Haveri: ಅಧ್ಯಕ್ಷ ಸ್ಥಾನಕ್ಕಾಗಿ ಗ್ರಾಮ ಪಂಚಾಯತಿಯಲ್ಲೂ ರೆಸಾರ್ಟ್ ಪಾಲಿಟಿಕ್ಸ್
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿದ್ದ ರೆಸಾರ್ಟ್ ರಾಜಕಾರಣ ಈಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕಾಗಿಯೂ ನಡೆದಿದೆ. ಪಂಚಾಯಿತಿಯ 9 ಸದಸ್ಯರು ಬರೋಬ್ಬರಿ 40 ದಿನ ಬೆಂಗಳೂರಿನ ರೆಸಾರ್ಟ್ ನಲ್ಲಿ ಉಳಿದುಕೊಂಡು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ದಿನ ವಿಮಾನದಲ್ಲಿ ಆಗಮಿಸಿದ್ದಾರೆ.
ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾವೇರಿ (ಡಿ.6): ಇಷ್ಟು ದಿನ ವಿಧಾನಸೌಧಕ್ಕೆ ಸೀಮಿತವಾಗಿದ್ದ ರೆಸಾರ್ಟ್ ಪಾಲಿಟಿಕ್ಸ್ ಈಗ ಗ್ರಾಮ ಪಂಚಾಯತಿಗೂ ಕಾಲಿಟ್ಟಿದೆ. ಇದು ಥೇಟ್ ಆಪರೇಶನ್ ಕಮಲದ ಸಂದರ್ಭದಲ್ಲಿ ನಡೆದ ಘಟನೆಗಳನ್ನೇ ನೆನಪಿಸುವಂತಿತ್ತು. ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಲು ಬಿ.ಎಸ್.ಯಡಿಯೂರಪ್ಪ ನಡೆಸಿದ ಕಸರತ್ತನ್ನು ಕಣ್ಮುಂದೆ ತಂದಿದೆ. ಆಗೆಲ್ಲಾ ಶಾಸಕರು ರೆಸಾರ್ಟ್ ನಲ್ಲಿರೋದು, ವಿಮಾನದಲ್ಲಿ ಆಗಮಿಸೋದು, ಸಿಎಂ ಕೆಳಗಿಳಿಸೋಕೆ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆಯಲ್ಲಿ ಭಾಗಿಯಾಗೋದು ನೀವೆಲ್ಲಾ ನೋಡೇ ಇರ್ತೀರಿ. ಈಗ ಅಂಥದ್ದೇ ಸಿಎಂ ತವರು ಜಿಲ್ಲೆ ಹಾವೇರಿಯ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮ ಪಂಚಾಯತಿ ಸದಸ್ಯರು ಬೆಂಗಳೂರಿನ ರೆಸಾರ್ಟ್ ನಲ್ಲಿ 40 ದಿನಗಳನ್ನು ಕಳೆದು, ನಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಜಾಮ್, ಜಾಮ್ ಅಂತ ಇಂಡಿಗೋ ವಿಮಾನದಲ್ಲಿ ಆಗಮಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಅಲ್ಲಿಂದ ಗ್ರಾಮ ಪಂಚಾಯಿತಿಗೆ ಬಂದ ಪಂಚಾಯಿತಿ ಸದಸ್ಯರ ಗತ್ತು ನೋಡುಗರಿಗೆ ಗಮ್ಮತ್ತು ತರಿಸುವಂತಿತ್ತು. ದೇವರಗುಡ್ಡದ ಗ್ರಾಮ ಪಂಚಾಯತಿ ಅಧ್ಯಕ್ಷ ಮಾಲತೇಶ ದುರಗಪ್ಪ ನಾಯರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಗ್ರಾಮ ಪಂಚಾಯತಿ ಸದಸ್ಯರು ನಿರ್ಧರಿಸಿದ್ದರು. ಒಟ್ಟು 9 ಸದಸ್ಯರು ಬೆಂಗಳೂರಿನ ರೆಸಾರ್ಟ್ ನಲ್ಲಿ 40 ದಿನ ಕಳೆದು ಕಾನೂನಿನ ಪ್ರಕಾರ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಇಂದು ಸ್ವಗ್ರಾಮಕ್ಕೆ ಆಗಮಿಸಿದರು.
