Asianet Suvarna News Asianet Suvarna News

ರಾಹುಲ್ ಅನರ್ಹತೆ ಭಾರತದ ಅಂತರಿಕ ವಿಚಾರ: ಅಮೆರಿಕಾಗೆ ಸಚಿವ ಅನುರಾಗ್ ತಿರುಗೇಟು

ದೇಶದಲ್ಲಿ ರಾಹುಲ್ ವಿರುದ್ಧ ದಾಖಲಾದ ಮೊಕದ್ದಮೆ ಹಾಗೂ ಕಾನೂನು ಸಮರದ ಬಗ್ಗೆ ವಾಷಿಂಗ್ಟನ್‌ ಗಮನಿಸುತ್ತಿದೆ ಎಂದು ಅಮೆರಿಕಾದ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ.

Rahuls disqualification is Indias internal issue Minister Anurag Thakur responds US officials statement akb
Author
First Published Mar 29, 2023, 10:48 AM IST

ನವದೆಹಲಿ:  ದೇಶದಲ್ಲಿ ರಾಹುಲ್ ವಿರುದ್ಧ ದಾಖಲಾದ ಮೊಕದ್ದಮೆ ಹಾಗೂ ಕಾನೂನು ಸಮರದ ಬಗ್ಗೆ ವಾಷಿಂಗ್ಟನ್‌ ಗಮನಿಸುತ್ತಿದೆ ಎಂದು ಅಮೆರಿಕಾದ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ಲೋಕಸಭೆಯಿಂದ ಕಾಂಗ್ರೆಸ್ ನಾಯಕನ ಅನರ್ಹತೆ ವಿಷಯವೂ  ಭಾರತದ ಆಂತರಿಕ ವಿಚಾರ ಎಂದು  ಹೇಳಿದ್ದಾರೆ. 

'ಟೈಮ್ಸ್ ನೆಟ್‌ವರ್ಕ್ ಇಂಡಿಯಾ ಡಿಜಿಟಲ್ ಫೆಸ್ಟ್' ನಲ್ಲಿ ಭಾಗವಹಿಸಿದ ವೇಳೆ ಮಾತನಾಡಿದ ಸಚಿವ ಠಾಕೂರ್ ಅವರು, ಅಮೆರಿಕಾದ ಅಧಿಕಾರಿಯ ಒಂದು ಸಾಮಾನ್ಯ ಹೇಳಿಕೆ ತಮ್ಮ ಗಮನಕ್ಕೆ ಬಂದಿರುವುದಾಗಿ ಹೇಳಿದ್ದಾರೆ.  ಇದು ನಮ್ಮ ಆಂತರಿಕ ವಿಚಾರ. ಯಾರೂ ಸುಪ್ರೀಂಕೋರ್ಟ್‌ಗಿಂತ ಮೇಲಲ್ಲ. ನಮ್ಮಲ್ಲಿ ನ್ಯಾಯಾಂಗ ಮತ್ತು ಸಾಂವಿಧಾನಿಕ ಸಂಸ್ಥೆಗಳಿವೆ. ಅವರು (ಅಮೆರಿಕಾ) ಸಾರ್ವಜನಿಕ ಹೇಳಿಕೆಯನ್ನು ನೀಡಿದ್ದಾರೆ ಎಂದು ಠಾಕೂರ್ ಅವರು ಹೇಳಿದರು.

