Asianet Suvarna News Asianet Suvarna News

ಹೆಸರಲ್ಲಿ ರಾಮ, ಉಂಡ ಮನೆಗೆ ನಾಮ; ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಶ್ರೀರಾಮುಲು

ಹೆಸರಿನಲ್ಲಿ ರಾಮ. ಉಂಡ ಮನೆಗೆ ಪಂಗನಾಮ. ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುವ ಊಸರವಳ್ಳಿ ದುಸ್ಥಿತಿ ನಿಮ್ಮದು. ಅಧಿಕಾರ ಕೊಟ್ಟಪಕ್ಷಕ್ಕೆ ಬ್ಲ್ಯಾಕ್‌ಮೇಲ್‌ ಮಾಡುವ ಸ್ವಯಂ ಘೋಷಿತ ಮಹಾನಾಯಕರು ನೀವಲ್ಲವೇ?’ ಎಂದು ಪರಿಶಿಷ್ಟಪಂಗಡಗಳ ಸಚಿವ ಬಿ.ಶ್ರೀರಾಮುಲು ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

Rama in name only but Siddaramaiah  Like a chameleon say sriramulu
Author
First Published Aug 31, 2022, 4:00 AM IST

ಬೆಂಗಳೂರು (ಆ.31) :‘ಹೆಸರಿನಲ್ಲಿ ರಾಮ. ಉಂಡ ಮನೆಗೆ ಪಂಗನಾಮ. ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುವ ಊಸರವಳ್ಳಿ ದುಸ್ಥಿತಿ ನಿಮ್ಮದು. ಅಧಿಕಾರ ಕೊಟ್ಟಪಕ್ಷಕ್ಕೆ ಬ್ಲ್ಯಾಕ್‌ಮೇಲ್‌ ಮಾಡುವ ಸ್ವಯಂ ಘೋಷಿತ ಮಹಾನಾಯಕರು ನೀವಲ್ಲವೇ?’ ಎಂದು ಪರಿಶಿಷ್ಟಪಂಗಡಗಳ ಸಚಿವ ಬಿ.ಶ್ರೀರಾಮುಲು ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಗಣೇಶ ಹಬ್ಬ: ಪ್ರಯಾಣಿಕರ ಸುಲಿಗೆಗಿಳಿದ ಖಾಸಗಿ ಬಸ್ ಮಾಲೀಕರಿಗೆ ಶ್ರೀರಾಮುಲು ವಾರ್ನಿಂಗ್

