ಪಕ್ಷದಲ್ಲಿ ಯಾರು ಎಷ್ಟೇ ಹಿರಿಯರಾದರೂ ಹೈಕಮಾಂಡ್‌ ನಿರ್ಧಾರಕ್ಕೆ ತಲೆ ಬಾಗಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದರು. 

ಮೈಸೂರು (ಮೇ.28): ಪಕ್ಷದಲ್ಲಿ ಯಾರು ಎಷ್ಟೇ ಹಿರಿಯರಾದರೂ ಹೈಕಮಾಂಡ್‌ ನಿರ್ಧಾರಕ್ಕೆ ತಲೆ ಬಾಗಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದರು. ಬಿ.ಕೆ.ಹರಿಪ್ರಸಾದ್‌ಗೆ ಸಚಿವ ಸ್ಥಾನ ಸಿಗದ್ದಕ್ಕೆ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಕುರಿತು ವರದಿಗಳ ಬಗ್ಗೆ ಮೈಸೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಬಿ.ಕೆ.ಹರಿಪ್ರಸಾದ್‌ ಅವರಿಗೆ ಹೇಳುವಂಥದ್ದು ಏನೂ ಇಲ್ಲ. 

ಪಕ್ಷದಲ್ಲಿ ಯಾರು ಎಷ್ಟೇ ಹಿರಿಯರಾದರೂ ಹೈಕಮಾಂಡ್‌ ನಿರ್ಧಾರಕ್ಕೆ ತಲೆ ಬಾಗಲೇಬೇಕು ಎಂದರು. ಗ್ಯಾರಂಟಿ ಯೋಜನೆ ಖಂಡಿತವಾಗಿಯೂ ಆಗುತ್ತದೆ. ಈ ವಿಚಾರದಲ್ಲಿ ಯಾಕೆ ಇಷ್ಟುಆತುರ? ಗ್ಯಾರಂಟಿ ಕೊಡೋದು ಪಕ್ಷ ಅಲ್ಲ, ಸರ್ಕಾರ. ಗ್ಯಾರಂಟಿ ಯೋಜನೆಗೆ ಒಂದಷ್ಟು ಮಾನದಂಡ ಇರುತ್ತವೆ. ಅವುಗಳನ್ನು ಫಿಕ್ಸ್‌ ಮಾಡಿ ಮಾಡುತ್ತೇವೆ. ರಾಜ್ಯದಲ್ಲಿ ಭರ್ತಿ ಸಚಿವ ಸಂಪುಟ ಇದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಈಗ ಯಾಕೆ ಚರ್ಚೆ? ಸುಭದ್ರ ಸರ್ಕಾರ ಇದೆ, ಉತ್ತಮ ಆಡಳಿತ ಕೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್‌ ರಹಿತ ಪ್ರಯಾಣಿಕರಿಂದ 5.5 ಲಕ್ಷ ದಂಡ ವಸೂಲಿ ಮಾಡಿದ ಕೆಎಸ್‌ಆರ್‌ಟಿಸಿ

ನೂತನ ಸಚಿವರ ಬೆಂಬಲಿಗರಿಂದ ರಾಜ್ಯಾದ್ಯಂತ ಸಂಭ್ರಮಾಚರಣೆ: ಸಿದ್ದು ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಾಗುತ್ತಿದ್ದಂತೆ ಅವರ ಬೆಂಬಲಿಗರು ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ ನಡೆಸಿದ್ದಾರೆ. ಶಿವಾನಂದ ಪಾಟೀಲರು ಸಚಿವರಾದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಮೂಲನಂದೀಶ್ವರ ದೇವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ವಿಶೇಷ ಪೂಜೆ ನೆರವೇರಿಸಿದರು. 