ಮೋದಿ ಎಂಬ ಸರ್‌ನೇಮ್‌ ಅಥವಾ ಜಾತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಾರಣಕ್ಕೆ 52 ವರ್ಷದ ರಾಹುಲ್ ಗಾಂಧಿ ಅವರ ವಿರುದ್ಧ ಗುಜರಾತ್‌ನ (Gujarat) ಸೂರತ್‌ (Surat) ನ್ಯಾಯಾಲಯದಲ್ಲಿ 2019ರಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಾರ್ಚ್‌ 23 ರಂದು ತೀರ್ಪು ನೀಡಿದ ನ್ಯಾಯಾಲಯ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾಗಿ ಒಂದು ದಿನದ ನಂತರ ಲೋಕಸಭೆಯಿಂದಲೂ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು. ರಾಜ್ಯದ ಕೋಲಾರದಲ್ಲಿ ಭಾಷಣ ಮಾಡುವ ವೇಳೆ ರಾಹುಲ್ ಗಾಂಧಿ (Rahul Gandhi) ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಳ್ಳರೆಲ್ಲರೂ ಏಕೆ ಮೋದಿ ಸರ್‌ನೇಮ್ ಅನ್ನು ಹೊಂದಿದ್ದಾರೆ ಎಂದು ರಾಹುಲ್ ಪ್ರಶ್ನಿಸಿದ್ದರು.  ಈ ಮಾತೇ ಈಗ ರಾಹುಲ್ ಅವರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.

ರಾಹುಲ್‌ ಗಾಂಧಿ ಅನರ್ಹ, 'ಕಾನೂನಿಗೆ ಗೌರವಿಸೋದು ಪ್ರಜಾಪ್ರಭುತ್ವದ ಅಗತ್ಯ' ಎಂದ ಅಮೆರಿಕ!

ಈ ಕುರಿತಾಗಿ ಗುಜರಾತ್‌ ಶಾಸಕ ಪೂರ್ಣೇಶ್‌ ಮೋದಿ ಸೂರತ್‌ ಕೋರ್ಟ್‌ನಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಕುರಿತಾಗಿ ತೀರ್ಪು ನೀಡಿದ ಕೋರ್ಟ್‌ ರಾಹುಲ್‌ ಗಾಂಧಿ ದೋಷಿ ಎಂದು ಹೇಳಿದ್ದಲ್ಲದೆ ಅವರಿಗೆ 2 ವರ್ಷ ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸಿತ್ತು.  ಇನ್ನು 11951ರ ಜನಪ್ರತಿನಿಧಿಗಳ ಕಾಯ್ದೆ ಅನ್ವಯ ಯಾವುದೇ ಜನಪ್ರತಿನಿಧಿಗೆ ಕ್ರಿಮಿನಲ್‌ ಪ್ರಕರಣದಲ್ಲಿ 2 ಹಾಗೂ ಅದಕ್ಕಿಂತ ಹೆಚ್ಚಿನ ವರ್ಷದ ಶಿಕ್ಷೆಯಾದಲ್ಲಿ ಅವರ ಸದಸ್ಯ ಸ್ಥಾನವನ್ನು ಅನರ್ಹ ಮಾಡಲಾಗುತ್ತದೆ. ಅದರಂತೆ ವಯನಾಡ್‌ ಕ್ಷೇತ್ರದ ಸಂಸದರಾಗಿದ್ದ ರಾಹುಲ್‌ ಗಾಂಧಿಯನ್ನು ಶುಕ್ರವಾರ ಲೋಕಸಭೆ ಕಾರ್ಯಾಲಯ ಅನರ್ಹ ಮಾಡಿತ್ತು. ಭಾರತದೊಂದಿಗಿನ ನಮ್ಮ ವ್ಯವಹಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಳಗೊಂಡಂತೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನಮ್ಮ ಹಂಚಿಕೆಯ ಬದ್ಧತೆಯ ಮೇಲೆ ಅಮೆರಿಕ ಭಾರತ ಸರ್ಕಾರದೊಂದಿಗೆ ತೊಡಗಿಸಿಕೊಂಡಿದೆ" ಎಂದು ಅವರು ಹೇಳಿದರು.

