ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ನಿನ್ನೆ ಮೊನ್ನೆ ಸೇರ್ಪಡೆಗೊಂಡ ವಿ.ಎಸ್.ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ಸರಿಯಲ್ಲ. ಪಕ್ಷಕ್ಕಾಗಿ ದುಡಿದ, ಪಕ್ಷ ಸಂಘಟನೆಯಲ್ಲಿರುವ ವ್ಯಕ್ತಿಗೆ ಟಿಕೆಟ್ ನೀಡಬೇಕು: ಲಕ್ಷ್ಮಣ ಬನ್ಸೋಡೆ 

ಉತ್ತರ ಕನ್ನಡ(ಏ.10): ಶಿರಸಿ, ಕಾರವಾರದ ಬಳಿಕ ಇದೀಗ ಯಲ್ಲಾಪುರ ಕ್ಷೇತ್ರದಿಂದಲೂ ಕಾಂಗ್ರೆಸ್ ಪಾಳಯದಲ್ಲಿ ಬಂಡಾಯ ಕೇಳಿಬಂದಿದೆ. ಕಾಂಗ್ರೆಸ್‌ನಿಂದ ಯಲ್ಲಾಪುರ ಕ್ಷೇತ್ರಕ್ಕೆ ತನಗೆ ಟಿಕೆಟ್ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮಣ ಬನ್ಸೋಡೆ ಎಚ್ಚರಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಹೇಳಿದ ಸಂದರ್ಭದಲ್ಲಿ ಯಲ್ಲಾಪುರ ಕ್ಷೇತದಿಂದ ಯಾರೂ ಅರ್ಜಿ ಸಲ್ಲಿಸದ ವೇಳೆ ತಾನು ಕೆಪಿಸಿಸಿ ಸೂಚಿಸಿದಂತೆ ಎರಡು ಲಕ್ಷ ರೂಪಾಯಿ ಹಣ ನೀಡಿ ಅರ್ಜಿ ಸಲ್ಲಿಸಿದ್ದೆ. ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಆದರೆ, ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ನಿನ್ನೆ ಮೊನ್ನೆ ಸೇರ್ಪಡೆಗೊಂಡ ವಿ.ಎಸ್.ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ಸರಿಯಲ್ಲ. ಪಕ್ಷಕ್ಕಾಗಿ ದುಡಿದ, ಪಕ್ಷ ಸಂಘಟನೆಯಲ್ಲಿರುವ ವ್ಯಕ್ತಿಗೆ ಟಿಕೆಟ್ ನೀಡಬೇಕು. ಇದರ ಬದಲು ವಲಸೆ ಬಂದವರಿಗೆ ಟಿಕೆಟ್ ನೀಡಿದರೆ ಮೂಲ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 

ಸತೀಶ್ ಸೈಲ್‌ ಟಿಕೆಟ್‌ ನೀಡಿದ್ದಕ್ಕೆ ಚೈತ್ರಾ ಗರಂ: ಕಾಂಗ್ರೆಸ್‌ನಲ್ಲಿ ಮತ್ತೊಂದು ಬಂಡಾಯ..!

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ವಿ.ಎಸ್.ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಆದರೆ "ಬಿ" ಫಾರ್ಮ್ ತಮಗೆ ನೀಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ತಾನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಯಲ್ಲಾಪುರ ಕ್ಷೇತ್ರದಲ್ಲಿ ಸುಮಾರು 40 ಸಾವಿರ ದಲಿತ ಮತಗಳಿದ್ದು, ಇದು ನಮ್ಮ ಗೆಲುವಿಗೆ ಸಹಕಾರಿ ಆಗಲಿದೆ ಅಂತ ಲಕ್ಷ್ಮಣ ಬನ್ಸೋಡೆ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.