ಬೆಂಗಳೂರು(ಸೆ.27): ಕೈಗಾರಿಕಾ ವಿವಾದಗಳು ಮತ್ತು ಇತರ ಕೆಲವು ಕಾನೂನುಗಳ ತಿದ್ದುಪಡಿ ವಿಧೇಯಕ 2020 ಅಂಗೀಕಾರ ಸಂಬಂಧ ನಡೆದ ಮತದಾನದಲ್ಲಿ ಆಡಳಿತ ಪಕ್ಷದ ಸದಸ್ಯರ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ವಿಧೇಯಕ ವಿಧಾನ ಪರಿಷತ್‌ನಲ್ಲಿ ಬಿದ್ದುಹೋಯಿತು.

ಈ ವಿಧೇಯಕದ ಸಂಬಂಧ ಪರ ಹಾಗೂ ವಿರೋಧ ವಾದಗಳ ನಡುವೆ ಆರಂಭವಾದ ಗದ್ದಲದ ನಡುವೆ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿಅವರು ವಿಧೇಯಕವನ್ನು ಮತಕ್ಕೆ ಹಾಕಿದರು. ಈ ವೇಳೆ ವಿಧೇಯಕದ ಪರ 14 ಮತ ಹಾಗೂ ವಿರುದ್ಧ 26 ಮತಗಳು ಬಿದ್ದವು. ಹೀಗಾಗಿ ವಿಧೇಯಕ ಅಂಗೀಕಾರವಾಗದೆ ಆಡಳಿತ ಪಕ್ಷ ಮುಜುಗರಕ್ಕೆ ಗುರಿಯಾಯಿತು.

ಇದಕ್ಕೂ ಮುನ್ನ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಅವರು ಈ ವಿಧೇಯಕವನ್ನು ಮಂಡಿಸಿ, ಈ ಹಿಂದೆ ಕಾರ್ಖಾನೆಗಳಲ್ಲಿ 100ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಉದ್ಯೋಗದಿಂದ ಕೆಲಸಕ್ಕೆ ತೆಗೆಯಲು ಸರ್ಕಾರದ ಅನುಮತಿ ಪಡೆಯಬೇಕಿತ್ತು. ಈಗ ಆ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗಿದೆ. ಇನ್ನು ಕಾರ್ಮಿರ ಅವಧಿ ಮೀರಿದ ಕೆಲಸ (ಓಟಿ) ಸಮಯ ಹೆಚ್ಚಿಸಲಾಗಿದೆ ಎಂದರು.

ಇನ್ನೂ 10 ವರ್ಷ ಕಾಂಗ್ರೆಸ್ಸನ್ನು ವಿರೋಧ ಪಕ್ಷದಲ್ಲಿ ಕೂರಿಸ್ತೇವೆ: ಯಡಿಯೂರಪ್ಪ

ವಿಧೇಯಕದಲ್ಲಿ ಕೆಲ ಬದಲಾವಣೆ ಅಗತ್ಯ:

ಬಿಜೆಪಿಯ ಆಯನೂರು ಮಂಜುನಾಥ ಅವರು, ಒಬ್ಬ ವ್ಯಕ್ತಿಗೆ 8 ಗಂಟೆ ಕೆಲಸದ ಅವಧಿ ನಿಗದಿಗೊಳಿಸಲಾಗಿದೆ. ಓವರ್‌ ಟೈಂ ಕೆಲಸ ಮಾಡುವುದರಿಂದ ಆತನ ದೈಹಿಕ ಕ್ಷಮತೆ ಹಾಳಾಗುತ್ತದೆ. ಹೀಗಾಗಿ ಈ ವಿಧೇಯಕದಲ್ಲಿ ಕೆಲವೊಂದು ಬದಲಾವಣೆ ಮಾಡಬೇಕೆಂದು ಸಲಹೆ ನೀಡಿದರು.

ತಿಪ್ಪೇಸ್ವಾಮಿ ಮಾತನಾಡಿ, ಕಾರ್ಖಾನೆ ಮಾಲಿಕರು ಇದನ್ನು ಅಸ್ತ್ರವಾಗಿ ಬಳಸಿಕೊಂಡು ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ವಿಧೇಯಕ ಮಂಡಿಸಬಾರದು ಎಂದು ಒತ್ತಾಯಿಸಿದರು. ಸದಸ್ಯ ಬಸವರಾಜ ಹೊರಟ್ಟಿಮಾತನಾಡಿ, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಕಾರ್ಮಿಕ ವಿರೋಧಿ ವಿಧೇಕ ಮಂಡಿಸಲಾಗಿದೆ ಎಂದು ಟೀಕಿಸಿದರು.

ಇದು ಕಂಪನಿ ಸರ್ಕಾರ:

ವಿರೋಧ ಪಕ್ಷದ ನಾಯಕದ ಎಸ್‌.ಆರ್‌.ಪಾಟೀಲ್‌ ಮಾತನಾಡಿ, ಈ ವಿಧೇಯಕ ಇದು ಕಂಪನಿ ಸರ್ಕಾರ ಮಾಡುವ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಸಚಿವ ಶಿವರಾಮ ಹೆಬ್ಬಾರ್‌ ಅವರು ಮೂರು ಬಾರಿ ವಿಧೇಯಕದ ಬಗ್ಗೆ ಸ್ಪಷ್ಟನೆ ನೀಡಲು ಮುಂದಾದರು. ಇದ್ಯಾವುದಕ್ಕೂ ಮುನ್ನಣೆ ನೀಡದ ವಿರೊಧ ಪಕ್ಷದ ಸದಸ್ಯರು ವಿಧೇಯಕ ಹಿಂಪಡೆಯುವಂತೆ ಗದ್ದಲ ನಡೆಸಿದರು.