ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರು ಬಂದ್‌ ನಡೆಯಲಿದ್ದು, ರಾಜಧಾನಿಯಲ್ಲಿ ಹಲವು ಸೇವೆಗಳು ವ್ಯತ್ಯಯವಾಗುವ ಸಾಧ್ಯತೆಗಳಿವೆ. 

ಬೆಂಗಳೂರು (ಸೆ.25): ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರು ಬಂದ್‌ ನಡೆಯಲಿದ್ದು, ರಾಜಧಾನಿಯಲ್ಲಿ ಹಲವು ಸೇವೆಗಳು ವ್ಯತ್ಯಯವಾಗುವ ಸಾಧ್ಯತೆಗಳಿವೆ. ಇದರ ಬೆನ್ನಲ್ಲೇ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಸೆ. 29ರಂದು ಕರ್ನಾಟಕ ಬಂದ್‌ ನಡೆಸಲು ಸಿದ್ಧತೆ ನಡೆಸಿವೆ. ಕಾವೇರಿ ವಿಚಾರವಾಗಿ ಬಂದ್ ಕರೆ ನೀಡುವ ವಿಚಾರ ಇದೀಗ ರೈತ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳ ನಡುವೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಹೀಗಾಗಿ, ಬೆಂಗಳೂರಿಗರಿಗೆ ಒಂದೇ ವಾರದಲ್ಲಿ ಎರಡೆರಡು ಬಂದ್‌ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುವ ಸಂಭವವೂ ಇದೆ.

ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ರಚನೆಯಾಗಿರುವ, 92 ಸಂಘಟನೆಗಳು ಬೆಂಬಲ ಸೂಚಿಸಿರುವ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಸೆ. 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಆದರೆ, ಅದಕ್ಕೆ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಸೇರಿದಂತೆ 20ಕ್ಕೂ ಹೆಚ್ಚಿನ ಕನ್ನಡಪರ ಸಂಘಟನೆಗಳ ಮುಖಂಡರು ಬೆಂಬಲ ನೀಡದೆ ಸೆ. 29ರಂದು ರಾಜ್ಯ ಬಂದ್‌ಗೆ ಕರೆ ನೀಡಲು ಮುಂದಾಗಿದ್ದಾರೆ. ಈ ಕುರಿತು ಸೋಮವಾರ ಸಭೆ ನಡೆಸಿ ದಿನಾಂಕ ಘೋಷಿಸುವುದಾಗಿಯೂ ತಿಳಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಹಿಂದೂ ಚಟುವಟಿಕೆ, ಕಾರ್ಯಕರ್ತರೇ ಟಾರ್ಗೆಟ್‌: ಜೋಶಿ ಕಿಡಿ

ಬಸ್‌ ಸಂಚಾರ ಸ್ಥಗಿತ ಇನ್ನೂ ನಿರ್ಧರಿಸಿಲ್ಲ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ 90ಕ್ಕೂ ಹೆಚ್ಚು ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್‌ಗೆ ಹಲವಾರು ಸಂಘಗಳು ಸಂಪೂರ್ಣ ಬೆಂಬಲ ಘೋಷಿಸಿವೆ. ಆಟೋ, ಟ್ಯಾಕ್ಸಿ ಸೇರಿದಂತೆ ಹಲವು ಉದ್ಯಮಗಳು ಬಂದ್‌ ಆಗುವ ಸಾಧ್ಯತೆ ಇದೆ. ಹೀಗಾಗಿ ನಾಳೆ ರಾಜಧಾನಿ ಬೆಂಗಳೂರು ಸ್ತಬ್ಧವಾಗುವ ಸಾಧ್ಯತೆ ಕಂಡುಬರುತ್ತಿದೆ.

ಇಂದು ಬಣಗಳ ಮುಖಾಮುಖಿ?: ಬಂದ್‌ ವಿಚಾರದಲ್ಲಿ ಎದ್ದಿರುವ ಗೊಂದಲ ನಿವಾರಣೆ ಕುರಿತಂತೆ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸಭೆ ನಡೆಯುವ ಸಾಧ್ಯತೆಗಳಿವೆ. ವಾಟಾಳ್‌ ನಾಗರಾಜ್‌ ನೇತೃತ್ವದ ಕನ್ನಡಪರ ಸಂಘಟನೆಗಳು ಸಭೆ ನಡೆಸಿ ಕರ್ನಾಟಕ ಬಂದ್‌ನ ದಿನಾಂಕ ನಿಗದಿ ಮಾಡಲಿವೆ. ಈ ಸಭೆಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ನೇತೃತ್ವ ವಹಿಸಿರುವ ಕುರುಬೂರು ಶಾಂತಕುಮಾರ್‌ ಅವರನ್ನೂ ಕರೆಯಲಾಗಿದೆ. ಸಭೆಗೆ ಕುರುಬೂರು ಶಾಂತಕುಮಾರ್‌ ಸೇರಿದಂತೆ ಇನ್ನಿತರರು ಆಗಮಿಸಿದರೆ, ಒಂದೇ ದಿನ ಎರಡೂ ಬಣಗಳಿಂದ ಬಂದ್‌ ನಡೆಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಇಲ್ಲದಿದ್ದರೆ ಬೆಂಗಳೂರಿಗರು ಒಂದೇ ವಾರದಲ್ಲಿ ಎರಡು ಬಂದ್‌ ಎದುರಿಸಬೇಕಾಗಿ ಬರಬಹುದು. ರೈತರ ಹಿತ ದೃಷ್ಟಿಯಿಂದ ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದೇವೆ. ಬಂದ್‌ಗೆ 92 ಸಂಘಟನೆಗಳು ಬೆಂಬಲ ನೀಡಿದ್ದು, ನಾವು ಬಂದ್‌ ನಡೆಸುತ್ತೇವೆ. ಅದಕ್ಕೆ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿದರೆ ಉತ್ತಮ. ಆ ಬಗ್ಗೆ ವಾಟಾಳ್‌ ನಾಗರಾಜ್‌ ಸೇರಿದಂತೆ ಇನ್ನಿತರ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡುತ್ತೇವೆ ಎಂದು ಕುರಬೂರು ಶಾಂತಕುಮಾರ್ ಹೇಳಿದ್ದಾರೆ.

92 ಸಂಘಟನೆಗಳಿಂದ ಬೆಂಬಲ: ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಕರೆ ನೀಡಿರುವ ಬೆಂಗಳೂರು ಬಂದ್‌ಗೆ ರಾಜ್ಯ ರೈತ ಸಂಘಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಆಮ್‌ ಆದ್ಮಿ ಪಕ್ಷ ಸೇರಿದಂತೆ 92 ಸಂಘಟನೆಗಳು ಬೆಂಬಲ ನೀಡಿವೆ. ಈ ಸಂಘಗಳಲ್ಲಿ ಬಿಬಿಎಂಪಿ ಕಾರ್ಮಿಕ ಸಂಘ, ಕೆಎಸ್ಸಾರ್ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಯೂನಿಯನ್‌, ವಾಹನ ಚಾಲಕರ ಮತ್ತು ಮಾಲೀಕರ ಸಂಘಗಳು ಬೆಂಬಲ ನೀಡಿರುವುದರಿಂದ ಸಾರಿಗೆ ಹಾಗೂ ಬಿಬಿಎಂಪಿಯ ಕಾರ್ಯಗಳಲ್ಲಿ ವ್ಯತ್ಯಯವಾಗಲಿದೆ. ಅದರ ಜತೆಗೆ ಖಾಸಗಿ ಶಾಲೆಗಳ ಸಂಘಟನೆಯಾದ ರುಪ್ಸಾ, ಖಾಸಗಿ ಶಾಲೆಗಳ ಪೋಷಕರ ಸಮನ್ವಯ ಸಮಿತಿ ಬೆಂಬಲ ನೀಡಿರುವುದರಿಂದ ಮಂಗಳವಾರ ಖಾಸಗಿ ಶಾಲೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಂತಾಗಲಿದೆ.

ಹಲವು ಸೇವೆಗಳಲ್ಲಿ ವ್ಯತ್ಯಯ: ಬೆಂಗಳೂರು ಬಂದ್‌ನಿಂದಾಗಿ ಮಂಗಳವಾರ ಬೆಂಗಳೂರಿನಲ್ಲಿ ಹಲವು ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಬಿಎಂಟಿಸಿ ಬಸ್‌ಗಳು ಭಾಗಶಃ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಅದರ ಜತೆಗೆ ಒಲಾ-ಉಬರ್‌ ಆಟೋ, ಕ್ಯಾಬ್‌ಗಳು ಸಂಚರಿಸುವುದಿಲ್ಲ. ಅಲ್ಲದೆ, ಎಪಿಎಂಸಿ ನೌಕರರು ಬೆಂಬಲ ನೀಡಿರುವುದರಿಂದ ಮಾರುಕಟ್ಟೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಆಭರಣ ಮಳಿಗೆಗಳು, ಚಲನಚಿತ್ರ, ಧಾರಾವಾಹಿ ಚಿತ್ರೀಕರಣ ಸ್ಥಗಿತಗೊಳ್ಳಲಿದೆ. ಮಂಗಳವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹಲವು ಸೇವೆಗಳು ವ್ಯತ್ಯಯವಾಗಲಿವೆ.

ಪ್ರತ್ಯೇಕ ಬಂದ್‌ಗೆ ಹಠ ಹಿಡಿದಿರುವ ಬಣಗಳು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಂಗಳವಾರ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಅಂದು ಬಂದ್‌ ನಡೆಸಿ, ಸಮಿತಿ ಮೇಲೆ ಒತ್ತಡ ಹೇರುವ ಉದ್ದೇಶ ಹೊಂದಲಾಗಿದೆ ಎಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ತಿಳಿಸಿದೆ. ಈಗಾಗಲೇ ತಡವಾಗಿದ್ದು, ಇಷ್ಟರೊಳಗೆ ಬಂದ್‌ ಸೇರಿದಂತೆ ಇನ್ನಿತರ ರೀತಿಯಲ್ಲಿ ಹೋರಾಟ ನಡೆಸಿ ಕಾವೇರಿಗೆ ಸಂಬಂಧಿಸಿದ ಸಮಿತಿ, ಪ್ರಾಧಿಕಾರದ ಮೇಲೆ ಒತ್ತಡ ಹೇರಬೇಕಿತ್ತು. ಆ ಕೆಲಸವನ್ನು ಈಗ ಮಾಡಲಾಗುತ್ತಿದೆ ಎಂದು ಸಮಿತಿ ಹೇಳುತ್ತಿದೆ.

ಮತ್ತೊಂದೆಡೆ ಕನ್ನಡಪರ ಸಂಘಟನೆಗಳು ಸೆ. 29ರಂದು (ಶುಕ್ರವಾರ) ರಾಜ್ಯ ಬಂದ್‌ಗೆ ಕರೆ ನೀಡಲು ಸಿದ್ಧತೆ ನಡೆಸಿಕೊಂಡಿವೆ. ಬೆಂಗಳೂರಿನ ಜತೆಗೆ ರಾಜ್ಯ ಬಂದ್‌ ಮಾಡಿದರೆ ಅದರ ಪರಿಣಾಮ ಹೆಚ್ಚಿರುತ್ತದೆ. ಹೀಗಾಗಿ ರಾಜ್ಯ ಬಂದ್‌ ಮಾಡುತ್ತೇವೆ ಎಂದು ಕನ್ನಡಪರ ಸಂಘಟನೆಗಳ ವಾದವಾಗಿದೆ. ಹೀಗಾಗಿ ಬೆಂಗಳೂರಿಗೆ ನಾಲ್ಕು ದಿನಗಳ ಅಂತರದಲ್ಲಿ ಎರಡು ಬಾರಿ ಬಂದ್‌ ಎದುರಾಗುವ ಸಾಧ್ಯತೆಗಳಿವೆ.

ಏನಿರಲ್ಲ?
ಖಾಸಗಿ ಸಾರಿಗೆ
ರುಪ್ಸಾ ಸಂಘಟನೆ ವ್ಯಾಪ್ತಿಯ ಖಾಸಗಿ ಶಾಲೆಗಳು
ಎಪಿಎಂಸಿ
ಭಾಗಶಃ ಬಿಎಂಟಿಸಿ ಬಸ್‌ಗಳು
ಆಭರಣ ಮಳಿಗೆಗಳು
ಚಲನಚಿತ್ರ, ಧಾರಾವಾಹಿ ಚಿತ್ರೀಕರಣ
ಭಾಗಶಃ ಬಿಬಿಎಂಪಿ ಸೇವೆಗಳು

ಏನಿರುತ್ತೆ ?
ಹೋಟೆಲ್‌
ಶಾಲೆ-ಕಾಲೇಜು
ಮೆಡಿಕಲ್‌ ಸ್ಟೋರ್‌
ಹಾಪ್‌ಕಾಮ್ಸ್‌
ಕೆಎಸ್ಸಾರ್ಟಿಸಿ ಬಸ್‌ಗಳು
ಕೆಲ ಮಾರುಕಟ್ಟೆಗಳು