Uttara Kannada: ಮಿನಿ ಬಿಹಾರವಾಗಿದೆ ಶಿರವಾಡದ ರೆಸಾರ್ಟ್: ಸ್ಥಳೀಯರಿಗೆ ಆತಂಕ
ಪ್ರಮಾಣ ಮಾಡಿದ್ದರೂ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲಿಲ್ಲ: ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮ ಪಂಚಾಯತಿಯಲ್ಲಿ ಒಟ್ಟು 13 ಸದಸ್ಯರಿದ್ದಾರೆ. ಅದರಲ್ಲಿ ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ ಬಣದ 9 ಸದಸ್ಯರಿದ್ದಾರೆ. ಉಳಿದ ನಾಲ್ವರು ಬಿಜೆಪಿ ಸದಸ್ಯರಿದ್ದಾರೆ. ಗ್ರಾಮ ಪಂಚಾಯಿತಿಗೆ ಮಾಲತೇಶ ದುರಗಪ್ಪ ನಾಯರ್ ಅಧ್ಯಕ್ಷರಾಗಿದ್ದರು. ಅಧ್ಯಕ್ಷರ ಆಡಳಿತಾವಧಿ ವಿಚಾರದಲ್ಲಿ ನಡೆದ ಒಪ್ಪಂದದಂತೆ 15 ತಿಂಗಳು ಅಧಿಕಾರ ನಡೆಸುವುದಾಗಿ ಮಾಲತೇಶ್ ಒಪ್ಪಿಕೊಂಡಿದ್ದರು. ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ 15 ತಿಂಗಳಾದ ಬಳಿಕ ಸುರೇಶ್ ತಳಗೇರಿ ಎಂಬುವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡೋದಾಗಿ ಪ್ರಮಾಣ ಕೂಡಾ ಮಾಡಿದ್ದರು.
Haveri: ಕನ್ನಡದ ಕಟ್ಟಾಳು ಪಾಟೀಲ್ ಪುಟ್ಟಪ್ಪ ಸಮಾಧಿ ಕಾಯಕಲ್ಪ ಮರೆತ ಸರ್ಕಾರ
ಅಧ್ಯಕ್ಷ ಸ್ಥಾನಕ್ಕಾಗಿ ಸದಸ್ಯರ ಎಸ್ಕೇಪ್: ಆದರೆ 15 ತಿಂಗಳ ಬಳಿಕ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವುದಾಗಿ ಪ್ರಮಾಣ ಮಾಡಿದ್ದ ಮಾಲತೇಶ್ ಮಾತಿನಂತೆ ನಡೆದುಕೊಳ್ಳಲೇ ಇಲ್ಲ. ಅಧ್ಯಕ್ಷ ಸ್ಥಾನ ಬಿಟ್ಟುಕೊಡದೇ ಸತಾಯಿಸಿದ್ದರು. ಹೀಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಲತೇಶ್ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಗೆ ಸದಸ್ಯರು ನಿರ್ಧರಿಸಿದ್ರು. ಆದರೆ, ಮಾಲತೇಶ್ ಗ್ರಾಮ ಪಂಚಾಯತಿ ಸದಸ್ಯರನ್ನು ಹೈಜಾಕ್ ಮಾಡಬಹುದು ಎಂಬ ಆತಂಕದ ಹಿನ್ನೆಲೆ, ಸಂತೋಷ ಭಟ್ ಗುರೂಜಿ ತಮ್ಮ ಬಣದ 9 ಸದಸ್ಯರನ್ನು ಬೆಂಗಳೂರಿನ ರೆಸಾರ್ಟ್ ಗೆ ಕಳಿಸಿಕೊಟ್ಟಿದ್ದರು. ಇಂದು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಇದ್ದ ಕಾರಣ 9 ಸದಸ್ಯರು ರೆಸಾರ್ಟ್ ನಿಂದ ವಿಮಾನದಲ್ಲಿ ಆಗಮಿಸಿದರು.
ಅವಿಶ್ವಾಸ ನಿರ್ಣಯ ದಿನ ವಾಪಸ್: ಬಳಿಕ ರಾಣೆಬೆನ್ನೂರಿನ ತಮ್ಮ ಸ್ವಗ್ರಾಮ ದೇವರಗುಡ್ಡಕ್ಕೆ ಆಗಮಿಸಿ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆಯಲ್ಲಿ ಭಾಗಿಯಾದರು. ಉಪ ವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆ ನಡೆಸಿದರು. ಈಗ ಹೊಸ ಅದ್ಯಕ್ಷರ ಆಯ್ಕೆ ಪ್ರಕ್ರಿಯೆ ಬಾಕಿ ಉಳಿದಂತಾಗಿದೆ. ಇಷ್ಟು ದಿನ ಬೆಂಗಳೂರಿನಲ್ಲಿ ಯಾವುದೋ ರೆಸಾರ್ಟ್ ನಲ್ಲಿ ತಮ್ಮ ಶಾಸಕರನ್ನು ಕೂಡಿ ಹಾಕಿ ರಾಜಕೀಯ ಪಕ್ಷಗಳು ರಾಜಕೀಯ ಮಾಡೋದು ಕಾಮನ್ ಆಗಿತ್ತು. ಈಗ ಅದು ಗ್ರಾಮ ಪಂಚಾಯತಿ ಮಟ್ಟದಲ್ಲೂ ನಡೆದಿದ್ದೂ ವಿಪರ್ಯಾಸ.