ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ ಸರ್ಕಾರ ಧೂಳೀಪಟ: ಬಿ.ವೈ. ವಿಜಯೇಂದ್ರ

ಭ್ರಷ್ಟಾಚಾರ ರಹಿತ ಸರ್ಕಾರ ನೀಡಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಮೋದಿ. ಮೋದಿ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಎರಡು ಬಾರಿ ಅಧಿಕಾರಕ್ಕೆ ತಂದಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ 

Karnataka BJP State President BY Vijayendra Slams Congress grg

ಹಾವೇರಿ(ಏ.11):  ಪಕ್ಷದ ಕಾರ್ಯಕರ್ತರ ಉತ್ಸಾಹ, ಎರಡು ಪಕ್ಷಗಳ ಮೈತ್ರಿಯಿಂದ ಕಾಂಗ್ರೆಸ್‌ ನಾಯಕರು ನಿದ್ದೆಗೆಟ್ಟಿದ್ದಾರೆ. ಬಿಜೆಪಿ ಅಲೆಯಿಂದ ಕಂಗೆಟ್ಟಿದ್ದಾರೆ. ಫಲಿತಾಂಶ ಬಂದ ನಂತರ ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಧೂಳೀಪಟವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಇಲ್ಲಿಯ ಸಿ.ಬಿ. ಕೊಳ್ಳಿ ಮೈದಾನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು

ಲೋಕಸಭಾ ಚುನಾವಣೆಯು ಭಾರತದ ಭವಿಷ್ಯ ರೂಪಿಸುವ ಮಹಾ ಚುನಾವಣೆಯಾಗಿದೆ. ಇಡೀ ದೇಶದಲ್ಲಿ ನರೇಂದ್ರ ಮೋದಿಯವರ ಅಲೆಯಿದೆ. ಕಳೆದ 10 ವರ್ಷಗಳಿಂದ ಮೋದಿ ಅವರು ಚುಕ್ಕಾಣಿ ಹಿಡಿದು ಸೇವಕನಾಗಿ ದೇಶಸೇವೆ ಮಾಡುತ್ತಿದ್ದಾರೆ. 2014ರ ಹಿಂದೆ ದೇಶಕ್ಕೆ ಭವಿಷ್ಯ ಇಲ್ಲ ಅಂತ ಯುವಕರು ಮಾತನಾಡುತ್ತಿದ್ದರು. ಬದುಕನ್ನು ಕಟ್ಟಿಕೊಳ್ಳಲು ಯುವಜನತೆ ಪರಿತಪಿಸುತ್ತಿದ್ದರು. ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಅಂಥ ಕ್ಲಿಷ್ಟಕರ ಸಂದರ್ಭದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ, ಜಗತ್ತಿನ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿದೆ. ಭ್ರಷ್ಟಾಚಾರ ರಹಿತ ಸರ್ಕಾರ ನೀಡಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಮೋದಿ. ಮೋದಿ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಎರಡು ಬಾರಿ ಅಧಿಕಾರಕ್ಕೆ ತಂದಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯನವರ ಆಡಳಿತಕ್ಕೂ ಅನುಭವಕ್ಕೂ ಬಹಳ ವ್ಯತ್ಯಾಸವಿದೆ: ಬೊಮ್ಮಾಯಿ

ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ತಮ್ಮ ಫೋಟೊ ಹಾಕಿಕೊಂಡು ಪುಗಸಟ್ಟೆ ಪ್ರಚಾರ ಪಡೆಯುತ್ತಿದೆ. 9 ತಿಂಗಳ ಹಿಂದೆ ಮತದಾರರಲ್ಲಿ ಪೊಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಕೊಡುತ್ತಿದ್ದ ₹4 ಸಾವಿರ ಹಣ ನಿಲ್ಲಿಸಿತು. ರೈತ ವಿದ್ಯಾನಿಧಿ ಸ್ಕಾಲರ್‌ಶಿಪ್‌ ನಿಲ್ಲಸಿತು. ವಿದ್ಯುತ್‌ ದರ ಹೆಚ್ಚಿಸಿತು. ಹೈನುಗಾರರಿಗೆ ನೀಡುತ್ತಿದ್ದ ಪ್ರೋತ್ಸಾಹಧನ ನಿಲ್ಲಿಸಿದೆ. ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ ಮಾಡಿ ಶೇ. 30ರಿಂದ 40ರಷ್ಟು ಬಸ್‌ ದರ ಹೆಚ್ಚಿಸಿದೆ. ಭೀಕರ ಬರಗಾಲವಿದ್ದರೂ ಸಿಎಂ ರೈತರ ಬಗ್ಗೆ ಕನಿಕರ ತೋರಿಸುತ್ತಿಲ್ಲ. 850ಕ್ಕೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ಪರಿಶಿಷ್ಟ ಜಾತಿಯ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡಿದ್ದಾರೆ. ರೈತ ವಿರೋಧಿ, ದಲಿತರ ವಿರೋಧಿ, ಮಹಿಳೆ, ಯುವಕರ ವಿರೋಧಿ ಸರ್ಕಾರ ರಾಜ್ಯದಲ್ಲಿದೆ. ಕಾಂಗ್ರೆಸ್‌ 18–20 ಸ್ಥಾನ ಗೆದ್ದರೆ ಅದು ಜಗತ್ತಿನ 8ನೇ ಅದ್ಭುತವಾಗಲಿದೆ. ಅಂಬೇಡ್ಕರ್‌ ಅವರನ್ನು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಸೋಲಿಸಿದ್ದಾರೆ. ಎಸ್ಸಿ–ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ.
10 ವರ್ಷಗಳ ಆಡಳಿತದ ನಂತರವೂ ಕೇಂದ್ರ ಸರ್ಕಾರದ ಆಡಳಿತದ ಪರವಾದ ವಾತಾವರಣವಿದೆ. ನಮ್ಮ ಬೂತ್‌ಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾರಣಾಂತರಗಳಿಂದ ಹಿನ್ನಡೆ ಆಗಿದೆ. ಕಾರಣಗಳನ್ನು ಪತ್ತೆ ಹಚ್ಚಿ ತಪ್ಪು ತಿದ್ದಿಕೊಂಡು ಪಕ್ಷದ ಗೆಲುವಿಗೆ ಶ್ರಮಿಸಬೇಕಿದೆ. ಬಿಜೆಪಿ– ಜೆಡಿಎಸ್‌ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಪ್ರತಿ ಮನೆಗಳಿಗೆ ಹೋಗಿ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು. ಬೊಮ್ಮಾಯಿ ಅವರು ದಾಖಲೆ ಅಂತರದಲ್ಲಿ ಗೆಲ್ಲಿಸಬೇಕು. ಅವರು 3 ಲಕ್ಷಗಳ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದರು.

ಇದಕ್ಕೂ ಮುನ್ನ ನಗರದ ಮೈಲಾರ ಮಹದೇವಪ್ಪ ವೃತ್ತದ ಬಳಿಯಿಂದ ತೆರೆದ ವಾಹನದಲ್ಲಿ ಭರ್ಜರಿ ರೋಡ್‌ ಶೋ ನಡೆಸುವ ಮೂಲಕ ಮತ ಯಾಚಿಸಲಾಯಿತು. ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಇತರರು ಇದ್ದರು.

Latest Videos
Follow Us:
Download App:
  • android
  • ios