ರಾಜ್ಯಸಭೆಯ 56 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವವರ ಪೈಕಿ ಶೇ.36ರಷ್ಟು ಜನರು ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ. ಇವರ ಸರಾಸರಿ ಆಸ್ತಿ 127 ಕೋಟಿ ರು.ನಷ್ಟಿದೆ

ನವದೆಹಲಿ (ಫೆ.25): ರಾಜ್ಯಸಭೆಯ 56 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವವರ ಪೈಕಿ ಶೇ.36ರಷ್ಟು ಜನರು ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ. ಇವರ ಸರಾಸರಿ ಆಸ್ತಿ 127 ಕೋಟಿ ರು.ನಷ್ಟಿದೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಘ (ಎಡಿಆರ್‌) ವರದಿ ಹೇಳಿದೆ.

ಕರ್ನಾಟಕ ಸೇರಿ 15 ರಾಜ್ಯಗಳ 56 ಸ್ಥಾನಗಳಿಗೆ 59 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಈ ಪೈಕಿ ಕರ್ನಾಟಕದ ಜಿ.ಸಿ.ಚಂದ್ರಶೇಖರ್‌ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ ಆಧರಿಸಿ ಈ ವರದಿ ತಯಾರಿಸಲಾಗಿದೆ. ಇದರನ್ವಯ ಶೇ.36ರಷ್ಟು ಅಭ್ಯರ್ಥಿಗಳು ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ. ಈ ಪೈಕಿ ಶೆ.17ರಷ್ಟು ಜನರು ಗಂಭೀರ ಪ್ರಕರಣ ಎದುರಿಸುತ್ತಿದ್ದಾರೆ. ಒಬ್ಬರ ವಿರುದ್ಧ ಕೊಲೆ ಯತ್ನದ ಆರೋಪವಿದೆ.

ಮಂಡ್ಯ ಹಾಸನ ಕೋಲಾರ ಜೆಡಿಎಸ್‌ಗೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್‌ ಗ್ರೀನ್‌ಸಿಗ್ನಲ್, ಸುಮಲತಾ ನಡೆಯೇನು?

8 ಮಂದಿ ಬಿಜೆಪಿ, 6 ಕಾಂಗ್ರೆಸ್‌, ಒಂದು ಟಿಎಂಸಿ, ಎರಡು ಎಸ್‌ಪಿ, ಒಂದು ವೈಎಸ್‌ಆರ್‌ಸಿಪಿ, ಒಂದು ಆರ್‌ಜೆಡಿ, ಒಂದು ಬಿಜೆಡಿ ಮತ್ತು ಒಂದು ಬಿಆರ್‌ಎಸ್‌ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ. ಶೇ.21 ರಷ್ಟು ಅಭ್ಯರ್ಥಿಗಳು ಶತಕೋಟಿ ಒಡೆಯರು. ಇವರ ಆಸ್ತಿ ಮೌಲ್ಯ 100 ಕೋಟಿ ರು. ದಾಟಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಅಭಿಷೇಕ್‌ ಮನು ಸಿಂಘ್ವಿ 1,872 ಕೋಟಿ ರು., ಸಮಾಜವಾದಿ ಪಕ್ಷದ ಜಯಾ ಅಮಿತಾಭ್‌ ಬಚ್ಚನ್‌ 1,578 ಕೋಟಿ ರು., ಕರ್ನಾಟಕದಿಂದ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಸುಮಾರು 871 ಕೋಟಿ ರು. ಹೊಂದಿದ್ದಾರೆ. ಇವರು ಸ್ಪರ್ಧಿಸಿರುವವರ ಪೈಕಿ ಮೂವರು ಸಿರಿವಂತ ಅಭ್ಯರ್ಥಿಗಳು ಎಂದು ವರದಿ ತಿಳಿಸಿದೆ.

ಮೂವರು ಕನ್ನಡಿಗರು ಸೇರಿ 60 ಭಾರತೀಯರಿಗೆ ರಷ್ಯಾ ಸೇನೆ ವಂಚನೆ, ಶೀಘ್ರ ಬಿಡುಗಡೆಗೆ ಭಾರತ ಮನವಿ

ಅಭ್ಯರ್ಥಿಗಳಲ್ಲಿ ಶೇ.17ರಷ್ಟು ಮಂದಿ 5ನೇ ತರಗತಿಯಿಂದ 12ನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದಾರೆ. ಶೇ.79 ರಷ್ಟು ಮಂದಿ ಪದವಿ ಮತ್ತು ಉನ್ನತ ಪದವಿ ಪಡೆದಿದ್ದಾರೆ ಎಂದು ವರದಿ ಹೇಳಿದೆ. 56 ಸ್ಥಾನಗಳ ಪೈಕಿ 41 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 15 ಸ್ಥಾನಗಳಿಗೆ ಫೆ.27ರಂದು ಚುನಾವಣೆ ನಡೆಯಲಿದೆ.