Reporters Dairy: ವಂಡರ್ ಡೈರಿ ಶಕ್ತಿಸೌಧ ಬಿಟ್ಟು ‘ಅಡುಗುತಾಣಕ್ಕೆ’ ಸಚಿವರ ದೌಡು!
ವಿಧಾನಸೌಧವೀಗ ನಿಶ್ಯಕ್ತಿ ಕೇಂದ್ರ! ಇದು ಸನಾತನ ಕಾಲದ ವಿಚಾರವೇನಲ್ಲ. ಕೆಲವೇ ವರ್ಷಗಳ ಹಿಂದಿನದ್ದು. ಆಗ ವಿಧಾನಸೌಧವೆಂದರೆ ನಾಡಿನ ಶಕ್ತಿ ಕೇಂದ್ರವಾಗಿತ್ತು. ನಾಡಿನ ಮೂಲೆ ಮೂಲೆಯ ಸಮಸ್ಯೆಗಳಿಗೆ ಕ್ಷಣದಲ್ಲೇ ಪರಿಹಾರ ಕೊಡಬಲ್ಲ ಶಕ್ತಿಶಾಲಿ ಕೇಂದ್ರವಾಗಿತ್ತು.

ವಿಧಾನಸೌಧವೀಗ ನಿಶ್ಯಕ್ತಿ ಕೇಂದ್ರ! ಇದು ಸನಾತನ ಕಾಲದ ವಿಚಾರವೇನಲ್ಲ. ಕೆಲವೇ ವರ್ಷಗಳ ಹಿಂದಿನದ್ದು. ಆಗ ವಿಧಾನಸೌಧವೆಂದರೆ ನಾಡಿನ ಶಕ್ತಿ ಕೇಂದ್ರವಾಗಿತ್ತು. ನಾಡಿನ ಮೂಲೆ ಮೂಲೆಯ ಸಮಸ್ಯೆಗಳಿಗೆ ಕ್ಷಣದಲ್ಲೇ ಪರಿಹಾರ ಕೊಡಬಲ್ಲ ಶಕ್ತಿಶಾಲಿ ಕೇಂದ್ರವಾಗಿತ್ತು. ಆದರೆ, ಅದ್ಯಾಕೋ ಇತ್ತೀಚೆಗೆ ಈ ಕೇಂದ್ರಕ್ಕೆ ನಿಶ್ಯಕ್ತಿ ಕಾಡುತ್ತಿದೆ. ಈ ಕೇಂದ್ರ ಶಕ್ತಿಶಾಲಿಯಾಗಿದ್ದಾಗ ಪ್ರತಿ ನಿತ್ಯ ಹತ್ತಾರು ಸಚಿವರು ವಿಧಾನಸೌಧದ ಮೂರನೇ ಮಹಡಿಯಲ್ಲಿ ಠಳಾಯಿಸುತ್ತಿದ್ದರು. ಸರಣಿ ಸಭೆ ನಡೆಸುತ್ತಿದ್ದರು. ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ಇಡೀ ಶಕ್ತಿ ಕೇಂದ್ರದಲ್ಲಿ ಚೈತನ್ಯ ಸಂಚರಿಸುತ್ತಿತ್ತು.
ಆದರೆ, ಇತ್ತೀಚಿನ ವರ್ಷಗಳಲ್ಲಿ ಸಚಿವರು ಈ ವಿಧಾನಸೌಧದತ್ತ ಮುಖ ಮಾಡಲು ಹಿಂಜರಿಯುತ್ತಿದ್ದಾರೆ. ಬಂದರೂ ಅಲ್ಲೊಬ್ಬ ಇಲ್ಲೊಬ್ಬ ಸಚಿವ ನಾಮಕಾವಾಸ್ತೆ ಹಾಜರಿ ಹಾಕಿ, ಮೀಟಿಂಗ್ ಮುಗಿಸಿ ಬಂದಷ್ಟೇ ವೇಗವಾಗಿ ಕಣ್ಮರೆಯಾಗುತ್ತಾರೆ. ಸಚಿವ ಸಂಪುಟ ಸಭೆ ಅಥವಾ ಮುಖ್ಯಮಂತ್ರಿಯವರೇ ಏನಾದರೂ ಸಭೆ ಕರೆದಾಗ ಮಾತ್ರ ಸಚಿವರ ಉಪಸ್ಥಿತಿ ಕಾಣುತ್ತದೆ. ಉಳಿದಂತೆ ಖಾಲಿ ಖಾಲಿ... ಯಾಕೀಗೆ? ಈ ಪ್ರಶ್ನೆ ಮುಂದಿಟ್ಟುಕೊಂಡು ಬೇಹುಗಾರಿಕೆ ನಡೆಸಿದಾಗ ಗೊತ್ತಾಗಿದ್ದು...
