ಶೇ.7ರಷ್ಟು ಮೀಸಲಾತಿ ಎಡಗೈ ಸಮುದಾಯಗಳಿಗೆ ದೊರತರೆ ನಮಗೆ ಸ್ವಲ್ಪ ಉಸಿರಾಡಲು ಅವಕಾಶ ಆಗಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಬೆಂಗಳೂರು (ಆ.05): ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಕುರಿತು ನ್ಯಾ.ನಾಗಮೋಹನ್‌ದಾಸ್‌ ಆಯೋಗವು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದೆ. ಶೇ.7ರಷ್ಟು ಮೀಸಲಾತಿ ಎಡಗೈ ಸಮುದಾಯಗಳಿಗೆ ದೊರತರೆ ನಮಗೆ ಸ್ವಲ್ಪ ಉಸಿರಾಡಲು ಅವಕಾಶ ಆಗಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 30-35 ವರ್ಷಗಳಿಂದ ಮಾದಿಗ ಸಮುದಾಯಕ್ಕೆ ಸಿಗಬೇಕಿರುವ ಮೀಸಲಾತಿ ದೊರೆಯುತ್ತಿಲ್ಲ. ಸಫಾಯಿ ಕರ್ಮಚಾರಿ ಸೇರಿ ವಿವಿಧ ಕೂಲಿ ಕೆಲಸ ಮಾಡುತ್ತಿರುವ ಸಮುದಾಯಗಳಿಗೆ ಸರ್ಕಾರದಲ್ಲಿ ಸವಲತ್ತುಗಳು ದೊರೆಯುತ್ತಿಲ್ಲ ಎಂದರು.

ಹೀಗಾಗಿ ಒಳ ಮೀಸಲಾತಿ ಜಾರಿ ಆಗಬೇಕು ಎಂಬ ಹೋರಾಟ ಶುರುವಾಯಿತು. ಆ.1 ರಂದು ಸುಪ್ರೀಂ ಕೋರ್ಟ್‌ ಇದಕ್ಕೆ ಪೂರಕ ಆದೇಶ ಹೊರಡಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಗಮೋಹನ್‌ದಾಸ್ ಆಯೋಗ ರಚಿಸಿದರು. ಇದೀಗ ವರದಿ ಸಲ್ಲಿಕೆಯಾಗಿದ್ದು ಕುತೂಹಲ, ಆತಂಕ ಕಾಡುತ್ತಿದೆ ಎಂದು ಹೇಳಿದರು. ನ್ಯಾ.ಎ.ಜೆ. ಸದಾಶಿವ ಅವರು ಎಡಗೈ ಸಮುದಾಯಗಳಿಗೆ ಶೇ.6 ರಷ್ಟು ಮೀಸಲಾತಿ ಶಿಫಾರಸು ಮಾಡಿದ್ದರು. ಆಗ ಪರಿಶಿಷ್ಟ ಜಾತಿ ಮೀಸಲಾತಿ ಶೇ.15 ರಷ್ಟು ಇತ್ತು. ಈಗ ಮೀಸಲಾತಿ ಪ್ರಮಾಣ ಶೇ.17ಕ್ಕೆ ಹೆಚ್ಚಳ ಆಗಿದೆ. ಹೀಗಾಗಿ ಶೇ.7 ರಷ್ಟು ಆದರೂ ನೀಡಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಎಚ್.ಆಂಜನೇಯ ಹೇಳಿದರು.

ಕಾಂತರಾಜು ಆಯೋಗ ವರದಿ ಒಪ್ಪಬೇಕಿತ್ತು: ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಒಪ್ಪಿ ಬಹಿರಂಗಪಡಿಸಬೇಕಿತ್ತು. ಯಾವ ಸಮುದಾಯ ವರದಿಯಿಂದ ಹೊರಗುಳಿದಿದೆ ಎಂಬುದನ್ನು ನೋಡಬೇಕಿತ್ತು ಎಂದು ಹೇಳಿದ್ದಾರೆ. ಕಾಂತರಾಜು ಆಯೋಗ ಚೆನ್ನಾಗಿ ಸಮೀಕ್ಷೆ ನಡೆಸಿತ್ತು. ಪ್ರತಿಯೊಂದು ಗ್ರಾಮ, ಹೋಬಳಿ, ಹಳ್ಳಿಗೂ ಹೋಗಿ ಗಣತಿ ಮಾಡಿತ್ತು. ಆಗ 1.50 ಲಕ್ಷ ಶಿಕ್ಷಕರು ಸೇರಿ ಒಟ್ಟು 1.60 ಲಕ್ಷ ಸಿಬ್ಬಂದಿಯನ್ನು ಬಳಸಿಕೊಂಡು ಸಮೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ 165 ಕೋಟಿ ರು. ಖರ್ಚು ಮಾಡಲಾಗಿತ್ತು.

ಈಗ ಸರ್ಕಾರದ ಮುಖ್ಯಕಾರ್ಯದರ್ಶಿ ಆಗಿರುವ ಶಾಲಿನಿ ರಜನೀಶ್ ಅವರೇ ಆಗ ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ ಆಗಿದ್ದರು. ಆ ವರದಿಯನ್ನು ಬಹಿರಂಗಪಡಿಸಬೇಕಾಗಿತ್ತು. ಬಳಿಕ ಯಾರನ್ನು ಬಿಟ್ಟಿದ್ದಾರೆ ಎಂಬುದನ್ನು ತಿಳಿಸಲು ಹೇಳಬಹುದಿತ್ತು ಎಂದು ಹೇಳಿದ್ದಾರೆ. ಇನ್ನು ಈಗ ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿಗಣತಿಯೂ ಮಾಡುವುದಾಗಿ ಹೇಳಿದೆ. ಈಗ ರಾಜ್ಯ ಸರ್ಕಾರ ಹೊಸದಾಗಿ ಸಮೀಕ್ಷೆ ಮಾಡುವುದಾಗಿ ಹೇಳಿದೆ. ಈಗ ಶಾಲೆಗಳು ಶುರುವಾಗಿರುವುದರಿಂದ ಸಮೀಕ್ಷೆಗೆ ಶಿಕ್ಷಕರು ಲಭ್ಯವಿರುವುದಿಲ್ಲ. ಏಪ್ರಿಲ್‌-ಮೇ ತಿಂಗಳಲ್ಲೇ ಸಮೀಕ್ಷೆ ಮಾಡಬೇಕು. ಈಗ ಸಮೀಕ್ಷೆ ನಡೆಸುವುದು ಕಷ್ಟ ಎಂದರು.