ಮೊದಲ ಮಹಡಿಗೆ ನುಗ್ಗಿ ಭಾಸ್ಕರ್‌ ರಾವ್‌ ವಿರುದ್ಧ ಧಿಕ್ಕಾರ ಕೂಗಿದರು. ಕೆಲವು ಕಾರ್ಯಕರ್ತರು ಕಚೇರಿ ಒಳಗೆ ಮಲಗಿ ಧರಣಿ ನಡೆಸಿದರು. 

ಬೆಂಗಳೂರು(ಏ.13):  ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಐಪಿಎಸ್‌ ಅಧಿಕಾರ ಭಾಸ್ಕರ್‌ ರಾವ್‌ಗೆ ಬಿಜೆಪಿ ಟಿಕೆಟ್‌ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ರೌಡಿ ಶೀಟರ್‌ ಸೈಲೆಂಟ್‌ ಸುನೀಲ್‌ನ ಬೆಂಬಲಿಗರು ಬುಧವಾರ ರಾಜ್ಯ ಬಿಜೆಪಿ ಕಚೇರಿಗೆ ನುಗ್ಗಿ ಘೋಷಣೆ ಕೂಗಿ ಗಲಾಟೆ ಮಾಡಿದ ಘಟನೆ ನಡೆದಿದೆ.

ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಗೆ ಬಳಿ ಜಮಾಯಿಸಿದ್ದ ಸೈಲೆಂಟ್‌ ಸುನೀಲನ ಬೆಂಬಲಿಗರು, ಏಕಾಏಕಿ ಕಚೇರಿಯ ಮೊದಲ ಮಹಡಿಗೆ ನುಗ್ಗಿ ಭಾಸ್ಕರ್‌ ರಾವ್‌ ವಿರುದ್ಧ ಧಿಕ್ಕಾರ ಕೂಗಿದರು. ಕೆಲವು ಕಾರ್ಯಕರ್ತರು ಕಚೇರಿ ಒಳಗೆ ಮಲಗಿ ಧರಣಿ ನಡೆಸಿದರು. ಕಚೇರಿ ಒಳಗೆ ಪ್ರತಿಭಟನೆ ನಿರತ ಕಾರ್ಯಕರ್ತರನ್ನು ಹೊರಗೆ ಕಳುಹಿಸಲು ಪೊಲೀಸರು ಹರಸಾಹಸಪಟ್ಟರು.

ಚುನಾವಣೆ ಹಿನ್ನೆಲೆ: ರೌಡಿ ಸೈಲೆಂಟ್‌ ಸುನೀಲ್‌ನಿಗೆ ಪೊಲೀಸರ ಖಡಕ್‌ ಎಚ್ಚರಿಕೆ

ಪಕ್ಷಕ್ಕೆ ದುಡಿದವರಿಗೆ ಟಿಕೆಟ್‌ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಳಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದರು. ಪ್ರತಿಭಟನೆ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಕೆಲವು ಮುಖಂಡರನ್ನು ಸಭೆಗೆ ಆಹ್ವಾನಿಸಿ ಚರ್ಚಿಸಿದರು.

ಈ ವೇಳೆ ಮಾತನಾಡಿದ ರವಿಕುಮಾರ್‌, ಚಾಮರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಭಾಸ್ಕರ್‌ ರಾವ್‌ ಬದಲಾವಣೆ ಮಾಡುವಂತೆ ಹೇಳಿದ್ದಾರೆ. ಮಂಡಲ ಅಧ್ಯಕ್ಷರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡುತ್ತಿದ್ದೇನೆ. ನಿಮ್ಮ ಹಾಗೆ ನಾನೂ ಕಾರ್ಯಕರ್ತ. ನಿಮ್ಮ ಬೇಡಿಕೆ ಬಗ್ಗೆ ಬರೆದುಕೊಡಿ. ನಿಮ್ಮ ಪ್ರತಿನಿಧಿಯಾಗಿ ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ, ಮನವಿಯನ್ನು ಕೇಂದ್ರಕ್ಕೆ ಕಳುಹಿಸಿ ಕೊಡುತ್ತೇನೆ. ಚಾಮರಾಜಪೇಟೆಯ ಸದ್ಯದ ಪರಿಸ್ಥಿತಿ ಕುರಿತು ವರದಿ ಕಳುಹಿಸುತ್ತೇವೆ. ನಮ್ಮ ಕಾರ್ಯಕರ್ತರಾಗಿರುವುದರಿಂದ ನ್ಯಾಯ ಕೊಡಿಸಲೇಬೇಕಿದೆ. ಚಾಮರಾಜಪೇಟೆಯಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಿಸೋಣ ಎಂದು ಕರೆ ನೀಡಿದರು.

ಚಾಮರಾಜಪೇಟೆ ಮಂಡಲ ಅಧ್ಯಕ್ಷ ಕೇಶವ್‌ ಮಾತನಾಡಿ, ಬಿಜೆಪಿ ಅಭ್ಯರ್ಥಿಗಳ ಪಟ್ಟಿಬಿಡುಗಡೆಯಾಗಿದೆ. ಭಾಸ್ಕರ್‌ ರಾವ್‌ ಅವರನ್ನು ಆಯ್ಕೆ ಮಾಡಲಾಗಿದೆ. ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಈ ಬಾರಿ ಬಿಜೆಪಿ ಪಕ್ಷದ ಬಾವುಟ ಹಾರಿಸಬೇಕು ಎಂದು ತೀರ್ಮಾನಿಸಿದ್ದೇವೆ. ಭಾಸ್ಕರ್‌ ರಾವ್‌ ಹೆಸರು ಕೋರ್‌ ಕಮಿಟಿಯಿಂದ ಹೋಗಿರಲಿಲ್ಲ. ಆದರೂ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.