ಕಾವೇರಿದ ಕಾವೇರಿ ಕಿಚ್ಚು: ಬೆಂಗಳೂರು ಬಂದ್ ಫಿಕ್ಸ್, ಏನಿರುತ್ತೆ? ಏನಿರಲ್ಲ?
ಬಹುತೇಕ ಸಚಿವರು ಶಕ್ತಿ ಕೇಂದ್ರಕ್ಕೆ ಪರ್ಯಾಯವಾಗಿ ಪರ್ಯಾಯ ಶಕ್ತಿ ಕೇಂದ್ರಗಳನ್ನು ರೂಪಿಸಿಕೊಂಡು ಬಿಟ್ಟಿದ್ದಾರೆ. ಕುಮಾರಕೃಪ ಅತಿಥಿಗೃಹ, ಖಾಸಗಿ ಹೋಟೆಲ್, ಮನೆ, ಸೆಂಚುರಿ ಕ್ಲಬ್, ಗಾಲ್ಫ್ ಕ್ಲಬ್, ನಿಗಮ ಮಂಡಳಿಗಳ ಮುಖ್ಯ ಕಚೇರಿಗಳು ಈಗ ಮಿನಿ ಶಕ್ತಿಕೇಂದ್ರಗಳಾಗಿವೆ. ಸಚಿವರು ವಿಧಾನಸೌಧಕ್ಕೆ ಬರುವ ಬದಲು ಹೀಗೆ ತಮ್ಮ ಹೈಡೌಟ್‌ಗಳಲ್ಲಿ ಇರುವುದಕ್ಕೆ ಹೆಚ್ಚು ಇಷ್ಟಪಡುತ್ತಿದ್ದಾರೆ. ಈ ನಡುವಳಿಕೆ ಏಕೆ ಎಂದು ಮತ್ತಷ್ಟು ಆಳ ಬೇಹುಗಾರಿಕೆ ನಡೆಸಿದಾಗ ಗೊತ್ತಾಗಿದ್ದು- ಮೈಕಾಸುರನ ಬಗೆಗಿನ ಭೀತಿ!
ಮೈಕ್ ಹಿಡಿದು ವಿಧಾನಸೌಧದಲ್ಲಿ ಸಚಿವರ ಪ್ರತಿಕ್ರಿಯೆಗೆ ಕಾಯುವ ಮಾಧ್ಯಮಗಳಿಗೆ ಮುಖ ತೋರುವುದನ್ನು ತಪ್ಪಿಸಿಕೊಳ್ಳಲು ಸಚಿವರು ಈ ಪರ್ಯಾಯ ಶಕ್ತಿ ಕೇಂದ್ರ ಸೃಷ್ಟಿಸಿಕೊಂಡಿದ್ದಾರೆ. ಮೈಕ್ ಹಿಡಿದ ಮೇಲೆ ಮಾತನಾಡದೇ ಹೋದರೂ ಸುದ್ದಿಯಾಗುತ್ತೇವೆ. ಮಾತನಾಡಿದರೂ ಸುದ್ದಿಯಾಗುತ್ತೇವೆ. ಅನಗತ್ಯವಾಗಿ ತಾವು ಪ್ರತಿಕ್ರಿಯೆ ನೀಡಬೇಕಿಲ್ಲದ ವಿಚಾರಗಳಲ್ಲಿ ಮುಖ ತೋರಿಸಿ ಏಕೆ ಅವಲಕ್ಷಣ ಅನ್ನಿಸಿಕೊಳ್ಳುವುದು ಎಂಬ ಆಲೋಚನೆಯಿಂದ ಸಚಿವರು ವಿಧಾನಸೌಧವನ್ನು ನಿಃಶಕ್ತಿಗೊಳಿಸುತ್ತಿದ್ದಾರೆ. ಇಂತಹ ಭಯಭೀತ ಸಚಿವರಿಗೆ ಸಿಎಂ ಸಾಹೇಬರೇ ಶಕ್ತಿ ತುಂಬಿ ವಿಧಾನಸೌಧವನ್ನು ಮತ್ತೆ ಶಕ್ತಿ ಕೇಂದ್ರ ಮಾಡುವ ಅಗತ್ಯವಿದೆ ಎಂಬುದು ಸಾರ್ವಜನಿಕ ಅಂಬೋಣ.
