ರಾಮಲಿಂಗಾರೆಡ್ಡಿಗೆ ಒಂದು ಖಾತೆ ತಗೊಂಡ್ರೆ ಮತ್ತೊಂದು ಫ್ರೀ: ಆಪ್ತನಿಗೆ ಆಫರ್ ಕೊಟ್ಟ ಡಿ.ಕೆ.ಶಿವಕುಮಾರ್
ಸಚಿವ ರಾಮಲಿಂಗಾರೆಡ್ಡಿ ಮನೆಗೆ ತೆರಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರಿಗೆ ಖಾತೆ ಜೊತೆಗೆ ಮತ್ತೊಂದು ಖಾತೆಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು (ಮೇ 28): ರಾಜ್ಯದಲ್ಲಿ 8 ಬಾರಿ ಶಾಸಕನಾಗಿ ಆಯ್ಕೆ ಆಗಿದ್ದರೂ ಪ್ರಭಾವಿ ಖಾತೆಗಳನ್ನು ನೀಡದೇ ಸಣ್ಣ ಖಾತೆಗಳನ್ನು ನೀಡಲಾಗುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಭಾವಿ ಖಾತೆಗಾಗಿ ಪಟ್ಟು ಹಿಡಿದಿದ್ದರು. ಸ್ವತಃ ರಾಮಲಿಂಗಾರೆಡ್ಡಿ ಮನೆಗೆ ತೆರಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರಿಗೆ ಖಾತೆ ಜೊತೆಗೆ ಮತ್ತೊಂದು ಖಾತೆಯನ್ನು ನೀಡುವುದಾಗಿ ಭರವಸೆ ನೀಡುವ ಮೂಲಕ ಮನವೊಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೊದಲ ಬಾರಿ ಸಚಿವರಾದವರಿಗೂ ಪ್ರಭಾವಿ ಖಾತೆಗಳನ್ನು ನೀಡಿದರೂ, ಹಿರಿಯರಿಗೆ ಸಣ್ಣ ಖಾತೆಗಳನ್ನು ನೀಡಲಾಗುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ನನಗೆ ರಾಜ್ಯದಲ್ಲಿ ಸಾರಿಗೆ ಖಾತೆ ಬೇಡವೇ ಬೇಡ ಎಂದು ಪಟ್ಟುಹಿಡಿದು ಪ್ರಭಾವಿ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದರು. ರಾಜ್ಯದಲ್ಲಿ ಕೆಪಿಸಿಸಿ ಪದಾಧಿಕಾರಿಯಾಗಿ ಪಕ್ಷ ಸಂಘಟನೆ ಜೊತೆಗೆ ಸಾಕಷ್ಟು ಸೇವೆ ಸಲ್ಲಿಸಿದ್ದರೂ ತಮ್ಮನ್ನುಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ವತಃ ತಮ್ಮ ಅತ್ಯಾಪ್ತರಾದ ರಾಮಲಿಂಗಾರೆಡ್ಡಿ ಅವರ ಮನೆಗೆ ತೆರಳಿ ಅವರನ್ನು ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನನಗೂ 200 ಯೂನಿಟ್ ಕರೆಂಟ್ ಬೇಕು, ಇಲ್ಲವಾದರೆ ಪ್ರತಿಭಟನೆ: ಶಾಸಕ ಸಿ.ಸಿ.ಪಾಟೀಲ್ ಎಚ್ಚರಿಕೆ
ಸಾರಿಗೆ ಜೊತೆಗೆ ಹೆಚ್ಚುವರಿ ಖಾತೆ ಹಂಚಿಕೆ: ಇನ್ನು ಭಾನುವಾರ ಮಧ್ಯಾಹ್ನ ರಾಮಲಿಂಗಾರೆಡ್ಡಿ ಮನೆಗೆ ತೆರಳಿದ ಡಿ.ಕೆ. ಶಿವಕುಮಾರ್ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಿದ ವೇಳೆ ಸಾರಿಗೆ ಖಾತೆ ಬೇಡವೆಂದು ಪಟ್ಟು ಹಿಡಿದಿದ್ದ ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆಯ ಜೊತೆಗೆ ಇನ್ನೊಂದು ಖಾತೆಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎರಡು ಗಂಟೆಗಳ ಚರ್ಚೆಯ ವೇಳೆ ರೆಡ್ಡಿಯವರ ಮನವೊಲಿಕೆ ಮಾಡುವಲ್ಲಿ ಡಿ.ಕೆ. ಶಿವಕುಮಾರ್ ಯಶಸ್ವಿ ಆಗಿದ್ದಾರೆ.
ರಾಮಲಿಂಗಾರೆಡ್ಡಿ ಪಕ್ಷಕ್ಕೆ ಬದ್ಧರಾಗಿದ್ದಾರೆ: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ರಾಮಲಿಂಗಾರೆಡ್ಡಿ ಅವರ ಮನೆಯಲ್ಲಿ ಯಾವ ಮಾತುಕತೆಯೂ ನಡೆದಿಲ್ಲ. ನಾನು ಪಕ್ಷದ ಅಧ್ಯಕ್ಷ ಆಗಿದ್ದು, ಅವರು ಕಾರ್ಯಾಧ್ಯಕ್ಷರು ಆಗಿದ್ದಾರೆ. ನಾವು ಪಕ್ಷದ ಹಿತದೃಷ್ಟಿಯಿಂದ ಕೆಲ ಮಾತುಕತೆ ಮಾಡಿದ್ದೇವೆ. ಊಹಪೋಹಗಳು ಬಂದಿವೆ. ರಾಮಲಿಂಗಾರೆಡ್ಡಿ ಅವರು ಎಂಟು ಬಾರಿ ಶಾಸಕರು ಆಗಿದ್ದರು. ಕಳೆದ ಬಾರಿ ನಮಗೂ ಇರಲಿಲ್ಲ, ಅವರಿಗೂ ಇರಲಿಲ್ಲ. ರಾಮಲಿಂಗಾರೆಡ್ಡಿ ಅವರು ಪಕ್ಷಕ್ಕೆ ಬದ್ಧರಾಗಿದ್ದಾರೆ. ಪಕ್ಷ ಕಟ್ಟಿದ್ದೇವೆ, ಬೆಳೆಸಿದ್ದೇವೆ ನೋವು ತಿಂದಿದ್ದೇವೆ. ನಾವು ಪಕ್ಷವನ್ನು ಬಿಟ್ಟು ಬೇರೆ ಕಡೆ ಹೋಗಿದ್ದರೆ ಏನೆನೋ ಆಗುತ್ತಿದ್ದೆವು. ಕೆಲವೊಮ್ಮೆ ರಾಜಕೀಯದಲ್ಲಿ ಏನೂ ಮಾಡಲು ಆಗಲ್ಲ. ಜನರಿಗೆ ಕೊಟ್ಟ ಭರವಸೆ ಈಡೇರಿಸಬೇಕು. ಮತ್ತೊಂದೆಡೆ ನಮ್ಮ ಗ್ಯಾರಂಟಿ ಬಗ್ಗೆ ವಿಪಕ್ಷಗಳ ಟೀಕೆ ಮಾಡ್ಯಿದ್ದಾರೆ ತಾನೇ, ಮಾಡಲಿ. 15 ಲಕ್ಷ ಹಾಕ್ತೀವೆ ಅಕೌಂಟ್ ಗೆ ಅಂದ್ರಲ್ಲಾ..? ಏನಾಯ್ತು..? ಒಂದು ಲಕ್ಷ ಸಾಲಮನ್ನಾ ಮಾಡ್ತೇವೆ ಅಂದ್ರು.. ಏನಾಯಿತು ಎಂದು ಪ್ರಶ್ನೆ ಮಾಡಿದರು.
ಎಷ್ಟೇ ಹಿರಿಯರಾದರೂ ಹೈಕಮಾಂಡ್ ನಿರ್ಧಾರ ಫೈನಲ್: ವೀರಪ್ಪ ಮೊಯ್ಲಿ
ರಾಮಲಿಂಗಾರೆಡ್ಡಿಗೆ ಸಾರಿಗೆ ಖಾತೆಯೇ ಫಿಕ್ಸ್: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇರವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧ ಎನ್ನುವ ಮಾತಿನ ಮೂಲಕ ಸಚಿವ ರಾಮಲಿಂಗಾರೆಡ್ಡಿಗೆ ಸಾರಿಗೆ ಖಾತೆಯೇ ಫಿಕ್ಸ್ ಎನ್ನುವುದಂತೂ ಸ್ಪಷ್ಟವಾಗುತ್ತಿದೆ. ಮನವೊಲಿಕೆಯಲ್ಲಿ ನಡೆದ ಆಂತರಿಕ ಮಾಹಿತಿ ಅನುಸಾರ ರಾಮಲಿಂಗಾರೆಡ್ಡಿ ಅವರಿಗೆ ಹೆಚ್ಚುವರಿ ಖಾತೆಯ ಭರವಸೆ ನೀಡಲಾಗಿದೆಯಂತೆ. ಸಾರಿಗೆ ಇಲಾಖೆ ಜೊತೆಗೆ ಹೆಚ್ಚುವರಿ ಖಾತೆ ನೀಡಲು ತೀರ್ಮಾನಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.