Asianet Suvarna News Asianet Suvarna News

ಅಕ್ಕಿ ಕೊಡುತ್ತೇವೆಂದು ಒಪ್ಪಿ ಈಗ ಕೈ ಕೊಟ್ಟ ಕೇಂದ್ರ ಸರ್ಕಾರ: ಸಿಎಂ ಸಿದ್ದು ಗಂಭೀರ ಆರೋಪ

ಅನ್ನಭಾಗ್ಯ ಅಡಿ ಹೆಚ್ಚುವರಿ ಅಕ್ಕಿ ವಿತರಣೆಗೆ ಪೂರಕವಾಗಿ 15 ದಿನದೊಳಗಾಗಿ 2.28 ಲಕ್ಷ ಟನ್‌ ಹೆಚ್ಚುವರಿ ಅಕ್ಕಿಯನ್ನು ಕರ್ನಾಟಕ ರಾಜ್ಯಕ್ಕೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದ ಭಾರತೀಯ ಆಹಾರ ನಿಗಮವು, ಮರು ದಿನವೇ ಕೇಂದ್ರದ ಸೂಚನೆ ಮೇರೆಗೆ ಅಕ್ಕಿ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. 

rice sale issue to states cm siddaramaiah slams against central government order gvd
Author
First Published Jun 15, 2023, 3:40 AM IST

ಬೆಂಗಳೂರು (ಜೂ.15): ಕಾಂಗ್ರೆಸ್‌ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ‘ಅನ್ನಭಾಗ್ಯ’ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಅನ್ನಭಾಗ್ಯ ಅಡಿ ಹೆಚ್ಚುವರಿ ಅಕ್ಕಿ ವಿತರಣೆಗೆ ಪೂರಕವಾಗಿ 15 ದಿನದೊಳಗಾಗಿ 2.28 ಲಕ್ಷ ಟನ್‌ ಹೆಚ್ಚುವರಿ ಅಕ್ಕಿಯನ್ನು ಕರ್ನಾಟಕ ರಾಜ್ಯಕ್ಕೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದ ಭಾರತೀಯ ಆಹಾರ ನಿಗಮವು, ಮರು ದಿನವೇ ಕೇಂದ್ರದ ಸೂಚನೆ ಮೇರೆಗೆ ಅಕ್ಕಿ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಜುಲೈ 1 ರಿಂದ ಪ್ರತಿಯೊಬ್ಬ ಬಿಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಹೆಚ್ಚುವರಿ 5 ಕೆ.ಜಿ. ಸೇರಿ ತಲಾ 10 ಕೆ.ಜಿ. ಅಕ್ಕಿ ನೀಡುವ ಗ್ಯಾರಂಟಿ ಯೋಜನೆ ಜಾರಿ ವಿಳಂಬವಾಗುವ ಸಾಧ್ಯತೆಯಿದೆ. 

ಈ ಹಿನ್ನೆಲೆಯಲ್ಲಿ ಬುಧವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಅಕ್ಕಿ ನೀಡುವುದಾಗಿ ಹೇಳಿ ಅನಂತರ ನಿಲುವು ಬದಲಿಸಿದ ನಿಗಮದ ಈ ಧೋರಣೆಗೆ ಕೇಂದ್ರ ಸರ್ಕಾರದ ಚಿತಾವಣೆ ಕಾರಣ. ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ’ ಎಂಬ ಗಂಭೀರ ಆರೋಪ ಮಾಡಿದ್ದಾರೆ. ‘ಕೇಂದ್ರದ ರಾಜಕೀಯ ನಿರ್ಧಾರದಿಂದ ಅವರು ಬಡವರ ಹಾಗೂ ಕನ್ನಡಿಗರ ವಿರೋಧಿ ಎಂಬುದು ಸಾಬೀತಾಗಿದೆ. ಕೇಂದ್ರವು ಎಷ್ಟೇ ರಾಜಕೀಯ ಷಡ್ಯಂತ್ರ ನಡೆಸಿದರೂ ನಾವು ಅಕ್ಕಿ ನೀಡುವುದು ಗ್ಯಾರಂಟಿ. ಈ ಸಂಬಂಧ ತೆಲಂಗಾಣ ಹಾಗೂ ಛತ್ತೀಸ್‌ಗಢ ಸರ್ಕಾರದ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇನೆ’ ಎಂದೂ ಹೇಳಿದರು.