ಬೆಂಗಳೂರು ಬಂದ್‌ ಪ್ರಮುಖಾಂಶ
* ಸೆ. 26ರಂದು ಬೆಳಗ್ಗೆ 11 ಗಂಟೆಗೆ ಟೌನ್‌ ಹಾಲ್‌ನಿಂದ ಮೈಸೂರು ಬ್ಯಾಂಕ್‌ ವೃತ್ತದವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ
* ಪ್ರತಿಭಟನೆ ವೇಳೆ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರದ್ದುಗೊಳಿಸಲು ಆಗ್ರಹ
* ತಮಿಳುನಾಡಿಗೆ ಹರಿಸುವ ನೀರು ಕೂಡಲೆ ಸ್ಥಗಿತಗೊಳಿಸುವಂತೆ ಒತ್ತಾಯಿಸಲು ನಿರ್ಧಾರ
* 92 ಸಂಘಟನೆಗಳಿಂದ ಸಂಪೂರ್ಣ ಬೆಂಬಲ, 20ಕ್ಕೂ ಹೆಚ್ಚಿನ ಸಂಘಟನೆಗಳಿಂದ ಬಾಹ್ಯ, ನೈತಿಕ ಬೆಂಬಲ

ಸೆ. 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡುವ ಕುರಿತಂತೆ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಸೋಮವಾರ ಸಭೆ ನಡೆಸಲಾಗುತ್ತಿದೆ. ಬಂದ್‌ ವಿಚಾರವನ್ನು ಯಾರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಎರಡೆರಡು ಬಂದ್‌ ನಡೆಸುವ ಬದಲು ಒಂದೇ ಬಂದ್‌ ನಡೆಸುವ ಕುರಿತಂತೆ ಬೆಂಗಳೂರು ಬಂದ್‌ಗೆ ಕರೆ ನೀಡಿರುವವರ ಜತೆ ಮಾತುಕತೆ ನಡೆಸುತ್ತೇವೆ.
-ಪ್ರವೀಣ್ ಶೆಟ್ಟಿ, ಕರವೇ ಅಧ್ಯಕ್ಷ

ಪಾಕಿಸ್ತಾನದ ಲಾಹೋರ್‌ನಲ್ಲಿ ಗಣೇಶ ಪ್ರತಿಷ್ಠಾಪಿಸುತ್ತೇವೆ: ಶಾಸಕ ಬಸನಗೌಡ ಯತ್ನಾಳ್‌

ರೈತರ ಹಿತ ದೃಷ್ಟಿಯಿಂದ ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದೇವೆ. ಸರ್ಕಾರ ಹಾಗೂ ಕಾವೇರಿ ನದಿ ನೀರಿಗೆ ಸಂಬಂಧಿಸಿದ ಸಮಿತಿ, ಪ್ರಾಧಿಕಾರಗಳಿಗೆ ಎಚ್ಚರಿಕೆ ನೀಡಲು ಬಂದ್‌ ನಡೆಸುವುದು ಅನಿವಾರ್ಯ. ಬಂದ್‌ಗೆ 92 ಸಂಘಟನೆಗಳು ಬೆಂಬಲ ನೀಡಿದ್ದು, ನಾವು ಬಂದ್‌ ನಡೆಸುತ್ತೇವೆ. ಅದಕ್ಕೆ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿದರೆ ಉತ್ತಮ. ಆ ಬಗ್ಗೆ ವಾಟಾಳ್‌ ನಾಗರಾಜ್‌ ಸೇರಿದಂತೆ ಇನ್ನಿತರ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡುತ್ತೇವೆ.
-ಕುರುಬೂರು ಶಾಂತಕುಮಾರ್‌, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

ಕನ್ನಡ ಒಕ್ಕೂಟದಿಂದ ಸೆ.29ಕ್ಕೆ ಅಖಂಡ ಕರ್ನಾಟಕ ಬಂದ್‌ ಮಾಡುವ ಯೋಜನೆ ಇದೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಸೋಮವಾರ ಬೆಳಗ್ಗೆ 10.30ಕ್ಕೆ ವುಡ್‌ಲ್ಯಾಂಡ್‌ ಹೋಟೆಲ್‌ನಲ್ಲಿ ಸಂಘಟನೆಗಳ ಮುಖಂಡರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಬಂದ್‌ನ ದಿನಾಂಕವನ್ನು ಅಂತಿಮಗೊಳಿಸಲಾಗುವುದು
-ವಾಟಾಳ್ ನಾಗರಾಜ್‌, ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