ಅಲ್ಲದೆ, ಪಟಾಕಿ ಸಿಡಿಸಿ, ಸಿಹಿ ಹಂಚಿ, ಸಂಭ್ರಮಾಚರಣೆ ನಡೆಸಿದರು. ಎಚ್‌.​ಕೆ.​ಪಾ​ಟೀಲರು ಸಚಿ​ವ​ರಾಗಿದ್ದಕ್ಕೆ ಗದಗ ಜಿಲ್ಲಾ ಆಟೋ ಚಾಲಕರ, ಮಾಲಿಕರ, ಜೈ ಭೀಮ್‌ ಆಟೋ ಚಾಲಕರ, ಮಾಲಿಕರ ಸಂಘದಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರ​ಮಿ​ಸ​ಲಾ​ಯಿ​ತು. ಕನಕಗಿರಿ ಶಾಸಕ ಶಿವರಾಜ ತಂಗಡಗಿಯವರು ಸಚಿವರಾಗಿದ್ದಕ್ಕೆ ಕೊಪ್ಪಳದ ಅಶೋಕ ವೃತ್ತದಲ್ಲಿ ವಿಜಯೋತ್ಸವ ನಡೆಸಲಾಯಿತು. 

ಇದೇ ವೇಳೆ, ಲಕ್ಷ್ಮೇ ಹೆಬ್ಬಾಳಕರ ಸಚಿವರಾಗಿದ್ದಕ್ಕೆ ಬೆಳಗಾವಿಯಲ್ಲಿ, ಮಧು ಬಂಗಾರಪ್ಪ ಸಚಿವರಾಗಿದ್ದಕ್ಕೆ ಶಿವಮೊಗ್ಗದ ಶಿವಪ್ಪ ನಾಯಕ ಪ್ರತಿಮೆ ಬಳಿ ಹಾಗೂ ಸೊರಬದಲ್ಲಿ, ಸಂತೋಷ ಲಾಡ್‌ ಸಚಿವರಾಗಿದ್ದಕ್ಕೆ ಧಾರವಾಡದ ವಿವೇಕಾನಂದ ಸರ್ಕಲ್‌ನಲ್ಲಿ, ಕೆ.ಎನ್‌.ರಾಜಣ್ಣನವರು ಸಚಿವರಾಗಿದ್ದಕ್ಕೆ ತುಮಕೂರಿನ ಟೌನ್‌ಹಾಲ್‌ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

ಸಂತೋಷ ಲಾಡ್‌ಗೆ ಸಚಿವ ಸ್ಥಾನ: ಕಲಘಟಗಿ- ಅಳ್ನಾವರ ಕ್ಷೇತ್ರದ ಶಾಸಕ ಸಂತೋಷ್‌ ಲಾಡ್‌, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಶನಿವಾರ ಸಚಿವರಾಗಿ ಆಯ್ಕೆಯಾಗುತ್ತಿದ್ದಂತೆ ಹುಬ್ಬಳ್ಳಿ- ಧಾರವಾಡದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಲವೆಡೆ ಸಂಭ್ರಮಾಚರಣೆ ನಡೆಸಿದರು. ಹುಬ್ಬಳ್ಳಿಯ ಸೆಂಟ್ರಲ್‌ ಕ್ಷೇತ್ರದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಹು-ಧಾ ಮಹಾನಗರ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ನೇತೃತ್ವದಲ್ಲಿ ನೂರಾರು ಮಹಿಳೆಯರು, ಯುವಕರು ಸೇರಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ದ್ವೇಷದಿಂದ ಕಾಂಗ್ರೆಸ್‌ ಸರ್ಕಾರದ ಆಡಳಿತ ಆರಂಭ: ವಿಜಯೇಂದ್ರ

ಈ ವೇಳೆ ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟ್ಲಾ ಮಾತನಾಡಿ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಕನಸು ಹೊತ್ತ ಕಾಂಗ್ರೆಸ್‌ ಸರ್ಕಾರವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದು, ಶನಿವಾರ ನಡೆದ ಸಚಿವ ಸಂಪುಟ ಖಾತೆ ಹಂಚಿಕೆ ಮಾಡಲಾಗಿದೆ. ಸಂತೋಷ ಲಾಡ್‌ ಹಾಗೂ ಲಕ್ಷ್ಮೇ ಹೆಬ್ಬಾಳ್ಕರ್‌ ಸಚಿವರನ್ನಾಗಿ ನೇಮಕ ಮಾಡಿರುವುದು ಈ ಭಾಗದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸಂತಸವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕರ್ತರು ಸೇರಿ ಸಂಭ್ರಮಾಚರಣೆ ನಡೆಸುತ್ತಿರುವುದಾಗಿ ತಿಳಿಸಿದರು.