Asianet Suvarna News Asianet Suvarna News

ಚುನಾವಣೆ ಹಿನ್ನೆಲೆ: ರೌಡಿ ಸೈಲೆಂಟ್‌ ಸುನೀಲ್‌ನಿಗೆ ಪೊಲೀಸರ ಖಡಕ್‌ ಎಚ್ಚರಿಕೆ

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ತಯಾರಿ ನಡೆಸಿದ್ದ ರೌಡಿ ಶೀಟರ್‌ ಸುನೀಲ್‌ ಕುಮಾರ್‌ ಅಲಿಯಾಸ್‌ ಸೈಲೆಂಟ್‌ ಸುನೀಲನಿಂದ ಅಮೃತಹಳ್ಳಿ ಠಾಣೆ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಬಿಸಿ ಮುಟ್ಟಿಸಿದ್ದಾರೆ. 

bengaluru police gave shock to silent sunil gvd
Author
First Published Apr 9, 2023, 7:42 AM IST

ಬೆಂಗಳೂರು (ಏ.09): ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ತಯಾರಿ ನಡೆಸಿದ್ದ ರೌಡಿ ಶೀಟರ್‌ ಸುನೀಲ್‌ ಕುಮಾರ್‌ ಅಲಿಯಾಸ್‌ ಸೈಲೆಂಟ್‌ ಸುನೀಲನಿಂದ ಅಮೃತಹಳ್ಳಿ ಠಾಣೆ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಬಿಸಿ ಮುಟ್ಟಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ರೌಡಿ ಶೀಟರ್‌ಗಳನ್ನು ಠಾಣೆಗೆ ಕರೆಸಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಅದರಂತೆ ಅಮೃತಹಳ್ಳಿ ನಿವಾಸಿ ರೌಡಿ ಶೀಟರ್‌ ಸೈಲೆಂಟ್‌ ಸುನೀಲನಿಗೂ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೇಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ. ಸಿಆರ್‌ಪಿಸಿ 110 ಅಡಿಯಲ್ಲಿ .15 ಲಕ್ಷ ಮೊತ್ತದ ಬಾಂಡ್‌ನಲ್ಲಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.

ಚುನಾವಣೆಗೆ ಸ್ಪರ್ಧೆಗೆ ಯತ್ನ: ರೌಡಿ ಶೀಟರ್‌ ಸೈಲೆಂಟ್‌ ಸುನೀಲ ಈ ಬಾರಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಆಸಕ್ತನಾಗಿದ್ದ. ಅದರಂತೆ ಬಿಜೆಪಿ ಸದಸ್ಯತ್ವನ್ನೂ ಪಡೆದುಕೊಂಡಿದ್ದ. ಬಿಜೆಪಿ ನಾಯಕರನ್ನು ಸೇರಿಸಿ ಕಾರ್ಯಕ್ರಮವನ್ನೂ ಮಾಡಿದ್ದ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದ ಕಾಂಗ್ರೆಸ್‌ ನಾಯಕರು, ಬಿಜೆಪಿ ರೌಡಿ ಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ರೌಡಿ ಮೋರ್ಚಾ ತೆರೆದಿದೆ ಎಂದು ಕಟುವಾಗಿ ಟೀಕಿಸಿದ್ದರು. ಇದರಿಂದ ಮುಜುಗರ ಅನುಭವಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸೈಲೆಂಟ್‌ ಸುನೀಲನ ಬಿಜೆಪಿ ಸದಸ್ಯತ್ವ ರದ್ದುಪಡಿಸಿದ್ದರು.

ಅಮುಲ್‌ VS ನಂದಿನಿ ಫೈಟ್‌: ಗುಜರಾತ್‌ ಕಂಪನಿ ವಿರುದ್ಧ ರಾಜ್ಯದಲ್ಲಿ ಜನಾಕ್ರೋಶ

ಸೈಲೆಂಟ್‌ ಸುನೀಲ್‌ ಬಿಜೆಪಿ ಸದಸ್ಯತ್ವ ರದ್ದು: ಕುಖ್ಯಾತ ಪಾತಕಿ ಸೈಲೆಂಟ್‌ ಸುನೀಲ್‌ ಅವರ ಹೆಸರು ಮತ್ತೊಮ್ಮೆ ಆಡಳಿತಾರೂಢ ಬಿಜೆಪಿಯೊಂದಿಗೆ ತಳಕು ಹಾಕಿಕೊಂಡು ವಿವಾದ ಉಂಟಾಗಿದೆ. ಈತನ ಬಿಜೆಪಿ ಸದಸ್ಯತ್ವದ ಕಾರ್ಡ್‌ ವೈರಲ್‌ ಆಗುತ್ತಿದ್ದಂತೆಯೇ ಸದಸ್ಯತ್ವ ರದ್ದು ಮಾಡಲಾಗಿದೆ.

ಈ ಹಿಂದೆ ಒಂದು ಸಲ ಈತನ ಹೆಸರು ಬಿಜೆಪಿ ಜತೆ ತಳಕು ಹಾಕಿಕೊಂಡಿತ್ತು. ಆದರೆ, ಈ ಬಾರಿ ಸುನೀಲ್‌ ಅವರು ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ. ಸದಸ್ಯತ್ವ ಪಡೆದಿರುವುದನ್ನು ತಾವೇ ತಮ್ಮ ಮೊಬೈಲ್‌ನಲ್ಲಿ ಸದಸ್ಯತ್ವದ ಕಾರ್ಡ್‌ ಪ್ರದರ್ಶಿಸಿರುವ ಫೋಟೋಗಳು ವೈರಲ್‌ ಆಗಿವೆ. ಅಲ್ಲದೆ, ಬಿಜೆಪಿ ಚಿಹ್ನೆಯುಳ್ಳ ಶಲ್ಯವನ್ನು ಧರಿಸಿಕೊಂಡು ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಇದರ ಬೆನ್ನಲ್ಲೇ ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಬಳಿಕ ಸುನೀಲ್‌ ಸದಸ್ಯತ್ವ ರದ್ದುಪಡಿಸಿ ಬಿಜೆಪಿ ಪ್ರಕಟಣೆ ನೀಡಿದೆ.

ಬಿಜೆಪಿ ಸ್ಪಷ್ಟನೆ: ‘ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸದಸ್ಯತಾ ಅಭಿಯಾನದ ಸಮಯದಲ್ಲಿ ಅಥವಾ ಮಿಸ್‌ ಕಾಲ್‌ ಮೂಲಕ ಸೈಲೆಂಟ್‌ ಸುನೀಲ್‌ ಎಂಬುವವರು ಬಿಜೆಪಿ ಸದಸ್ಯತ್ವ ಪಡೆದಿರಬಹುದು. ನಮ್ಮ ರಾಜ್ಯಾಧ್ಯಕ್ಷರು ಹಿಂದೆಯೇ ಈ ತರಹದ ಹಿನ್ನೆಲೆಯುಳ್ಳವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಸೈಲೆಂಟ್‌ ಸುನೀಲ್‌ ಎಂಬುವವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ’ ಎಂದು ಬೆಂಗಳೂರು ಕೇಂದ್ರ ಘಟಕದ ಅಧ್ಯಕ್ಷರಾದ ಮಂಜುನಾಥ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮುಲ್‌ನಿಂದ ನಂದಿನಿಗೆ ನಷ್ಟವಿಲ್ಲ: ಪೈಪೋಟಿ ಎದುರಿಸಲು ನಾವು ಸಮರ್ಥವೆಂದ ಕೆಎಂಎಫ್‌

ಹಿಂದೊಮ್ಮೆ ಸೈಲೆಂಟ್‌ ಸುನೀಲ್‌ ಚಾಮರಾಜಪೇಟೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಶಾಸಕ ಉದಯ್‌ ಗರುಡಾಚಾರ್‌ ಸೇರಿದಂತೆ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. ಆ ವೇಳೆ ವಿವಾದ ತೀವ್ರವಾಗಿ ಕೊನೆಗೆ ಸೈಲೆಂಟ್‌ ಸುನೀಲ್‌ಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ವತಃ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ರಿಮಾರ್‌ ಕಟೀಲ್‌ ಅವರೂ ಸ್ಪಷ್ಟನೆ ನೀಡಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios