Karnataka Cabinet Expansion: ಸಚಿವ ಸ್ಥಾನ ಸಿಗದ ಬಗ್ಗೆ ರೇಣುಕಾಚಾರ್ಯ ಅಸಮಾಧಾನ
ಸಿದ್ದರಾಮಯ್ಯನವರದ್ದು ಹರಕು ಬಾಯಿ, ತಾಕತ್ತಿದ್ದರೆ ಪಿಎಫ್‌ಐ ಬ್ಯಾನ್ ಮಾಡಿ ಎಂದು ಹೇಳುತ್ತಿದ್ದರು. ಈಗ ಆರ್‌ಎಸ್‌ಎಸ್ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ ಎಂದು ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.
ಬೆಂಗಳೂರು (ಸೆಪ್ಟೆಂಬರ್ 29) : ರಾಜ್ಯ ಸಚಿವ ಸಂಪುಟ ರಚನೆ ವಿಚಾರವಾಗಿ ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ. ಸಚಿವ ಸಂಪುಟ ವಿಚಾರವಾಗಿ ನನಗೆ ನಿಜವಾಗಿಯೂ ಅನ್ಯಾಯವಾಗಿದೆ. ಆದರೆ, ನಾನು ಬಂಡಾಯವೆದ್ದಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ. ಬಿಜೆಪಿಯಲ್ಲಿ ನಾವೆಲ್ಲ ಸಿಂಹದ ಮರಿಗಳು. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬಿಎಸ್‌ವೈ, ಸದ್ಯ ಬಸವರಾಜ ಬೊಮ್ಮಾಯಿ ಅಧಿಕಾರ ಗಟ್ಟಿಯಾಗಿದೆ. ಇನ್ನು, ಈಶ್ವರಪ್ಪ ,ಜಾರಕಿಹೊಳಿ ಯಾರೂ ಅಸಮಾಧಾನ ಹೊಂದಿಲ್ಲ. ಆದರೆ, ಕೆಲವರಿಗೆ 2 - 3 ಖಾತೆಗಳಿವೆ. ಅಲ್ಲದೆ, ಖಾಲಿ ಇರುವ ಸಚಿವ ಸ್ಥಾನ ಭರ್ತಿ ಮಾಡಬೇಕು. ನನಗೆ ಮಾತ್ರ ಅಂತ ಕೇಳ್ತಿಲ್ಲ. 6 ಖಾತೆಗಳು ಖಾಲಿ ಇದೆ. ಅರ್ಹತೆ ಇರುವವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಚಿವ ಸ್ಥಾನ ವಂಚಿತ ರೇಣುಕಾಚಾರ್ಯ ಟೀಕೆ ಮಾಡಿದ್ದಾರೆ.
ಅಲ್ಲದೆ, ನಾನು ವಿಚಲಿತನಾಗಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಕಳೆದ ವಾರ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ನಾನು ಸಹ ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದೇನೆ. ಹಗಲು - ರಾತ್ರಿ ಕೆಲಸ ಮಾಡಿದ್ದೇನೆ. ನನಗೆ ಅಧಿಕಾರ ವಂಚನೆಯಾಗಿದೆ, ನನಗೆ ನಿಜವಾಗಿಯೂ ಅನ್ಯಾಯ ಆಗಿದೆ ಎಂದು ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು, ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನನಗೆ ಸಚಿವ ಸ್ಥಾನ ಕೊಡಬೇಕಿತ್ತು. ಆದ್ರೆ ಕೊಟ್ಟಿಲ್ಲ. ಹಾಗಂತ ನಾನು ಬಂಡಾಯ ಎದ್ನಾ, ಬಿಎಸ್‌ವೈ ವಿರುದ್ದ ಮಾತನಾಡಿದ್ನಾ..? ಎಂದೂ ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ: Rahul Gandhi ಕಾಮಿಡಿ ಪೀಸ್: ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಲೇವಡಿ
ನಾನು ನಮ್ಮ ನಾಯಕರ ಮುಂದೆ ಸಚಿವ ಸ್ಥಾನ ಸಿಗದ ಬಗ್ಗೆ ಹೇಳಿಕೊಂಡಿದ್ದೇನೆ, ಆದ್ರೆ ನನಗೆ ಅಸಮಾಧಾನವಿಲ್ಲ. ನನಗೆ ನಿಜವಾಗಿಯೂ ಅನ್ಯಾಯವಾಗಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದೇನೆ. ನನ್ನ ಕ್ಷೇತ್ರದ ಜನತೆ ನನ್ನ ದೇವರು. ನನಗೆ ಯಾವುದೇ ಅಸಮಾಧಾನ ಇಲ್ಲ, ಆದ್ರೆ ನನಗೆ ಅನ್ಯಾಯವಾಗಿರೋದು ನಿಜ.
ಕೋವಿಡ್ ಸಮಯದಲ್ಲಿ, ನೆರೆ ಸಮಯದಲ್ಲಿ ನಾನು ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಿದೆ. ನನ್ನ ಕರ್ತವ್ಯ ನಾನು ಮಾಡಿದ್ದೇನೆ ಎಂದೂ ಹೊನ್ನಾಳಿ ಶಾಸಕ ಎಂದೂ ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರದು ಹರಕು ಬಾಯಿ: ರೇಣುಕಾಚಾರ್ಯ
ಪಿಎಫ್‌ಐ ಅನ್ನು ತಾಕತ್ ಇದ್ದರೆ ಬ್ಯಾನ್ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಆರ್‌ಎಸ್‌ಎಸ್ ಬ್ಯಾನ್ ಮಾಡಿ ಎಂದು ಹೇಳುತ್ತಿದ್ದಾರೆ. ಮೋದಿ, ಅಮಿತ್ ಶಾ ನುಡಿದಂತೆ ಮಾಡುತ್ತಾರೆ. ಆದರೆ, ಸಿದ್ದರಾಮಯ್ಯ ಅವರದು ಹರಕು ಬಾಯಿ ಎಂದು ರೇಣುಕಾಚಾರ್ಯ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರಿಗೆ ನಾನು ಸವಾಲು ಹಾಕ್ತೀನಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 175 ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ತಗೊಂಡ್ರಿ. ಯಾವ ಕಾರಣಕ್ಕೆ ಕೇಸ್ ವಾಪಸ್ ತಗೊಂಡ್ರಿ ಅಂತ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ದೇವಸ್ಥಾನದಲ್ಲಿ ತೀರ್ಥ ಕೊಟ್ರೆ ಮದರಸಾದಲ್ಲಿ ಭಯೋತ್ಪಾದನೆ ಕಲಿಸ್ತಾರೆ: ರೇಣುಕಾಚಾರ್ಯ ಆರೋಪ
ಅದರ ಪರಿಣಾಮ ಹಿಂದೂ, ಬಿಜೆಪಿ ಕಾರ್ಯಕರ್ತರ ಕೊಲೆ ಆಯ್ತು. ಸಿದ್ದರಾಮಯ್ಯ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಮಾಡ್ಕೊಳ್ತಿದ್ದಾರೆ. ಹಿಂದುತ್ವಕ್ಕೆ ಮೊದಲು ತನ್ನನ್ನು ಸಮರ್ಪಿಸಿಕೊಂಡ ಸಂಸ್ಥೆ ಆರ್‌ಎಸ್ಎಸ್, ದೇಶ ವಿರೋಧಿ ಚಟುವಟಿಕೆ ಕಂಡುಬಂದಾಗ ಅದರ ದನಿ ಎತ್ತೋದೇ ಆರ್‌ಎಸ್ಎಸ್. ಕೋವಿಡ್ ಬಂದಿದ್ದಾಗ ಜನರ ರಕ್ಷಣೆಗೆ ಬಂದಿದ್ದು ಆರ್‌ಎಸ್ಎಸ್, ಸಿದ್ದರಾಮಯ್ಯ ಅಲ್ಲ. ಆರ್‌ಎಸ್ಎಸ್ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಿ. ಒಂದೇ ಒಂದು ದೇಶ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ರೆ ತಿಳಿಸಿ. ತಾಕತ್ ಬಗ್ಗೆ ಮಾತಾಡುವ ನೈತಿಕತೆ ಸಿದ್ದರಾಮಯ್ಯಗಿಲ್ಲ ಎಂದೂ ಬೆಂಗಳೂರಿನಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.