ಸಭೆಯಲ್ಲಿ ಸುರ್ಜೇವಾಲ ಪಾಲ್ಗೊಂಡಿದ್ದರಲ್ಲಿ ತಪ್ಪೇನಿಲ್ಲ: ಸಚಿವ ಚಲುವರಾಯಸ್ವಾಮಿ

‘ಭಾರತೀಯ ಆಹಾರ ನಿಗಮವು ಜೂ.8 ರಂದು ತಮ್ಮ ಬಳಿ 7 ಲಕ್ಷ ಟನ್‌ ಅಕ್ಕಿ ಲಭ್ಯವಿದೆ ಎಂದು ಹೇಳಿತ್ತು. ಜತೆಗೆ ಜೂ.12ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸಾಗಣೆವೆಚ್ಚ ಸೇರಿದಂತೆ ಕೆ.ಜಿ.ಗೆ 36.60 ರು.ಗಳಂತೆ 2.28 ಲಕ್ಷ ಟನ್‌ ಅಕ್ಕಿ ಮಾರಾಟ ಮಾಡಲು ಒಪ್ಪಿಗೆ ನೀಡಿತ್ತು. ಬಳಿಕ ಜೂ.13 ರಂದು ಪತ್ರ ಬರೆದು, ‘ರಾಜ್ಯ ಸರ್ಕಾರಗಳಿಗೆ ಅಕ್ಕಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಹೇಳಿದೆ. ಇದರ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರದ ಪಿತೂರಿಯಿರುವುದು ಸ್ಪಷ್ಟವಾಗಿದೆ’ ಎಂದರು.

ಖಾಸಗಿಯವರಿಗೆ ಉಂಟು ರಾಜ್ಯ ಸರ್ಕಾರಕ್ಕಿಲ್ಲ- ಸಿಎಂ ಕಿಡಿ: ‘ಜೂ. 13ರಂದು ಭಾರತ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದು 15 ಲಕ್ಷ ಮೆ.ಟನ್‌ ಗೋಧಿ ಹಾಗೂ ಅಕ್ಕಿಯನ್ನು ಮುಕ್ತ ಮಾರುಕಟ್ಟೆಮಾರಾಟ ಯೋಜನೆಯಡಿ (ಒಎಂಎಸ್‌ಎಸ್‌ಡಿ) ಮಾರಾಟ ಮಾಡಲು ಸೂಚಿಸಿದೆ. ಅಲ್ಲದೆ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಇತರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಖಾಸಗಿಯವರಿಗೆ ಒಎಂಎಸ್‌ಎಸ್‌ಡಿ ಅಡಿ ಮಾರಾಟ ಮಾಡಲು ಅವಕಾಶ ನೀಡಿರುವ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಮಾರಾಟ ಮಾಡದಿರಲು ಸೂಚಿಸಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಖಾಸಗಿಯವರ ಮೇಲಿರುವ ಕಾಳಜಿ ರಾಜ್ಯದ ಬಡವರ ಮೇಲೆ ಇಲ್ಲದಿರುವುದು ಸಾಬೀತಾಗಿದೆ’ ಎಂದು ಟೀಕಿಸಿದರು.