‘ಸ್ವಯಂಘೋಷಿತ ಸತ್ಯ ಹರಿಶ್ಚಂದ್ರ. ಎಷ್ಟೇ ಆದರೂ, ಸತ್ಯ ನಿಮಗೆ ಅಪಥ್ಯ ಅಲ್ಲವೇ? ಸುಳ್ಳೇ ನಿಮ್ಮ ರಾಜಕೀಯ ಅಸ್ತಿತ್ವದ ಪ್ರತೀಕ. ಸುಳ್ಳು ಸುಳ್ಳೇ ನಿಮ್ಮ ನರಿಬುದ್ಧಿ. ಅವಕಾಶವಾದಿ ರಾಜಕಾರಣದ ನಿಜಸ್ವರೂಪ’ ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗಷ್ಟೇ ಬಳ್ಳಾರಿಯಲ್ಲಿ ನಡೆದ ಕುರುಬರ ಸಂಘದ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದ ಶ್ರೀರಾಮುಲು ಅವರು ಮಂಗಳವಾರ ಸರಣಿ ಟ್ವೀಟ್‌ ಮೂಲಕ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ನನ್ನ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7.5ಕ್ಕೆ ಹೆಚ್ಚಿಸಲು ಸರ್ಕಾರದ ಮೇಲೆ ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದೇನೆ. ಅಧಿಕಾರಕ್ಕಿಂತ ಸಮುದಾಯದ ಹಿತ ಮುಖ್ಯ ಎಂಬುದು ನನಗೂ ಗೊತ್ತಿದೆ. ನಿಮ್ಮನ್ನು ನೀವು ಮಹಾನ್‌ ಹರಿಶ್ಚಂದ್ರ ಅಂದುಕೊಂಡಿದ್ದೀರಾ? ಬೆಂಗಳೂರು ನಗರದಲ್ಲಿ 400 ಎಕರೆ ರೀಡೂ ಮಾಡಿದ್ದನ್ನು ಮುಚ್ಚಿ ಹಾಕಲು ಕೆಂಪಣ್ಣ ಆಯೋಗ ಮಾಡಿದ್ದೆಲ್ಲ ಏನಾಯಿತು? 400-500 ಕೋಟಿ ರು. ಲೂಟಿ ಹೊಡೆದ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಭೂತದ ಬಾಯಲ್ಲಿ ಭಗವದ್ಗೀತೆ ಎಂದರೆ ಇದೇನಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮಾತೆತ್ತಿದರೆ ಅಹಿಂದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತೀರಿ. ವಿಧಾನಸಭೆ ಚುನಾವಣೆ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್‌ ಅವರಿಗೆ ಕೊರಟಗೆರೆಯಲ್ಲಿ ಬೆನ್ನಿಗೆ ಚೂರಿ ಹಾಕಿದ್ದು ಯಾರು? ಯಾವ ಯಾವ ಸಂದರ್ಭದಲ್ಲಿ ಯಾರ ಕುತ್ತಿಗೆ ಕೊಯ್ದಿರಿ ಎಂಬುದನ್ನು ಬಹಿರಂಗ ಪಡಿಸಲೇ ಚೂರಿರಾಮಯ್ಯನವರೇ? ಯಾರೋ ಕಟ್ಟಿದ ಹುತ್ತಕ್ಕೆ ಕರಿ ನಾಗನಂತೆ ಸೇರಿಕೊಂಡ ನೀವು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ, ಅಲ್ಪಸಂಖ್ಯಾತ ಸಮುದಾಯದ ಜಾಫರ್‌ ಷರೀಫ್‌ ಸೇರಿದಂತೆ ಹಲವರನ್ನು ಮುಗಿಸಿಯೇ ಮೇಲಕ್ಕೆ ಬಂದವರು. ನಿಮ್ಮದು ಯಾವ ಸೀಮೆಯ ಅಹಿಂದ? ಬಿಡಿಸಿ ಹೇಳುತ್ತೀರಾ? ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಇರುವ ಪಕ್ಷದ ಮೇಲೆ ವಿಶ್ವಾಸ ಇಲ್ಲ. ಬ್ರೂಟಸ್‌ ಮನಃಸ್ಥಿತಿ, ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುವ ಊಸರವಳ್ಳಿ ದುಸ್ಥಿತಿ. ಅಧಿಕಾರ ಕೊಟ್ಟಪಕ್ಷಕ್ಕೆ ಬ್ಲ್ಯಾಕ್‌ಮೇಲ್‌ ಮಾಡುವ ಸ್ವಯಂ ಘೋಷಿತ ಮಹಾನಾಯಕರು ನೀವಲ್ಲವೇ ಎಂದು ಕಿಡಿಕಾರಿದ್ದಾರೆ.

ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನಾಯಕರು ಶೂರರು; CM ಬದಲಾವಣೆಗೆ ಶ್ರೀರಾಮುಲು ಪ್ರತಿಕ್ರಿಯೆ

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ನಂತರ ನಾನೇ ಅತ್ಯಂತ ಯಶಸ್ವಿ ಮುಖ್ಯಮಂತ್ರಿ ಎಂದು ಹಿಂಬಾಲಕರಿಂದ ಜೈಕಾರ ಹಾಕಿಸಿಕೊಳ್ಳುವ ಬುರುಡೆರಾಮಯ್ಯನವರೇ, ಐದು ವರ್ಷದ ಅವಧಿಯಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯಕ್ಕೆ ನಿಮ್ಮಷ್ಟುಚೂರಿ ಹಾಕಿದ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ ಎಂಬುದನ್ನು ಬಿಡಿಸಿ ಹೇಳಬೇಕೇ? ನೀವು ಆಡಳಿತದಲ್ಲಿ ಇದ್ದಾಗ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಇಂದು ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಜನರ ಕಣ್ಣಿಗೆ ಮಂಕುಬೂದಿ ಎರಚುವ ಕಲೆ ನಿಮಗಲ್ಲದೇ ಬೇರೆಯವರಿಗೆ ಹೇಗೆ ಬರಲು ಸಾಧ್ಯ ಎಂದು ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios