ಬಿಜೆಪಿಯು ‘ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ’ ಎಂಬ ಕಾರ್ಯಕ್ರಮ ಆಯೋಜಿಸಲು ಮುಂದಾಗಿದೆ. ಕಾರ್ಯಕರ್ತರು, ಮುಖಂಡರು ಹಾಗೂ ಸ್ಟಾರ್‌ ಪ್ರಚಾರಕರನ್ನು ಹೊರತುಪಡಿಸಿ ಕೇವಲ ಮೋದಿ ಅಭಿಮಾನಿಗಳನ್ನು ಮಾತ್ರ ಬಳಸಿಕೊಂಡು ಈ ಅಭಿಯಾನ ನಡೆಸಲು ಯೋಜನೆ ರೂಪಿಸಲಾಗಿದೆ. 

ಬೆಂಗಳೂರು(ಏ.11):  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಿನಕ್ಕೊಂದು ವಿನೂತನ ಅಭಿಯಾನ ನಡೆಸುತ್ತಿರುವ ಬಿಜೆಪಿಯು ‘ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ’ ಎಂಬ ಕಾರ್ಯಕ್ರಮ ಆಯೋಜಿಸಲು ಮುಂದಾಗಿದೆ. ಕಾರ್ಯಕರ್ತರು, ಮುಖಂಡರು ಹಾಗೂ ಸ್ಟಾರ್‌ ಪ್ರಚಾರಕರನ್ನು ಹೊರತುಪಡಿಸಿ ಕೇವಲ ಮೋದಿ ಅಭಿಮಾನಿಗಳನ್ನು ಮಾತ್ರ ಬಳಸಿಕೊಂಡು ಈ ಅಭಿಯಾನ ನಡೆಸಲು ಯೋಜನೆ ರೂಪಿಸಲಾಗಿದೆ. 

ಮೊದಲ ಹಂತದ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಇದೇ ತಿಂಗಳ ಏಪ್ರಿಲ್‌ 21ರಂದು ಹಾಗೂ ಎರಡನೇ ಹಂತದ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ 28ರಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಚುನಾವಣಾ ಸಮಿತಿ ಸಂಚಾಲಕ ವಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ. ಇದರ ಜತೆಗೆ ‘ಮನೆಯಂಗಳದಲ್ಲಿ ಸಂವಾದ’ ಎಂಬ ಮತ್ತೊಂದು ಅಭಿಯಾನವನ್ನು ಏಪ್ರಿಲ್‌ 12ರಿಂದ 20ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ ಸರ್ಕಾರ ಧೂಳೀಪಟ: ಬಿ.ವೈ. ವಿಜಯೇಂದ್ರ

ಒಂದು ಬೂತ್‌ ವ್ಯಾಪ್ತಿಯಲ್ಲಿ ಕನಿಷ್ಠ ಎರಡು ಮನೆಯಂಗಳದಲ್ಲಿ ಈ ಬಗೆಯ ಸಂವಾದ ನಡೆಯುತ್ತದೆ. ಒಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ ಎಂದರೂ 600ರಿಂದ 700 ಇಂಥ ಸಭೆ ನಡೆಯುತ್ತದೆ. ಈ ಸಂವಾದದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆಗುತ್ತಿರುವ ನಷ್ಟದ ಬಗ್ಗೆ ವಿವರಿಸಲಾಗುತ್ತದೆ ಎಂದರು.

ಮೊದಲ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಂಗಳೂರು ಸೇರಿದಂತೆ ನಗರ ಪ್ರದೇಶ ವ್ಯಾಪ್ತಿಯ ಹಲವು ವೃತ್ತಿಪರ ಸಂಘಟನೆಗಳು ಮೋದಿ ಪರಿವಾರದ ಭಾಗವಾಗಲು ಈಗಾಗಲೇ ಆಸಕ್ತಿ ವ್ಯಕ್ತಪಡಿಸಿದ್ದು, ಆನ್‌ಲೈನ್‌ ಮೂಲಕ ನೋಂದಣಿ ಮಾಡಿದ್ದಾರೆ ಎಂದು ಹೇಳಿದರು.