ಅಕ್ಕಿ ಹೊಂದಿಸಲು ಶತಪ್ರಯತ್ನ: ‘ಎಫ್‌ಸಿಐ ಒಪ್ಪಿಗೆ ಪತ್ರದ ಆಧಾರದ ಮೇಲೆ ಜುಲೈ 1ರಿಂದ 10 ಕೆ.ಜಿ. ವಿತರಿಸುವ ಯೋಜನೆ ಜಾರಿ ಮಾಡಲಾಗುವುದು ಎಂದು ಘೋಷಿಸಿದ್ದೆವು. ಈಗ ಕೇಂದ್ರ ಅಕ್ಕಿ ನೀಡಲು ನಿರಾಕರಿಸುತ್ತಿದೆ. ಇದರ ಹಿಂದೆ ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಯಾಗದಂತೆ ನೋಡಿಕೊಳ್ಳುವ ದುರುದ್ದೇಶವಿದೆ’ ಎಂದು ಸಿದ್ದ​ರಾ​ಮಯ್ಯ ಆರೋ​ಪಿ​ಸಿ​ದ​ರು.

‘ಆದರೆ, ನಾವು ಶತಾಯಗತಾಯ ಯೋಜನೆ ಜಾರಿ ಮಾಡಲು ಮುಂದಾಗಿದ್ದೇವೆ. ಭತ್ತ ಬೆಳೆಯುವ ರಾಜ್ಯಗಳಾದ ಪಂಜಾಬ್‌, ತೆಲಂಗಾಣ, ಆಂಧ್ರ, ಛತ್ತೀಸ್‌ಗಢ, ಹರಿಯಾಣದವರಿಗೆ ಈಗಾಗಲೇ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿದ್ದಾರೆ. ಪಂಜಾಬ್‌ ರಾಜ್ಯದಲ್ಲಿ ಅಕ್ಕಿ ಸಂಗ್ರಹವಿಲ್ಲದಿರುವುದರಿಂದ ಅಕ್ಕಿ ಪೂರೈಸಲು ಆಗುವುದಿಲ್ಲ ಎಂದಿದ್ದಾರೆ. ನಾಳೆ (ಗುರುವಾರ) ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ತೆಲಂಗಾಣ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ. ಜತೆಗೆ ಛತ್ತೀಸ್‌ಗಢ ರಾಜ್ಯದಿಂದಲೂ ಲಭ್ಯವಿರುವ ಅಕ್ಕಿಯ ಮಾಹಿತಿ ಇಂದು ಸಂಜೆಯೊಳಗೆ ಲಭಿಸಲಿದೆ. ನಾಳೆ ಸಂಜೆಯೊಳಗೆ ಒಂದು ಸ್ಪಷ್ಟಚಿತ್ರಣ ದೊರೆಯಲಿದೆ. ಛತ್ತೀಸ್‌ಗಢ, ತೆಲಂಗಾಣ ಮುಖ್ಯಮಂತ್ರಿ ಅವರೊಂದಿಗೆ ಖುದ್ದು ನಾನೇ ಮಾತನಾಡಿದ್ದೇನೆ’ ಎಂದು ಹೇಳಿದರು.

ಪ್ಲಾನ್‌-ಬಿ ನಂತರ ಹೇಳುತ್ತೇವೆ: ‘ತೆಲಂಗಾಣ ಹಾಗೂ ಛತ್ತೀಸ್‌ಗಢ ಸರ್ಕಾರಗಳು ಅಕ್ಕಿ ಮಾರಾಟ ಮಾಡಲು ನಿರಾಕರಿಸಿದರೆ ಏನು ಮಾಡುತ್ತೀರಿ?’ ಎಂಬ ಪ್ರಶ್ನೆಗೆ, ‘ಪ್ಲಾನ್‌ ಬಿ ನಮ್ಮ ಬಳಿ ಸಿದ್ಧವಿದೆ. ಈ ಬಗ್ಗೆ ಅಗತ್ಯ ಬಂದಾಗ ಹೇಳುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿ ಈಡೇರಿಸುತ್ತೇವೆ’ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ… ಉಪಸ್ಥಿತರಿದ್ದರು.

5 ಕೆ.ಜಿ. ಅಕ್ಕಿ ನೀಡಲು ಸಮಸ್ಯೆಯಿಲ್ಲ: ಪ್ರಸ್ತುತ ಆಹಾರ ನಿಗಮದ ನಿರ್ಧಾರದಿಂದ 5 ಕೆ.ಜಿ. ಹೆಚ್ಚುವರಿ ಅಕ್ಕಿ ಪೂರೈಕೆಗಷ್ಟೇ ಸಮಸ್ಯೆಯಾಗಲಿದೆ. ಹಾಲಿ ಪ್ರತಿಯೊಬ್ಬರಿಗೂ ನೀಡುತ್ತಿರುವ 5 ಕೆ.ಜಿ. ಅಕ್ಕಿ ವಿತರಣೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ.

