ರಾಜ್ಯದಲ್ಲಿ ಪ್ರವರ್ಗ 2-ಬಿ ಅಡಿ ಮುಸ್ಲಿಮರಿಗೆ ನೀಡಿರುವ ಶೇ.4ರಷ್ಟು ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸುವಂತೆ ಕೋರಿ ಸಲ್ಲಿಕೆಯಾಗಿರುವ ಮನವಿಯೊಂದಕ್ಕೆ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ವಿಶೇಷ ಕರ್ತವ್ಯಾಧಿಕಾರಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಟಿಪ್ಪಣಿ ಬರೆದಿದ್ದಾರೆ.  

ಬೆಂಗಳೂರು (ಮಾ.14): ರಾಜ್ಯದಲ್ಲಿ ಪ್ರವರ್ಗ 2-ಬಿ ಅಡಿ ಮುಸ್ಲಿಮರಿಗೆ ನೀಡಿರುವ ಶೇ.4ರಷ್ಟು ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸುವಂತೆ ಕೋರಿ ಸಲ್ಲಿಕೆಯಾಗಿರುವ ಮನವಿಯೊಂದಕ್ಕೆ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ವಿಶೇಷ ಕರ್ತವ್ಯಾಧಿಕಾರಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಟಿಪ್ಪಣಿ ಬರೆದಿದ್ದಾರೆ. ಎಲ್ಲಾ ಸಚಿವರ ವಿಶೇಷಾಧಿಕಾರಿ ಈ ರೀತಿ ಟಿಪ್ಪಣಿ ಬರೆಯುವುದು ವಾಡಿಕೆಯಾದರೂ ಇದೀಗ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಎಂಜಿನಿಯರ್ಸ್‌ ಸಂಘವು ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ ಶೇ.10ಕ್ಕೆ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಮನವಿ ಸಲ್ಲಿಸಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವುದೇ ಮನವಿ ಪತ್ರ ಸಲ್ಲಿಕೆಯಾದರೂ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಶೇಷ ಕರ್ತವ್ಯಾಧಿಕಾರಿ ಟಿಪ್ಪಣಿ ಬರೆದು ವಿಲೇವಾರಿ ಮಾಡುವುದು ವಾಡಿಕೆ. ಈ ಬಗ್ಗೆ ಮುಂದಿನ ಹಂತದ ಅಧಿಕಾರಿಗಳು ಸಮಂಜಸವಿದ್ದರೆ ಮಾತ್ರ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಈ ರೀತಿ ಸಲ್ಲಿಕೆಯಾಗಿದ್ದ ಮನವಿ ಪತ್ರಕ್ಕೆ ಸಚಿವ ಜಮೀರ್‌ ಅಹಮದ್‌ಖಾನ್‌ ಅವರ ವಿಶೇಷ ಕರ್ತವ್ಯಾಧಿಕಾರಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಿಗೆ ಬರೆದಿದ್ದಾರೆ. ಹೀಗಾಗಿ ಸರ್ಕಾರ ಮುಸ್ಲಿಮರ ಮೀಸಲಾತಿಯನ್ನು ಶೇ.4 ರಿಂದ 10ಕ್ಕೆ ಹೆಚ್ಚಳ ಮಾಡಲು ಮುಂದಾಗಿದೆ ಎಂದು ವಿವಾದ ಉಂಟಾಗಿದೆ.

ವಸತಿ ಯೋಜನೆಯ ಸಹಾಯಧನ ಹೆಚ್ಚಳ ಪರಿಶೀಲನೆ: ವಿವಿಧ ಯೋಜನೆಗಳಡಿ ಮಂಜೂರು ಮಾಡುವ ಮನೆಗಳ ನಿರ್ಮಾಣಕ್ಕೆ ಫಲಾನುಭವಿ ಭರಿಸುವ ಹಣವನ್ನು ಸರ್ಕಾರವೇ ಪಾವತಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಉದ್ದೇಶಿಸಲಾಗಿದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದರು. ಬಿಜೆಪಿಯ ಕೆ.ಎಸ್‌.ನವೀನ್‌ ಹಾಗೂ ಎಸ್‌.ವಿ.ಸಂಕನೂರು ಅವರು ಕೇಳಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಎರಡು ಆರ್ಥಿಕ ವರ್ಷದಲ್ಲಿ ವಿವಿಧ ಯೋಜನೆಯಡಿ ಒಟ್ಟಾರೆ 3,62,168 ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. 

ಐಐಟಿ ರೀತಿ ರಾಜ್ಯದಲ್ಲೂ ನ್ಯಾಷನಲ್‌ ಲಾ ಸ್ಕೂಲ್‌ ಅಗತ್ಯವಿದೆ: ಮಾಜಿ ಸಿಎಂ ವೀರಪ್ಪ ಮೊಯ್ಲಿ

ಬಾಕಿ ಇರುವ ಸುಮಾರು 9 ಲಕ್ಷ ಮನೆಗಳನ್ನು ಇನ್ನೊಂದು ವರ್ಷದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲ ವಸತಿ ಯೋಜನೆಗಳಡಿ ಸರ್ಕಾರ ಮನೆ ಕಟ್ಟುವುದಿಲ್ಲ. ಬದಲಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಾಯಧನದಿಂದ ಫಲಾನುಭವಿ ಕಟ್ಟಬೇಕಾಗುತ್ತದೆ. ಬಡವರಿಗೆ ಮನೆ ಕಟ್ಟಲು ಕಷ್ಟವಾಗುತ್ತಿರುವುದರಿಂದ ಫಲಾನುಭವಿಗಳು ಕಟ್ಟಬೇಕಾದ ಹಣವನ್ನು ಸರ್ಕಾರವೇ ಭರಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದರು.