ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಹಿಳಾ ಟಿಕೆಟ್ ಆಕಾಂಕ್ಷಿ ತನ್ನದೇ ಪಕ್ಷದ ವಿರುದ್ಧ ತೊಡೆತಟ್ಟಿದ್ದಾರೆ. ಕಾರವಾರ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್‌ಗೆ ಪಕ್ಷ ಟಿಕೆಟ್ ನೀಡಿದ ಹಿನ್ನೆಲೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಮುಖಂಡೆ ಚೈತ್ರಾ ಕೊಠಾರ್‌ಕರ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಏ.09): ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಒಂದರ ಮೇಲೊಂದು ಬಂಡಾಯ ಕಾಣಲಾರಂಭಿಸಿದೆ. ಮೊನ್ನೆಯಷ್ಟೇ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಂಡಾಯ ನಿಲ್ಲುವ ಘೋಷಣೆ ಮಾಡಿದ್ರೆ, ಇದೀಗ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಹಿಳಾ ಟಿಕೆಟ್ ಆಕಾಂಕ್ಷಿ ತನ್ನದೇ ಪಕ್ಷದ ವಿರುದ್ಧ ತೊಡೆತಟ್ಟಿದ್ದಾರೆ. ಕಾರವಾರ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್‌ಗೆ ಪಕ್ಷ ಟಿಕೆಟ್ ನೀಡಿದ ಹಿನ್ನೆಲೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಮುಖಂಡೆ ಚೈತ್ರಾ ಕೊಠಾರ್‌ಕರ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಉ.ಕ. ಜಿಲ್ಲಾ ಕಾಂಗ್ರೆಸ್ ಪಾಳಯದಲ್ಲಿ ಮತ್ತೊಂದು ಬಿರುಕು
ಹೌದು, ಉತ್ತರಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆಯಷ್ಟೇ ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ ಹೊಸಬಾಳೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ತಾನು ಬಂಡಾಯವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಅಲ್ಲದೇ, ನಾಲ್ಕು ಬಾರಿ ಪಕ್ಷದಿಂದ ಸೋತಿದ್ದ ಭೀಮಣ್ಣ ನಾಯ್ಕ್‌ಗೆ ಟಿಕೆಟ್ ನೀಡಿದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಶಿರಸಿಯಲ್ಲಿ ಬಂಡಾಯ ಕಂಡ ಬೆನ್ನಲ್ಲೇ ಇದೀಗ ಕಾರವಾರ ವಿಧಾನಸಭಾ ಕ್ಷೇತ್ರದಲ್ಲೂ ಬಂಡಾಯದ ಬಿಸಿ ಎದ್ದಿದೆ. ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದ ಸತೀಶ್ ಸೈಲ್‌ಗೆ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಿದಕ್ಕೆ ಕಾಂಗ್ರೆಸ್ ಮುಖಂಡೆ ಚೈತ್ರಾ ಕೋಠಾರ್‌ಕರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯಲು ಚೈತ್ರಾ ತಯಾರಿ ನಡೆಸಿದ್ದಾರೆ.
ಮಾಜಿ ರಾಜ್ಯಪಾಲರ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಡಿ: ಮುಸ್ಲಿಂ ಸಘಟನೆಯಿಂದ AICCಗೆ ಪತ್ರ
ಚೈತ್ರಾ ಕೊಠಾರ್‌ಕರ್ ಹೇಳುವ ಪ್ರಕಾರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಪಕ್ಷದಲ್ಲೇ ಕೆಲವರು ಹೇಳ್ತಿದ್ದಾರೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾನು ಸಮರ್ಥಳಾಗಿದ್ದೇನೆ ಎಂದು ಎಲ್ಲರಿಗೂ ತೋರಿಸ್ತೇನೆ. ಟಿಕೆಟ್‌ಗೋಸ್ಕರ್ ನಾನು ಬಳ್ಳಾರಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯರನ್ನು ಭೇಟಿಯಾಗಿದ್ದೆ. ನೀನು ಕೆಲಸ ಮಾಡು ನಾನು ಆರ್.ವಿ.ದೇಶ್‌ಪಾಂಡೆ ಜತೆ ಮಾತನಾಡ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ರು. ಪ್ರಸ್ತುತ, ಆಮ್ ಆದ್ಮಿ ಪಾರ್ಟಿ ಹಾಗೂ ಜೆಡಿಎಸ್‌ನವರು ನನ್ನನ್ನು ಸಂಪರ್ಕಿಸಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡಾ ನನಗೆ ಕರೆ ಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಆದರೆ, ಬೇರೆ ಪಕ್ಷಗಳಿಗೆ ಹೋಗುವ ಬಗ್ಗೆ ನಾನು ಈವರೆಗೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.
ಪಕ್ಷದಲ್ಲಿ 7 ವರ್ಷ ಕೆಲಸ ಮಾಡಿದ ನನಗೆ ಟಿಕೆಟ್ ತಪ್ಪಿಸಲಾಗಿದೆ. ಜಿಲ್ಲಾ ಪಂಚಾಯತ್‌ನಲ್ಲಿ ಪಕ್ಷದಿಂದ 5 ವರ್ಷ ಪಕ್ಷದಿಂದ ಕೆಲಸ ಮಾಡಿದ್ದೇನೆ. ಶಿಕ್ಷಣ ಹಾಗೂ ಆರೋಗ್ಯ ವಿಭಾಗದ ಸ್ಟ್ಯಾಂಡಿಗ್ ಕಮಿಟಿಯಲ್ಲಿ ಚೇರ್‌ಮ್ಯಾನ್ ಆಗಿ ಕೋವಿಡ್ ಸಮಯಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಪಕ್ಷದ ಯಾವುದೇ ಕೆಲಸವಿದ್ದಾಗಲೂ ನಾನೇ ಮುಂದೆ ಹೋಗ್ತಿದ್ದೆ, ಸಂಘಟನೆ ಕೂಡಾ ಮಾಡ್ತಿದ್ದೆ. ನಾನು ಸಂಘಟನೆ ಮಾಡಿದ ಜನರೇ ನಾನು ಬಂಡಾಯ ಅಭ್ಯರ್ಥಿಯಾಗಿ ನಿಲ್ಲಲು ಒತ್ತಾಯಿಸಿದ್ದಾರೆ. ಹೈ ಕಮಾಂಡ್ ಮಾಡಿದ ಸರ್ವೇಯಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಕೆಪಿಸಿಸಿ ಹಾಗೂ ಎಐಸಿಸಿ ನಾಯಕರು ಕೂಡಾ ಟಿಕೆಟ್ ನನಗಾಗುತ್ತೆ ಎಂದು ಭರವಸೆ ನೀಡಿದ್ದರು. ನನಗೆ ಯಾಕೆ ಟಿಕೆಟ್ ತಪ್ಪಿಸಿದ್ದಾರೆ, ಕೊನೇ ಸಮಯದಲ್ಲಿ ಏನಾಗಿದೆ ಅಂತಾನೂ ಗೊತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಈ ಹಿಂದೆ ಬಿಜೆಪಿಗೆ ಟ್ರೈ ಮಾಡಿದ್ರಾ ಅಂತಾ ನೋಡ್ಬೇಕಿತ್ತು. ಈ ವಿಚಾರಗಳನ್ನು ನೋಡಿ ಟಿಕೆಟ್ ವಿತರಣೆ ಮಾಡ್ಬೇಕಿತ್ತು, ನನಗೆ ಬೇಜಾರಾಗಿದೆ. ಹೈ ಕಮಾಂಡ್ ಇಲ್ಲಿಯವರೆಗೆ ನನ್ನನ್ನು ಸಂಪರ್ಕಿಸಿಲ್ಲ, ಕಾಂಗ್ರೆಸ್ ಮೇಲೆ ನನಗೆ ಬೇಜಾರಿಲ್ಲ. ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಎಲ್ಲೂ ಟಿಕೆಟ್ ನೀಡಿಲ್ಲ, ನನಗೆ ಅಥವಾ ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿಗಾದ್ರೂ ನೀಡಬೇಕಿತ್ತು. ಈ ಹಿಂದೆ ನಡೆದಿದ್ದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಾನು ರೂಪಾಲಿ ನಾಯ್ಕ್‌ರನ್ನು ಸೋಲಿಸಿದ್ದೆ. ಈ ಬಾರಿಯೂ ರೂಪಾಲಿ ನಾಯ್ಕ್ ವಿರುದ್ಧ ಗೆಲ್ಲುವ ವಿಶ್ವಾಸ ನನಗಿದೆ. ನಾನು 25,000ದಿಂದ 30,000ರವರೆಗೆ ಲೀಡ್‌ನಲ್ಲಿ ಗೆದ್ದು ಬರುತ್ತೇನೆ ಎಂದು ಚೈತ್ರಾ ಹೇಳಿದರು.
Karnataka election 2023: ಜನತೆಯ ಮುಂದೆ ಬಿಜೆಪಿ ಅಸಲಿ ಬಣ್ಣ ಬಯಲು ಮಾಡುತ್ತೇವೆ: ಶಾಸಕ ಮಂಕಾಳ ವೈದ್ಯ
ಒಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಒಂದೊಂದಾಗಿಯೇ ಬಂಡಾಯಗಳು ಹೊರಬೀಳುತ್ತಿದ್ದು, ಪಕ್ಷದ ಮುಖಂಡರೇ ಅಭ್ಯರ್ಥಿಗಳ ವಿರುದ್ಧ ತೊಡೆತಟ್ಟಲು ತಯಾರಾಗಿದ್ದಾರೆ. ಪಕ್ಷದೊಳಗಿನ ಭಿನ್ನಮತ ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಇದು ಪಕ್ಷಕ್ಕೆ ದೊಡ್ಡ ಹೊಡೆತ ನೀಡುವುದರಲ್ಲಿ ಎರಡು ಮಾತಿಲ್ಲ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
