ನವದೆಹಲಿ[ನ.22]: ಸಕ್ರಿಯ ರಾಜಕಾರಣಕ್ಕೆ ಧುಮಕಲು ತುದಿಗಾಲಿನಲ್ಲಿ ನಿಂತಿರುವ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರು, 2021ರ ವಿಧಾನಸಭೆ ಚುನಾವಣೆಯಲ್ಲಿ ತಮಿಳುನಾಡು ಜನ ಪವಾಡ ಸೃಷ್ಟಿಸಲಿದ್ದಾರೆ ಎಂದು ಹೇಳಿದ್ದಾರೆ. ತನ್ಮೂಲಕ ಅಣ್ಣಾಡಿಎಂಕೆ ಹಾಗೂ ಡಿಎಂಕೆ ಬದಲು ಮತ್ತೊಂದು ಶಕ್ತಿಯನ್ನು ರಾಜ್ಯದ ಜನ ಆಯ್ಕೆ ಮಾಡುತ್ತಾರೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿರುವ ರಜನೀಕಾಂತ್‌ ಮುಖ್ಯಮಂತ್ರಿ ಸ್ಥಾನದ ಕುರಿತೂ ಪ್ರತಿಕ್ರಿಯೆ ನೀಡಿದ್ದಾರೆ. ಮಕ್ಕಳ್‌ ನೀಧಿ ಮಯ್ಯಂ ಪಕ್ಷದ ನಾಯಕರೂ ಆಗಿರುವ ಚಿತ್ರನಟ ಕಮಲ್‌ ಹಾಸನ್‌ ಜತೆ ತಮಿಳುನಾಡು ರಾಜಕಾರಣದಲ್ಲಿ ಕೈಜೋಡಿಸುವ ಇಂಗಿತ ವ್ಯಕ್ತಪಡಿಸಿದ್ದೀರಿ. ನಿಮ್ಮಿಬ್ಬರಲ್ಲಿ ಮುಖ್ಯಮಂತ್ರಿ ಯಾರಾಗುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ರಜನಿ, ಚುನಾವಣೆ ಹತ್ತಿರ ಬಂದಾಗ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಇದನ್ನು ನಿರ್ಧಾರ ಮಾಡಬೇಕಾಗುತ್ತದೆ. ನಾನು ಪಕ್ಷ ಸ್ಥಾಪಿಸಿದ ಬಳಿಕ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಇದರ ಬಗ್ಗೆ ತೀರ್ಮಾನಿಸಲಾಗುತ್ತದೆ. ಸದ್ಯಕ್ಕೆ ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ರಜನಿ- ಕಮಲ್ ಮೈತ್ರಿ?

ತಮಿಳುನಾಡಿನ ಒಳಿತಿಗಾಗಿ ರಜನೀಕಾಂತ್‌ ಹಾಗೂ ನಾನು ಒಗ್ಗೂಡಬೇಕಾಗಿ ಬಂದರೆ, ಅದನ್ನು ಮಾಡುತ್ತೇವೆ ಎಂದು ಕಮಲ್‌ ಹಾಸನ್‌ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಕೈಜೋಡಿಸಲು ತಾವೂ ಸಿದ್ಧ ಎಂದು ಅದೇ ಕಾರ್ಯಕ್ರಮದಲ್ಲಿ ರಜನಿ ಪ್ರಕಟಿಸಿದ್ದರು.

ಬೆಕ್ಕು, ಇಲಿ ಒಟ್ಟಿಗೆ ಇದ್ದಂತೆ- ಅಣ್ಣಾಡಿಎಂಕೆ:

ತಮಿಳುನಾಡು ವಿಧಾನಸಭೆ ಚುನಾವಣೆಗೆ ರಜನೀಕಾಂತ್‌ ಹಾಗೂ ಕಮಲ್‌ ಹಾಸನ್‌ ಅವರು ಮೈತ್ರಿ ಮಾಡಿಕೊಳ್ಳುವ ವರದಿಗಳ ಬಗ್ಗೆ ಆಡಳಿತಾರೂಢ ಅಣ್ಣಾಡಿಎಂಕೆ ವ್ಯಂಗ್ಯವಾಡಿದೆ. ಇಬ್ಬರೂ ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ್ದಾರೆ. ರಜನೀಕಾಂತ್‌ ಅವರು ಆಧ್ಯಾತ್ಮದ ರಾಜಕಾರಣವನ್ನು ಮುನ್ನಡೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ. ಕಮಲ್‌ ಹಾಸನ್‌ ಅವರು ಎಡಪಂಥೀಯ ವಿಚಾರಧಾರೆಗಳತ್ತ ಸೆಳೆತ ಹೊಂದಿದ್ದಾರೆ. ಅವರ ಮೈತ್ರಿ ಬೆಕ್ಕು ಹಾಗೂ ಇಲಿ ಒಟ್ಟಿಗೆ ಇದ್ದಂತೆ ಆಗುತ್ತದೆ ಎಂದು ಪಕ್ಷದ ಮುಖವಾಣಿ ‘ನಾಮಧು ಅಮ್ಮಾ’ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಲಾಗಿದೆ.