ಬೆಂಗಳೂರು [ಫೆ.08]:  ತಮಗೆ ಜಲಸಂಪನ್ಮೂಲ ಖಾತೆ ನೀಡುವ ಬಗ್ಗೆ ಇದುವರೆಗೆ ಸ್ಪಷ್ಟ ಭರವಸೆ ನೀಡದಿರುವ ಕುರಿತು ಮತ್ತು ತಮ್ಮ ಪರ ಮಾಪ್ತ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ನೂತನ ಸಚಿವ ರಮೇಶ್ ಜಾರಕಿಹೊಳಿ ಅವರ ಮುನಿಸು ಮುಂದುವರೆದಿದೆ. ಸಂಪುಟ ವಿಸ್ತರಣೆಗೆ
ದಿನಾಂಕ ನಿಗದಿಯಾದ ದಿನದಿಂದಲೂ ಯಾರೊಂದಿಗೂ ಹೆಚ್ಚು ಮಾತ ನಾಡದೆ ಮೌನಕ್ಕೆ ಜಾರಿರುವ ರಮೇಶ್ ಅವರು ಶುಕ್ರವಾರ ಸಂಜೆ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು.

ಮುಂದಿನ ಸಾರಿಯೂ ಅಧಿಕಾರಕ್ಕೇರಲು ಬಿಎಸ್‌ವೈಗೆ ಹಿರಿಯ ಶಾಸಕ ಕೊಟ್ಟ ಮಾಸ್ಟರ್ ಪ್ಲಾನ್!...

ಅವರೊಂದಿಗೆ ಶಾಸಕ ಮಹೇಶ್ ಕುಮಟಳ್ಳಿ ಅವರೂ ಇದ್ದರು. ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಂತರವೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದ ರಮೇಶ್ ಜಾರಕಿಹೊಳಿ ಅವರ ಮುಖದಲ್ಲಿ ಗಂಭೀರತೆಯೇ ಕಂಡು ಬಂತು. 

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಜಿದ್ದಿನಿಂದಾಗಿ ತಮಗೆ ಜಲಸಂಪನ್ಮೂಲ ಖಾತೆಯನ್ನೇ ನೀಡಬೇಕು ಎಂಬ ಪಟ್ಟನ್ನು ಜಾರಕಿಹೊಳಿ ಅವರು ಮುಂದುವರೆಸಿದ್ದರೂ ಮುಖ್ಯಮಂತ್ರಿಗಳು ಈವರೆಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ನೋಡೋಣ ಎಂದಷ್ಟೇ ಹೇಳುತ್ತಿದ್ದಾರೆ. ಪ್ರಮುಖ ಖಾತೆಯಾಗಿದ್ದರಿಂದ ಮುಂದೆ ಹೆಚ್ಚೂ ಕಡಮೆಯಾದರೆ ಹೇಗೆ ಎಂಬ ಚಿಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾಡುತ್ತಿದೆ ಎಂದು ತಿಳಿದು ಬಂದಿದೆ. 

ಇದೇ ವೇಳೆ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಮುಖ್ಯಮಂತ್ರಿಗಳ ಬಳಿ ಬೇಸರ ವ್ಯಕ್ತಪಡಿಸಿರುವ ಜಾರಕಿಹೊಳಿ, ಮುಂದಿನ ಜೂನ್ ಬಳಿಕ ಮತ್ತೊಮ್ಮೆ ವಿಸ್ತರಣೆ ಅಥವಾ ಪುನಾರಚನೆ ಕೈಗೊಳ್ಳುವ ವೇಳೆ ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.