ಬೆಂಗಳೂರು(ಸೆ.27): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಧ್ವನಿ ಮತದಲ್ಲಿ ಸೋಲಾಗಿದೆ. ಹೀಗಾಗಿ ಪ್ರಸ್ತಾವವನ್ನು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿರಸ್ಕರಿಸಿದ್ದಾರೆ. 

ಅವಿಶ್ವಾಸ ನಿರ್ಣಯ ಮಂಡಿಸಿ ಸಿದ್ದರಾಮಯ್ಯ ಮಾಡಿದ್ದ ಆರೋಪಗಳಿಗೆ ಉತ್ತರಿಸಿದ ಬಿ.ಎಸ್‌.ಯಡಿಯೂರಪ್ಪ, ಭ್ರಷ್ಟಾಚಾರದ ವಿರುದ್ಧ ನೀವು ಮಾಡಿರುವ ಆರೋಪಗಳ ಬಗ್ಗೆ ತನಿಖೆಗೆ ನಾನು ಸಿದ್ಧನಿದ್ದೇನೆ. ಅಷ್ಟೇ ಅಲ್ಲ ಇದೇ ಆರೋಪವನ್ನು ಮುಂದೆ ಎದುರಾಗುವ ಉಪ ಚುನಾವಣೆಗಳಲ್ಲಿ ಪ್ರಸ್ತಾಪಿಸಿ. ಯಾರು ಗೆಲ್ಲುತ್ತೇವೆ ಎಂಬುದನ್ನು ನೋಡೋಣ ಎಂದು ಸವಾಲು ಹಾಕಿದರು.

ಬಿಎಸ್‌ವೈ ಸರ್ಕಾರಕ್ಕೆ ಏಳು ವಿಷಯಗಳ ಸವಾಲು ಹಾಕಿದ ಜಾರಕಿಹೊಳಿ

ನಮ್ಮ ಸರ್ಕಾರದ ಬಗ್ಗೆ ವಿಶ್ವಾಸ ಇರುವುದಕ್ಕಾಗಿಯೇ 28 ಲೋಕಸಭೆ ಕ್ಷೇತ್ರಗಳಲ್ಲಿ 25 ಗೆದ್ದಿದ್ದೇವೆ. 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 12 ಸ್ಥಾನ ಗೆದ್ದಿದ್ದೇವೆ. ಕೊರೋನಾ, ಅತಿವೃಷ್ಟಿ, ಆರ್ಥಿಕ ಸಂಕಷ್ಟದ ನಡುವೆಯೂ ಜನರಿಗೆ ಒಳ್ಳೆಯದಾಗಲಿ ಎಂದು ದುಡಿಯುತ್ತಿದ್ದೇವೆ. ಹೀಗಾಗಿ ಉಪ ಚುನಾವಣೆ ಗೆಲ್ಲುವುದು ಮಾತ್ರವಲ್ಲ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 135 ರಿಂದ 140 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ. ಮುಂದಿನ ಹತ್ತು ವರ್ಷಗಳ ಕಾಲ ಕಾಂಗ್ರೆಸ್ಸನ್ನು ವಿರೋಧಪಕ್ಷದಲ್ಲೇ ಕೂರಿಸುತ್ತೇವೆ ಎಂದು ಸವಾಲು ಎಸೆದರು.

ಬಳಿಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಿದ್ದರಾಮಯ್ಯ ಮಂಡಿಸಿರುವ ಅವಿಶ್ವಾಸ ನಿರ್ಣಯ ಧ್ವನಿ ಮತಕ್ಕೆ ಹಾಕುತ್ತೇನೆ. ಪ್ರಸ್ತಾವದ ಪರ ಇರುವವರು ‘ಹೌದು’ ಎಂದು ವಿರುದ್ಧ ಇರುವವರು ‘ಇಲ್ಲ’ ಎಂದು ಹೇಳಲು ಕೋರಿದರು. ಈ ವೇಳೆ ಪ್ರಸ್ತಾವದ ವಿರುದ್ಧ ಹೆಚ್ಚು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಸ್ತಾವವನ್ನು ಸ್ಪೀಕರ್‌ ತಿರಸ್ಕೃತಗೊಳಿಸಿದರು.