ಕಾನೂನು ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು (judicial independence) ಗೌರವಿಸುವುದು ಯಾವುದೇ ಪ್ರಜಾಪ್ರಭುತ್ವದ ಮೂಲ ತತ್ವವಾಗಿದೆ. ನಾವು ಭಾರತೀಯ ನ್ಯಾಯಾಲಯಗಳಲ್ಲಿ ರಾಹುಲ್ ಗಾಂಧಿಯವರ ಪ್ರಕರಣವನ್ನು ವೀಕ್ಷಿಸುತ್ತಿದ್ದೇವೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ (democratic value) ನಮ್ಮ ಬದ್ಧತೆಯ ಬಗ್ಗೆ ನಾವು ಭಾರತ ಸರ್ಕಾರದೊಂದಿಗೆ ಸಮನ್ವಯದಲ್ಲಿದ್ದೇವೆ ಎಂದು ಅಮೆರಿಕಾದ ಉಪ ವಕ್ತಾರ ವೇದಾಂತ್ ಪಟೇಲ್ (Vedant Patel) ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ರಾಹುಲ್‌ ಗಾಂಧಿ ಆಯ್ತು, ಮೋದಿ ಫೋಟೋ ಹರಿದಿದ್ದ ಕಾಂಗ್ರೆಸ್‌ ಶಾಸಕನಿಗೆ ಕೋರ್ಟ್‌ ಶಿಕ್ಷೆ!

ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ನಿವಾಸ ತೆರವುಗೊಳಿಸುವಂತೆ ರಾಹುಲ್‌ಗೆ ನೋಟೀಸ್ ನೀಡಲಾಗಿತ್ತು.  ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ತಮಗೆ ನೀಡಿರುವ ನೋಟಿಸ್‌ ಅನ್ನು ಏ.22ರೊಳಗೆ ಪಾಲಿಸುವುದಾಗಿಸರ್ಕಾರಕ್ಕೆ ಭರವಸೆ ನೀಡಿದ್ದಾರೆ.  ಈ ಕುರಿತು ಲೋಕಸಭೆಯ ಕಾರ್ಯದರ್ಶಿಗೆ ಪತ್ರ ಬರೆದಿರುವ ರಾಹುಲ್‌ ಗಾಂಧಿ ‘2023 ಮಾ.27ರ ನಿಮ್ಮ ಪತ್ರಕ್ಕೆ ಧನ್ಯವಾದಗಳು, 12-ತುಘಲಕ್‌ ರಸ್ತೆಯಲ್ಲಿ ನನಗೆ ನೀಡಲಾದ ಮನೆಯನ್ನು ರದ್ದುಪಡಿಸಿರುವ ವಿಷಯ ಕುರಿತಂತೆ ‘ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾದ ಜನಪ್ರತಿನಿಧಿಯಾಗಿ, ಈ ಮನೆಯಲ್ಲಿ ನಾನು 19 ವರ್ಷಗಳ ಸುಂದರ ನೆನಪುಗಳನ್ನು ಹೊಂದಿದ್ದೇನೆ. ನನ್ನ ಹಕ್ಕುಗಳ ಕುರಿತು ಯಾವುದೇ ಪೂರ್ವಾಗ್ರಹಗಳನ್ನು ಹೊಂದದೆ, ಪತ್ರದಲ್ಲಿನ ಮಾಹಿತಿಗಳನ್ನು ನಾನು ಪಾಲಿಸುತ್ತೇನೆ’ ಎಂದು ಮನೆ ತೆರವು ಮಾಡುವ ಭರವಸೆ ನೀಡಿದ್ದಾರೆ.

ಸಂಸತ್‌ ಸದಸ್ಯತ್ವ ಕಳೆದುಕೊಂಡ ವ್ಯಕ್ತಿಗಳು ಸರ್ಕಾರದ ವತಿಯಿಂದ ಅಧಿಕೃತವಾಗಿ ನೀಡಿರುವ ನಿವಾಸವನ್ನು 1 ತಿಂಗಳೊಳಗೆ ಖಾಲಿ ಮಾಡಬೇಕು ಎಂಬ ನಿಯಮವಿದೆ. ಆದರೆ ಹೆಚ್ಚು ಸಮಯ ಬಂಗಲೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವಂತೆ ಸಕಾರಣಗಳೊಂದಿಗೆ ಕೋರಿಕೆ ಸಲ್ಲಿಸುವ ಅವಕಾಶವೂ ಇದೆ. ಆದರೆ ರಾಹುಲ್‌ ಅಂಥ ವಿಸ್ತರಣೆ ಕೋರಿಲ್ಲ.

Follow Us:
Download App:
  • android
  • ios