ಬಾರ್, ಬಾರು ಬೇಕು, ಹಜಾರ್ ಬಾರು ಬೇಕು!!!: ಪ್ರತಿಭಟನೆಗಳನ್ನು ಮಾಡುತ್ತಾರೆ. ಕುಡಿಯಲು ನೀರು ಬೇಕು, ಆಶ್ರಮ ಮನೆ ನಿರ್ಮಾಣ ಮಾಡಬೇಕು. ವೇತನ ಬಿಡುಗಡೆಯಾಗಬೇಕು. ಸಮಾನತೆ ಬೇಕು. ಹೀಗೆ. ಅದು ಬೇಕು. ಇದು ಬೇಕು ಅಂತ ಪ್ರತಿಭಟನೆ ಮಾಡುತ್ತಾರೆ. ತಪ್ಪೇನು ಇಲ್ಲ. ಆದರೆ, ಕೊಪ್ಪಳದಲ್ಲಿ ವಿಚಿತ್ರ ಕಾರಣಕ್ಕಾಗಿ ಪ್ರತಿಭಟನೆ ಆರಂಭವಾಗಿದೆ. ಅದು "ಬಾರ್ ಬೇಕು ಬಾರ್". ಹೀಗೆಂತ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆದಿದೆ. ಬಾರ್ ಗಾಗಿ ಪ್ರತಿಭಟನೆ ಮಾಡಿದರೂ ಅಂತ ಈ ಮಂದಿ ಮಂಡೆ ಸರಿಯಿಲ್ಲ ಎನ್ನಬೇಡಿ. ಅವರ ಹೋರಾಟಕ್ಕೂ ಒಂದು ಲಾಜಿಕ್ ಇದೆ.
ಭತ್ತದ ಬೆಳೆಗೆ ಭದ್ರಾ ನೀರಿಗಾಗಿ ರೈತರ ಆಗ್ರಹ: ಇಂದು ದಾವಣಗೆರೆ ಜಿಲ್ಲೆ ಬಂದ್!
ಅದು ಏನೆಂದರೆ, ಈ ಊರಿನಲ್ಲಿ ಬಾರ್ ನೋಡಲು ಪಕ್ಕದ ಊರಿಗೆ ಹೋಗಬೇಕು. ಪಕ್ಕದ ಊರಿಗೆ ಹೋಗಿ ಎಣ್ಣೆ ತಂದು ಅನಂತರ ಕುಡಿಯುವ ಶ್ರಮದಿಂದ ಕಿಕ್ ಸರಿಯಾಗಿ ಸಿಗುತ್ತಿಲ್ಲ. ಅಷ್ಟೆ ಅಲ್ಲ, ಪಕ್ಕದೂರಿನವರು ಹೆಚ್ಚಿನ ದರಕ್ಕೆ ಮಾರಾಟಮಾಡುತ್ತಿರುವುದರಿಂದ ಪಾಪ ಬಡವರಾದ ಈ ಊರಿನವರಿಗೆ ಹೊರೆಯಾಗುತ್ತಿದೆ. ಆ ಊರಿನವರಿಗೆ ಸಿಕ್ಕಾಪಟ್ಟೆ ಲಾಭವಾಗುತ್ತಿದೆ. ಹೀಗಾಗಿ ಈ ಊರಿನವರಾದ ನಾವು ಆ ಊರಿನವರಿಗೆ ಏಕೆ ಲಾಭ ಮಾಡಿಕೊಡಬೇಕು. ಏನೇ ಲಾಭವಾಗುವುದಿದ್ದರೂ ಈ ಊರಿನವರಿಗೆ ಆಗಲಿ. ಹೀಗಾಗಿ ಬಾರ್ ಕೊಡಿ. ಬಾರ್ ಕೊಡುವವರೆಗೂ ನಾವು ಬಿಡುವುದಿಲ್ಲ ಎಂದು ಪ್ರತಿಭಟನೆ. ಅಬ್ಬ ಎಂಥಾ ಊರ ಪ್ರೇಮ!
ಶ್ರೀಕಾಂತ್ ಗೌಡಸಂದ್ರ
ಸೋಮರಡ್ಡಿ ಅಳವಂಡಿ