ಪ್ರತಿಭಟನೆಗೂ ಸಿದ್ಧ: ‘ಕೇಂದ್ರ ಸರ್ಕಾರ ಉಚಿತವಾಗಿಯೇನೂ ಅಕ್ಕಿ ನೀಡುವುದಿಲ್ಲ. ನಾವು ಹಣ ನೀಡಿ ಅಕ್ಕಿ ಪಡೆಯುವುದು. ಖಾಸಗಿಯವರಿಗೆ ಅವಕಾಶವಿದೆ. ರಾಜ್ಯ ಸರ್ಕಾರಗಳಿಗೆ ನೀಡುವುದಿಲ್ಲ ಎಂದರೆ ಏನರ್ಥ? ಹೀಗಾಗಿ ನಿರ್ಧಾರ ಮತ್ತೊಮ್ಮೆ ಪುನರ್‌ಪರಿಶೀಲಿಸಿ ಎಂದು ಮನವಿ ಮಾಡುತ್ತೇವೆ. ಸ್ಪಂದಿಸದಿದ್ದರೆ ಈ ಷಡ್ಯಂತ್ರದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಬೊಮ್ಮಾಯಿ ಹೇಗೆ ಅಳಿಯನೋ ಸಿದ್ದೇಶ್ವರ ಸಹ ನನಗೆ ಅಳಿಯ, ಸಂಬಂಧಿ: ಶಾಮನೂರು ಶಿವಶಂಕರಪ್ಪ

ಸಿದ್ದು ಹೇಳಿದ್ದೇನು?
- ತನ್ನ ಬಳಿ 7 ಲಕ್ಷ ಟನ್‌ ಅಕ್ಕಿ ಲಭ್ಯವಿದೆ ಎಂದು ರಾಜ್ಯ ಸರ್ಕಾರಕ್ಕೆ ಜೂ.8ರಂದು ತಿಳಿಸಿದ್ದ ಭಾರತೀಯ ಆಹಾರ ನಿಗಮ

- ಕೆ.ಜಿ.ಗೆ 36.60 ರು.ನಂತೆ 2.28 ಲಕ್ಷ ಟನ್‌ ಅಕ್ಕಿ ಮಾರುವುದಾಗಿ ಜೂ.12ರಂದು ರಾಜ್ಯಕ್ಕೆ ಪತ್ರ ಬರೆದಿದ್ದ ನಿಗಮ

- ಮರುದಿನವೇ ಮತ್ತೊಂದು ಪತ್ರ ಬರೆದ ನಿಗಮ. ರಾಜ್ಯಗಳಿಗೆ ಅಕ್ಕಿ ವಿತರಣೆ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ

- ಈಶಾನ್ಯ ರಾಜ್ಯ ಹೊರತುಪಡಿಸಿ ಇತರೆ ರಾಜ್ಯಗಳಿಗೆ ಅಕ್ಕಿ, ಗೋಧಿ ಮಾರಾಟ ಮಾಡದಂತೆ ಕೇಂದ್ರ ಸೂಚನೆ ನೀಡಿದೆ

- ಆದರೆ ಖಾಸಗಿಯವರಿಗೆ ಮಾರಾಟ ಮಾಡಲು ಅನುಮತಿ. ಕೇಂದ್ರಕ್ಕೆ ಖಾಸಗಿ ಮೇಲಿರುವ ಕಾಳಜಿ ಬಡವರ ಮೇಲಿಲ್ಲ

- ನಿರ್ಧಾರ ಮರುಪರಿಶೀಲಿಸುವಂತೆ ಮನವಿ ಮಾಡುತ್ತೇವೆ. ಸ್ಪಂದಿಸದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ

Follow Us:
Download App:
  • android
  • ios