ರಾಜಕಾರಣಿಗಳಿಗೆ ಊರಲ್ಲೆಲ್ಲಾ ಕಣ್ಣು, ಕಿವಿಗಳು! ಅಧಿಕಾರ ಕೊಟ್ಟು, ಅರ್ಧ ಗಂಟೆಯಲ್ಲೇ ಕಿತ್ತುಕೊಂಡರೆ ?
ಆಗಷ್ಟೇ ಅಧಿಕಾರ ವಹಿಸಿಕೊಂಡು ನಗರ ಪ್ರದಕ್ಷಿಣೆಗೆ ಮೇಯರ್ ಕಾರು ಹತ್ತಿ ಹೊರಟಿದ್ದರು. ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದರಿಂದ ಕಾರು ಹತ್ತಿದ ಅರ್ಧ ಗಂಟೆಗೇ ಕಾರು ಇಳಿಯಬೇಕಾಯಿತು.
ರಾಜ ಮಹಾರಾಜರ ಕಾಲದಿಂದಲೂ ಇಂಟೆಲಿಜೆನ್ಸ್ ಡಿಪಾರ್ಟ್‌ಮೆಂಟ್ (ಗುಪ್ತದಳ) ಅಂದರೆ ಆಡಳಿತ ನಡೆಸುವ ಮುಖ್ಯಸ್ಥನ ಕಿವಿ ಎಂದೇ ಖ್ಯಾತಿ. ರಾಜ್ಯದಲ್ಲಿ ನಡೆಯುವ ಎಲ್ಲ ವಿದ್ಯಮಾನಗಳ ಕುರಿತ ರಹಸ್ಯ ಮಾಹಿತಿಗೂ ಗುಪ್ತದಳವೇ ಆಧಾರ. ಆದರೆ ಈಗ ಪಳಗಿದ ರಾಜಕಾರಣಿಗಳು ಮಾತ್ರ ಗುಪ್ತದಳವನ್ನು ಮಾತ್ರವೇ ನೆಚ್ಚಿಕೊಳ್ಳದೆ ಪರ್ಯಾಯ ಖಾಸಗಿ ಗೂಢಚರ್ಯರನ್ನೂ ನಿರ್ವಹಿಸುತ್ತಿರುತ್ತಾರೆ.
ಈ ಖಾಸಗಿ ಪಡೆಯ ಬಹುತೇಕರು ಹಣ ಇಲ್ಲದೆ ಅಭಿಮಾನದಿಂದ ಕೆಲಸ ಮಾಡೋದು. ಇಲ್ಲಿ ಜಾತಿ ಅಭಿಮಾನವೂ ಕೆಲಸ ಮಾಡುತ್ತದೆ, ಕೆಲವು ಬಾರಿ ಕಾಂಚಾಣವೂ ಕೂಡ. ಖಾಸಗಿ ಗೂಢಚರ್ಯೆ ಯಾವ ಮಟ್ಟಕ್ಕೆ ಸಕ್ರಿಯ ಎಂದರೆ ಕೆಲವೊಮ್ಮೆ ಗುಪ್ತಚರ ದಳಕ್ಕಿಂತ ಮೊದಲೇ ಮಾಹಿತಿ ತಲುಪಿಸಿರುತ್ತದೆ.
ಹೀಗೆ ನಾಲ್ಕೈದು ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಹಿರಿಯ ರಾಜಕಾರಣಿ ಚುನಾವಣಾ ಸಮರದ ತಾಲೀಮು ನಡೆಸುತ್ತಿದ್ದರು. ಈ ವೇಳೆ ಅವರ ವಿರುದ್ಧ ತನಿಖಾ ಸಂಸ್ಥೆ ದೊಟ್ಟ ಮಟ್ಟದ ದಾಳಿಗೆ ಸಜ್ಜಾಗಿತ್ತು. ಈ ಮಾಹಿತಿ ರಾಜಕಾರಣಿಗೆ ಸಿಕ್ಕಿದ್ದು ಕ್ಯಾಬ್ ಚಾಲಕರೊಬ್ಬರಿಂದ. ಈ ಮಾತನ್ನು ಖುದ್ದು ಗೃಹ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಗುಪ್ತದಳ ಮುಖ್ಯಸ್ಥರ ಬದಲಾವಣೆ ವಿಚಾರ ಬಂದಾಗ ಬಾಯ್ಬಿಟ್ಟರು.
ಆರೋಪ ಬಂದ ತಕ್ಷಣ ಪತ್ರಕರ್ತರನ್ನು ಬಂಧಿಸಿದ್ರೆ ಹೇಗೆ?: ಖಾರವಾಗಿಯೇ ಮಾತಾಡಿದ ಸಚಿವ ಪರಮೇಶ್ವರ್
ದಾಳಿಗೆ ತನಿಖಾ ಸಂಸ್ಥೆ ರಹಸ್ಯವಾಗಿ ತಯಾರಿ ನಡೆಸಿತ್ತು. ಈ ದಾಳಿಗೆ ನೂರಾರು ಕ್ಯಾಬ್‌ಗಳನ್ನು ಬುಕ್ ಮಾಡಿತ್ತು. ಆ ಕ್ಯಾಬ್‌ಗಳ ಪೈಕಿ ಒಬ್ಬ ಚಾಲಕನಿಗೆ ಆಡಳಿತದಲ್ಲಿ ತನ್ನ ಸ್ವಜಾತಿ ರಾಜಕಾರಣಿ ಮೇಲೆ ವಿಪರೀತ ಅಭಿಮಾನ. ತಕ್ಷಣವೇ ತನ್ನೂರಿನ ಸ್ಥಳೀಯ ಮುಖಂಡನಿಗೆ ಕರೆ ಮಾಡಿ, ಇಂಪಾರ್ಟೆಂಟ್ ಮಾಹಿತಿ ಇದೆ. ಈಗಲೇ ‘ಅಣ್ಣ’ನ ಜತೆ ಮಾತನಾಡಬೇಕು ಎಂದನಂತೆ. ಇದಾದ ಅರ್ಧ ಗಂಟೆಯೊಳಗೆ ಕ್ಯಾಬ್ ಚಾಲಕನ ಜತೆ ಆ ರಾಜಕಾರಣಿ ಮಾತನಾಡಿದಾಗ ತನಿಖಾ ಸಂಸ್ಥೆಯ ದಾಳಿ ಮಾಹಿತಿಯೂ ಸಿಕ್ಕಿತಂತೆ. ಇದನ್ನು ಗುಪ್ತಚರ ದಳದ ಜತೆ ‘ಅಣ್ಣ’ ಖಚಿತಪಡಿಸಿಕೊಂಡಾಗ ಗುಪ್ತಚರ ದಳದವರೂ ತಬ್ಬಿಬ್ಬು. ಯಾಕೆಂದರೆ ಅದು ಸತ್ಯ ಎಂಬುದು ಪರಿಶೀಲನೆ ಬಳಿಕವಷ್ಟೇ ಅವರಿಗೆ ತಿಳಿದಿದ್ದು!
ಮೇಯರ್ ದರ್ಬಾರ್‌ಗೆ ಬ್ರೇಕ್
ಕೆಲವು ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಮಾತು ಮಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್ ಪಾಲಿಗೂ ಸತ್ಯ ಎಂಬಂತಾಗಿದೆ.
ಮಂಗಳೂರು ಪಾಲಿಕೆಯ ಕೊನೆ ಅವಧಿಗೆ ಗುರುವಾರ ಮೇಯರ್-ಉಪಮೇಯರ್ ಆಯ್ಕೆ ಚುನಾವಣೆಯಾಗಿತ್ತು. ನೂತನ ಮೇಯರ್ ಮನೋಜ್ ಕುಮಾರ್ ಅವರು ಚುನಾವಣೆ ಬಳಿಕ ಗೆದ್ದು ಮೇಯರ್ ಕುರ್ಚಿಯಲ್ಲಿ ಕುಳಿತ ಗಂಟೆಯಲ್ಲೇ ಪರಿಷತ್ ಉಪ ಚುನಾವಣೆ ನೀತಿಸಂಹಿತೆ ಜಾರಿ ಆಯಿತು. .
ಆಗಷ್ಟೇ ಅಧಿಕಾರ ವಹಿಸಿಕೊಂಡು ನಗರ ಪ್ರದಕ್ಷಿಣೆಗೆ ಮೇಯರ್ ಕಾರು ಹತ್ತಿ ಹೊರಟಿದ್ದರು. ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದರಿಂದ ಕಾರು ಹತ್ತಿದ ಅರ್ಧ ಗಂಟೆಗೆ ಮಾರ್ಗ ಮಧ್ಯೆಯಲ್ಲೇ ಕಾರು ಇಳಿಯಬೇಕಾಯಿತು. ಇರುವ ಐದೂವರೆ ತಿಂಗಳ ಅವಧಿ ಶುರುವಾಗುವ ಮೊದಲೇ ಒಂದುಕಾಲು ತಿಂಗಳ ಅವಧಿಯನ್ನು ಮಾದರಿ ನೀತಿ ಸಂಹಿತೆ ನುಂಗಿಬಿಟ್ಟಿತು.
ಜಿಗಜಿಣಗಿಯ ಬಚ್ಚಾ ವರಾತ
ಅಮೆರಿಕದ ವಾಷಿಂಗ್ಟನ್ ಪ್ರವಾಸದ ವೇಳೆ ರಾಹುಲ್‌ಗಾಂಧಿ ಮೀಸಲಾತಿ ಕುರಿತು ನೀಡಿದ್ದ ಹೇಳಿಕೆ ವಿರೋಧಿಸಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಸುದ್ದಿಗೋಷ್ಠಿ ಕರೆದಿದ್ದರು. ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್‌ಗಾಂಧಿ ಅವರನ್ನು ಟೀಕಿಸುವ ಭರದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ಎಂಬುದನ್ನೂ ಮರೆತು ‘ಅವಾ ಯಾರು ಬಚ್ಚೆ... ಬಚ್ಚೆ...’ ಎಂದುಬಿಟ್ಟರು. ಬಳಿಕ ‘ಬಚ್ಚಾ... ಬಚ್ಚಾ.’ ಅಂತಾರಲ್ಲಾ ಅವರ ಕೆಲಸವೇ ಇಂತಹದ್ದು ಎಂದರು.
ಇಷ್ಟಕ್ಕೆ ಸುಮ್ಮನಾಗದ ಜಿಗಜಿಣಗಿ, ದಲಿತರನ್ನು ಕಾಂಗ್ರೆಸ್ ಮತ ಬ್ಯಾಂಕ್ ಮಾಡಿಕೊಂಡಿದೆ. ಅದಕ್ಕೆ ಅವರನ್ನು ‘ಪಪ್ಪು, ಪಪ್ಪು’ ಎನ್ನುತ್ತಾರೆ. ಆದರೆ ನಾನು ಅನ್ನಂಗಿಲ್ಲ ಎನ್ನುತ್ತಾ ಒಂದೇ ಸಮನೆ ಟೀಕಿಸುತ್ತಿದ್ದರು.
ಸದನದಲ್ಲಿ ಶ್ರೀಲಂಕಾ ಮೊಬೈಲ್ ಪುರಾಣ: ಸೈಬರ್ ಪೊಲೀಸ್‌ಗೆ ಸೈಬರ್ ವಂಚಕನ ಗಾಳ ಯತ್ನ
ಈ ವೇಳೆ ಪಪ್ಪು ಅಂದಿದ್ದು ಯಾರನ್ನು ಎಂದು ಪ್ರಶ್ನಿಸಿದ ಪತ್ರಕರ್ತರಿಗೆ, ಜಿಗಜಿಣಗಿ ಅವರು ಬಚ್ಚೆ, ಬಚ್ಚಾ, ಪಪ್ಪು ಎಲ್ಲವನ್ನೂ ಅಂದಿದ್ದು ರಾಹುಲ್ ಗಾಂಧಿಗೆ ಎಂಬುದು ಅರಿವಿಗೆ ಬಂತು.
- ಗಿರೀಶ್ ಮಾದೇನಹಳ್ಳಿ
- ಆತ್ಮಭೂಷಣ್
- ಶಶಿಕಾಂತ ಮೆಂಡೆಗಾರ