ರೈತರ ಸ್ವಾವಲಂಬನೆಗೆ ಬಿಜೆಪಿ ಸರ್ಕಾರ ಬದ್ಧ: ಈರಣ್ಣ ಕಡಾಡಿ
ಕಾಂಗ್ರೆಸ್ ಆಡಳಿತದಲ್ಲಿ ಶೇ.11ರಷ್ಟಿದ್ದ ಜಿಡಿಪಿ ಮೋದಿ ಸರ್ಕಾರದ ಅವಧಿಯಲ್ಲಿ ಶೇ.20ಕ್ಕೆ ಏರಿಕೆಯಾಗಿದೆ. ರೈತರು ಆರ್ಥಿಕವಾಗಿ ಚೇತರಿಕೆ ಕಾಣಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಆದಾಯ ಹೆಚ್ಚಾಗಿದೆ ಎಂದ ಈರಣ್ಣ ಕಡಾಡಿ
ನಿಡಗುಂದಿ(ಮಾ.07): ದೇಶದ ರೈತರು ಕೂಡ ಆತ್ಮನಿರ್ಭರರಾಗಬೇಕು, ಸ್ವಾವಲಂಬಿಗಳಾಗಿ, ಸ್ವಾಭಿಮಾನದ ಬದುಕು ಸಾಗಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಭಾನುವಾರ ತಾಲೂಕಿನ ಗೊಳಸಂಗಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ರೈತ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಶೇ.11ರಷ್ಟಿದ್ದ ಜಿಡಿಪಿ ಮೋದಿ ಸರ್ಕಾರದ ಅವಧಿಯಲ್ಲಿ ಶೇ.20ಕ್ಕೆ ಏರಿಕೆಯಾಗಿದೆ. ರೈತರು ಆರ್ಥಿಕವಾಗಿ ಚೇತರಿಕೆ ಕಾಣಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಆದಾಯ ಹೆಚ್ಚಾಗಿದೆ ಎಂದರು.
ವಿಜಯಪುರದ ಅತಿರಥರ ಅಖಾಡ: ಹೈವೋಲ್ಟೇಜ್ ಕ್ಷೇತ್ರದಲ್ಲಿ ಪ್ರಬಲರು ಯಾರು..?
2014ರಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರ ಬಜೆಟ್‌ನಲ್ಲಿ ಕೃಷಿಗೆ ಕೇವಲ .21,933 ಕೋಟಿ ಮಾತ್ರ ಮೀಸಲಿಟ್ಟಿತ್ತು. ಆದರೆ, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪ್ರತಿವರ್ಷ ಕೃಷಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಇತ್ತೀಚೆಗೆ ಮಂಡನೆಯಾದ ಬಜೆಟ್‌ನಲ್ಲಿ .1.25 ಲಕ್ಷ ಸಾವಿರ ಕೋಟಿಯನ್ನು ಕೃಷಿಗೆ ನೀಡಿದ್ದಾರೆ. ಈ ಮೊದಲು ದೇಶದಲ್ಲಿ ಆಹಾರದ ಕೊರತೆ ಇತ್ತು. ಸದ್ಯ ಅಕ್ಕಿ, ಸಕ್ಕರೆ, ಗೋದಿ ಸೇರಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಉತ್ಪಾದಿಸಿ, ವಿದೇಶಕ್ಕೆ ರಫ್ತು ಮಾಡಲು ನಾವು ಸಮರ್ಥರಾಗಿದ್ದೇವೆ ಎಂದರು.
ಆಹಾರ ಉತ್ಪಾದನೆಯಲ್ಲಿ ರಾಸಾಯನಿಕಗಳ ಬಳಕೆಯನ್ನು ತಡೆಗಟ್ಟಲು ಶ್ರೀಅನ್ನ ಯೋಜನೆ ಜಾರಿಗೆ ತರಲಾಗಿದೆ. ಸಿರಿಧಾನ್ಯಗಳ ಉತ್ಪಾದನೆ ಹಾಗೂ ಸಾವಯವ ಕೃಷಿಗೆ ಸಬ್ಸಿಡಿ ನೀಡುವ ಮೂಲಕ ವಿಶೇಷ ಆದ್ಯತೆ ನೀಡಲಾಗಿದೆ. ರೈತರ ಗೊಂದಲ ನಿವಾರಣೆಗೆ ಒಂದು ದೇಶ ಒಂದು ಗೊಬ್ಬರವನ್ನು ಜಾರಿಗೆ ತರಲು ಮುಂದಾಗಿದ್ದೇವೆ. ಗೋವರ್ಧನ ಯೋಜನೆ, ರೈತರ ಗೋದಾಮು ನಿರ್ಮಾಣಕ್ಕೆ ಹಣ ನೀಡಲಾಗುತ್ತಿದೆ. ಕೃಷಿ ಜತೆಗೆ ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆಗೆ ಸಬ್ಸಿಡಿ ನೀಡುವ ಯೋಜನೆಯೂ ಇದೆ. ಮುಂಬರುವ ದಿನದಲ್ಲಿ ರೈತರು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲಿದ್ದಾರೆ. ರೈತರ ಆದಾಯಮಟ್ಟದ್ವಿ ಗುಣವಾಗುವ ಬೀಜಗಳನ್ನು ಬಿತ್ತಲಾಗಿದ್ದು, ಅದರ ಲಾಭ ಪಡೆಯಲು ಮತ್ತೆ ಬಿಜೆಪಿಯನ್ನು ಬೆಂಬಲಿಸಿ, ಬಿಜೆಪಿ ಶಾಸಕರನ್ನು ಮರು ಆಯ್ಕೆಗೊಳಿಸಿ ಮೋದಿಯವರ ಕೈ ಬಲಪಡಿಸಬೇಕು ಎಂದರು.
ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ ಮಾತನಾಡಿ, ಬಿಜೆಪಿ ಸರ್ಕಾರ ರೈತರ ಸಬಲೀಕರಣಕ್ಕೆ ಹಲವಾರು ಯೋಜನೆ ಜಾರಿಗೊಳಿಸಿದ್ದು, ದೇಶದ ಕೋಟ್ಯಂತರ ರೈತರು ಈ ಯೋಜನೆ ಲಾಭ ಪಡೆಯುತ್ತಿದ್ದಾರೆ. ಬಿಜೆಪಿ ರೈತ ಪರವಾಗಿದೆ ಎಂದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಎನ್‌ಟಿಪಿಸಿ, ಮುಳವಾಡ ಏತ ನೀರಾವರಿ ಮೂಲಕ ಜಿಲ್ಲೆ, ರಾಜ್ಯಕ್ಕೆ ಬಸವನಬಾಗೇವಾಡಿ ಕ್ಷೇತ್ರ ವಿಶೇಷ ಕೊಡುಗೆ ನೀಡಿದೆ. ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿದ್ದು ಬಿಜೆಪಿ ಸರ್ಕಾರದ ಕೊಡುಗೆ. ಎನ್‌ಟಿಪಿಸಿಯನ್ನು ತರಲು ಶ್ರಮಿಸಿದವರು ನಾವು. ಅದರ ಉದ್ಘಾಟನೆಯನ್ನು ನಾವೇ ಮಾಡುತ್ತೇವೆ. ಆಲಮಟ್ಟಿಜಲಾಶಯದಲ್ಲಿ ಸಂಪುರ್ಣ ಸಾಮರ್ಥ್ಯದ ನೀರು ನಿಲ್ಲಿಸಿದರೆ ಜಿಲ್ಲೆ ಸಂಪೂರ್ಣ ನೀರಾವರಿಗೆ ಒಳಪಟ್ಟು ಬರಮುಕ್ತ ಜಿಲ್ಲೆಯಾಗಲಿದೆ ಎಂದರು.
ರೈತಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಅಮೃತ ಯಾದವ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ, ಎಂ.ಆರ್.ಹೆಬ್ಬಾಳ, ಡಾ.ಎಂ.ಡಿ.ಮೇತ್ರಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಶಿವಾನಂದ ಅವಟಿ, ಸಂಗನಗೌಡ ಚಿಕ್ಕೊಂಡ, ಸುಭಾಸಗೌಡ ಪಾಟೀಲ, ಸಂಜಯ ಪಾಟೀಲ, ಚಿದಾನಂದ ಚಲವಾದಿ, ಗುರಲಿಂಗಪ್ಪ ಅಂಗಡಿ, ರಾಮು ಜಾಧವ, ಸಾಬು ಮಾಶಾಳ, ಆನಂದ ಬಿಷ್ಟಗೊಂಡ, ಮಲ್ಲಿಕಾರ್ಜುನ ಜೋಗೂರ ಇದ್ದರು.
ಅಭಿವೃದ್ಧಿ ವಿರೋಧಿ ಸಿದ್ದರಾಮಯ್ಯ: ಸಂಸದ ಪ್ರತಾಪ್ ಸಿಂಹ ಕಿಡಿ
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಬನಶಂಕರಿ ದೇವಸ್ಥಾನದಿಂದ ಸಮಾವೇಶದ ಸ್ಥಳದವರೆಗೆ ವಿಜೃಂಭನೆಯಿಂದ ಗಣ್ಯರ ಮೆರವಣಿಗೆ ನಡೆಸಲಾಯಿತು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ:
ಸಮಾವೇಶದಲ್ಲಿ ಬಸವನ ಬಾಗೇವಾಡಿ ಕ್ಷೇತ್ರದ ಅನೇಕ ಯುವಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ರೈತ ಉತ್ಪಾದಕ ಸಂಸ್ಥೆಯ ಪ್ರಮುಖರು, ಕೃಷಿಯಲ್ಲಿ ಸಾಧನೆ ಗೈದ ರೈತರೂ ಸೇರಿದಂತೆ 34 ಜನರನ್ನು ಸನ್ಮಾನಿಸಲಾಯಿತು.